ADVERTISEMENT

ವಿಜಯಪುರ: ಭೂಮಿಯೊಳಗೆ ಭಾರೀ ಸ್ಪೋಟ, ಬೆಚ್ಚಿ ಬಿದ್ದ ಜನ

ಒಂದು ತಿಂಗಳಿಂದ ಆಗಾಗ ಕಂಪಿಸುತ್ತಿರುವ ಭೂಮಿ; ಮೂಲ ಪತ್ತೆಗೆ ಜಿಲ್ಲಾಡಳಿತ ಹೆಣಗಾಟ

ಬಸವರಾಜ ಸಂಪಳ್ಳಿ
Published 31 ಅಕ್ಟೋಬರ್ 2020, 19:30 IST
Last Updated 31 ಅಕ್ಟೋಬರ್ 2020, 19:30 IST
ಪಿ.ಸುನೀಲ್‌ ಕುಮಾರ್‌
ಪಿ.ಸುನೀಲ್‌ ಕುಮಾರ್‌   

ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಮಲಘಾಣ, ಮಸೂತಿ, ಕಲಗುರ್ಕಿ ಮತ್ತು ತಳೇವಾಡ ಹಾಗೂ ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಒಂದು ತಿಂಗಳಿನಿಂದ ನಿರಂತರವಾಗಿ ಭೂಮಿಯೊಳಗಿಂದ ಭಾರೀ ಸ್ಪೋಟದ ಶಬ್ಧ ಕೇಳಿಬರುತ್ತಿದೆ.

ಸ್ಪೋಟದ ಬಳಿಕ ಐದಾರು ಸೆಕೆಂಡ್‌ ಭೂಮಿ ಕಂಪಿಸುತ್ತಿರುವುದರಿಂದ ಅನೇಕರ ಮನೆಗಳಲ್ಲಿ ಪಾತ್ರೆ, ಪಗಡೆಗಳು ಬಿದ್ದಿವೆ. ಕೆಲವು ಮಣ್ಣಿನ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರಿಂದ ತೀವ್ರ ಆತಂಕಕ್ಕೆ ಒಳಗಾಗಿರುವ ಜನರು ಮನೆ ಬಿಟ್ಟು ಹೊರಗೆ ಓಡಿ ಬರುತ್ತಿದ್ದಾರೆ.

ಆರಂಭದಲ್ಲಿ ಎರಡು, ಮೂರು ದಿನಕ್ಕೊಮ್ಮೆ ಘಟಿಸುತ್ತಿದ್ದ ಸ್ಫೋಟ, ಭೂಕಂಪನ ಇದೀಗ ಪ್ರತಿದಿನ ನಡೆಯುತ್ತಿದೆ. ಸ್ಪೋಟದ ಶಬ್ಧ, ಭೂಮಿ ಕಂಪಿಸುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಐದಾರು ಹಳ್ಳಿಗಳ ಜನರು ಭಯಭೀತರಾಗಿದ್ದು, ರಾತ್ರಿ ವೇಳೆ ಮನೆಯಲ್ಲಿ ಮಲಗಲು ಅಂಜುತ್ತಿದ್ದಾರೆ. ಮುಂದೇನಾಗುತ್ತದೆಯೋ ಎಂಬ ಭಯ ಆವರಿಸಿದೆ.

ADVERTISEMENT

ಸಮೀಪವೇ ಕೂಡಗಿ ಉಷ್ಣ ವಿದ್ಯುತ್‌ ಸ್ಥಾವರ(ಎನ್‌ಟಿಪಿಸಿ) ಮತ್ತು ಆಲಮಟ್ಟಿ ಜಲಾಶಯವೂ ಇರುವುದರಿಂದ ಆತಂಕ ಹೆಚ್ಚಳವಾಗಿದೆ.

ಮಹಾರಾಷ್ಟ್ರದ ಲಾತೂರಿನಲ್ಲಿ ಈ ಹಿಂದೆ ಭೂಕಂಪನವಾದಾಗ ಹಾಗೂ2009ರಲ್ಲಿ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಇದೇ ರೀತಿ ಅನುಭವವಾಗಿತ್ತು ಎಂದು ಮಲಘಾಣ ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೂಡಗಿ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಕಲ್ಲಿದ್ದಲು ಬಳಕೆಯಿಂದ ಉತ್ಪತ್ತಿಯಾಗುತ್ತಿರುವ ಹಾರುಬೂದಿಯನ್ನು ಸಂಗ್ರಹಿಸಲು ಸುಮಾರು 900 ಎಕರೆ ಪ್ರದೇಶದಲ್ಲಿ ಬೃಹದಾಕಾರದ ಹೊಂಡವನ್ನು ನಿರ್ಮಿಸಲಾಗುತ್ತಿದ್ದು, ಇದರ ಪರಿಣಾಮ ಸ್ಫೋಟ ಹಾಗೂ ಭೂ ಕಂಪನದ ಅನುಭವವಾಗುತ್ತಿರಬಹುದು’ ಎಂದು ಮಲಘಾಣ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಘಟನೆಗೆ ನಿಖರ ಕಾರಣವೇನು ಎಂಬುದು ಪತ್ತೆ ಹಚ್ಚಲು ಜಿಲ್ಲಾಡಳಿತ ಹೆಣಗಾಡುತ್ತಿದೆ.

