ADVERTISEMENT

ಇಂಡಿ | ಕೆಸರುಗದ್ದೆಯಂತಾದ ರಸ್ತೆ: ಪರದಾಟ

ಸರ್ಕಾರಿ ಪ್ರೌಢಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸ್ಥಿತಿ

ಎ.ಸಿ.ಪಾಟೀಲ
Published 16 ಜೂನ್ 2025, 6:38 IST
Last Updated 16 ಜೂನ್ 2025, 6:38 IST
ಇಂಡಿ ಪಟ್ಟಣದ ಮಹಾವೀರ ವೃತ್ತದಿಂದ ಸರ್ಕಾರಿ ಪ್ರೌಢಶಾಲೆಗೆ ಹೋಗುವ ರಸ್ತೆಯಲ್ಲಿ ಮಳೆ ನೀರು ನಿಂತು, ಹೊಳೆಯಂತಾಗಿದೆ 
ಇಂಡಿ ಪಟ್ಟಣದ ಮಹಾವೀರ ವೃತ್ತದಿಂದ ಸರ್ಕಾರಿ ಪ್ರೌಢಶಾಲೆಗೆ ಹೋಗುವ ರಸ್ತೆಯಲ್ಲಿ ಮಳೆ ನೀರು ನಿಂತು, ಹೊಳೆಯಂತಾಗಿದೆ    

ಇಂಡಿ: ಪಟ್ಟಣದ ಹಿರೇಇಂಡಿ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕೆಸರು ಗದ್ದೆಯಂತಾಗಿದೆ.

ಮಳೆ ನೀರು ಚರಂಡಿಯಲ್ಲಿ ಹರಿಯದೇ ರಸ್ತೆ ಮೇಲೆಯೇ ನಿಲ್ಲುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಾಲೆಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ.

ಮಳೆ ನೀರು ಮತ್ತು ರಸ್ತೆ ಬದಿಯ ಗಟಾರದ ನೀರು ಸೇರಿಕೊಂಡು ರಸ್ತೆಯ ಮೇಲೆ ನಿಂತಿರುವುದರಿಂದ ಗಬ್ಬು ವಾಸನೆ ಹರಡುತ್ತಿದೆ. ವಿದ್ಯಾರ್ಥಿಗಳು ಮೂಗಿಗೆ ಬಟ್ಟೆ ಸುತ್ತಿಕೊಂಡು ಇದರಲ್ಲಿಯೇ ನಡೆದುಕೊಂಡು ಹೋಗಬೇಕಿದೆ.

ADVERTISEMENT

ಈ ಪ್ರೌಢಶಾಲೆಗೆ ಹೋಗಲು ಯಾವುದೇ ರೀತಿಯ ಬಸ್ಸಿನ ಸೌಕರ್ಯವಿಲ್ಲ. ಅಟೋಗಳು ಕೂಡಾ ಓಡಾಡುತ್ತಿಲ್ಲ. ಈ ರಸ್ತೆಯಲ್ಲಿ ದ್ವಿಚಕ್ರವಾಹನ ಕೂಡಾ ಹೋಗಲು ಸಾಧ್ಯವಿಲ್ಲದಂತಾಗಿದೆ. ವಿದ್ಯಾರ್ಥಿಗಳು ನಡೆದುಕೊಂಡೇ ಹೋಗಬೇಕು. ಮಳೆಗಾಲ ಮುಗಿಯುವವರೆಗೆ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ.

ಈಗಾಗಲೇ ಶಾಲಾ ತರಗತಿಗಳು ಆರಂಭಗೊಂಡಿದ್ದು, ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಸಮರ್ಪಕ ರಸ್ತೆ ಇಲ್ಲ. ಹಲವು ವರ್ಷಗಳಿಂದ ಇದೇ ದುಸ್ಥಿತಿ ಇದೆ. ಈ ಬಗ್ಗೆ ಕಳೆದ ನಾಲ್ಕಾರು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಮನವಿ ಮಾಡುತ್ತಾ ಬಂದಿದ್ದಾರೆ. ಆದರೂ ಕೂಡಾ ಇಲ್ಲಿಯವರೆಗೆ ಯಾವುದೇ ಕ್ರಮ ಜರುಗಿಸಿಲ್ಲ.