ಗಂಭೀರವಾಗಿ ಪರಿಗಣಿಸಿ:‘ಶನಿವಾರ ಬೆಳಿಗ್ಗೆ 10.47ಕ್ಕೆ ಭಾರಿ ಸ್ಪೋಟದ ಸದ್ದು ಕೇಳಿತು. ಒಂದು ಕ್ಷಣಕ್ಕೆ ಇಡೀ ಮನೆಯೇ ಜೋರಾಗಿ ನಡುಗಿದಂತಾಯಿತು. ಮನೆಯಲ್ಲಿನ ಪಾತ್ರೆ, ಪಗಡೆಗಳ ಸದ್ದಾಯಿತು. ಇದರಿಂದ ಕೆಲ ಹೊತ್ತು ಗಾಬರಿಯಾದೆ’ ಎಂದು ಮಲಘಾಣ ನಿವಾಸಿ ಮಹಾಂತೇಶ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾಡಳಿತ, ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮುಂದೆ ಆಗುವ ಅನಾಹುತದ ಕುರಿತು ಜನತೆಗೆ ತಿಳಿವಳಿಕೆ ನೀಡಬೇಕು’ ಎಂದು ಮನವಿ ಮಾಡಿದರು.

ರಿಕ್ಟರ್‌ ಮಾಪಕದಲ್ಲಿ ದಾಖಲಾಗಿಲ್ಲ:‘ಭೂಕಂಪನವಾಗಿರುವ ಬಗ್ಗೆ ರಿಕ್ಟರ್‌ ಮಾಪಕದಲ್ಲಿ ದಾಖಲಾಗಿಲ್ಲ. ಆದರೆ, ಯಾವ ಕಾರಣಕ್ಕೆ ಸ್ಪೋಟದ ಶಬ್ಧ ಕೇಳಿಬರುತ್ತಿದೆ. ಭೂಮಿ ಏಕೆ ಕಂಪಿಸುತ್ತಿದೆ ಎಂಬುದು ದೃಢವಾಗಿಲ್ಲ’ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಘಟನೆ ಕುರಿತುಅಧ್ಯಯನ ಮಾಡಿ, ಜಂಟಿ ತನಿಖಾ ವರದಿ ಕೊಡುವಂತೆ ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳಿಗೆ ಹಾಗೂ ಕೊಲ್ಹಾರ ತಹಶೀಲ್ದಾರ್‌ಗೆ ಸೂಚಿಸಲಾಗಿತ್ತು. ಅವರು ಈಗಾಗಲೇ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರನ್ನು ಮಾತನಾಡಿಸಿ, ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆದರೆ, ಕಾರಣ ತಿಳಿದುಬಂದಿಲ್ಲ’ ಎಂದರು.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರು ಹಾಗೂಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗದ ಆಯುಕ್ತರೊಂದಿಗೆ ಈ ಸಂಬಂಧ ಖುದ್ದು ಮಾತನಾಡಿ, ಸ್ಥಳ ಪರಿಶೀಲಿಸಿ, ವರದಿ ನೀಡುವಂತೆ ಕೋರಿದ್ದೇನೆ’ ಎಂದು ಹೇಳಿದರು.

***

ವೈಜ್ಞಾನಿಕ ಪರಿಶೀಲನೆ ಸಂಬಂಧ ರಾಜ್ಯ ನೈಸರ್ಗಿಕ ವಿಕೋಪದ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳ ತಂಡವನ್ನು ಕೂಡಲೇ ಸ್ಥಳಕ್ಕೆ ಕಳುಹಿಸುವಂತೆ ಪತ್ರ ಬರೆಯಲಾಗಿದೆ.

– ಪಿ.ಸುನೀಲ್‌ಕುಮಾರ್‌, ಜಿಲ್ಲಾಧಿಕಾರಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.