ಪುರಸಭೆಯವರು ರಸ್ತೆ ರಿಪೇರಿ ಗೋಜಿಗೆ ಹೋಗಿಲ್ಲ. ಹೀಗಾಗಿ ಆ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ 400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಕೂಡಲೇ ಈ ರಸ್ತೆಗೆ ಸಂಬಂಧಪಟ್ಟವರು ತಾತ್ಪೂರ್ತಿಕವಾಗಿಯಾದರೂ ಗರಸು ಹಾಕಿಸಿ ವಿದ್ಯಾರ್ಥಿಗಳು ನಡೆದುಕೊಂಡು ಹೋಗುವಂತೆ ರಸ್ತೆ ನಿರ್ಮಿಸಬೇಕು ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಬಹಳ ವರ್ಷಗಳಿಂದಲೂ ರಸ್ತೆ ಸಮಸ್ಯೆ ಇದೆ. ಮಳೆಗಾಲದಲ್ಲಿ ಮಕ್ಕಳು, ಶಿಕ್ಷಕರು ಶಾಲೆಗೆ ಬಂದು ಹೋಗಲು ಸಾಕಷ್ಟು ತೊಂದರೆಯಾಗುತ್ತಿದೆ. ಉತ್ತಮ ರಸ್ತೆ ಮಾಡುವಂತೆ ಪುರಸಭೆಯವರಿಗೆ ಮನವಿ ಮಾಡಿಕೊಂಡಿದ್ದೇವೆ. ಆದರೆ, ರಸ್ತೆ ನಿರ್ಮಾಣ ಇನ್ನೂ ಆಗಿಲ್ಲ ಎಂದು ಬಹುತೇಕ ಶಿಕ್ಷಕರು ಬೇಸರ ವ್ಯಕ್ತಪಡಿಸಿದರು.

ರಸ್ತೆಗೆ ಗರಸು ಹಾಕಿಸಿ ಸಂಚಾರ ಮಾಡಲು ಯಾರಿಗೂ ತೊಂದರೆಯಾಗದಂತೆ ಕ್ರಮ ಕೈಗೊಂಡು ಅನುಕೂಲ ಕಲ್ಪಿಸುತ್ತೇನೆ.

-ಸಿದರಾಯ ಕಟ್ಟಿಮನಿ ಮುಖ್ಯಾಧಿಕಾರಿಪುರಸಭೆ ಇಂಡಿ

- ಅಧಿಕಾರಿಗಳ ವಿರುದ್ಧ ಆಕ್ರೋಶ  ‘ನಾನು ಮೂರು ವರ್ಷಗಳಿಂದ ಇದೇ ಶಾಲೆಯಲ್ಲಿ ಕಲಿಯುತ್ತಿದ್ದೇನೆ. ಆವಾಗಿನಿಂದಲೂ ಈ ರಸ್ತೆ ಹೀಗೇ ಇದೆ. ಯಾರೂ ರಸ್ತೆ ನಿರ್ಮಾಣ ಮಾಡಿಲ್ಲ. ಇದು ಸರ್ಕಾರಿ ಶಾಲೆ ಇಲ್ಲಿಗೆ ಅಧಿಕಾರಿಗಳು ರಾಜಕಾರಣಿಗಳ ಮಕ್ಕಳು ಬರಲ್ಲ. ನಮ್ಮಂತಹ ಬಡ ವಿದ್ಯಾರ್ಥಿಗಳೇ ಬರಬೇಕು. ಹೀಗಾಗಿ ಬೇರೆಯವರ ಮಕ್ಕಳ ಕಷ್ಟ ರಾಜಕಾರಣಿಗಳು ಅಧಿಕಾರಿಗಳಿಗೆ ಅರ್ಥವಾಗಲ್ಲ’ ಎಂದು ವಿದ್ಯಾರ್ಥಿ ಮಲ್ಲಿಕಾರ್ಜುನ ಗಾಣಿಗೇರ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.