ADVERTISEMENT

ವಚನಕಾರರಿಗೆ ಸಿಗದ ಆದ್ಯತೆ : ಉಪ್ಪಿನ ಬೇಸರ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 15:18 IST
Last Updated 30 ಜುಲೈ 2023, 15:18 IST
ಶಿವಕುಮಾರ ಉಪ್ಪಿನ
ಶಿವಕುಮಾರ ಉಪ್ಪಿನ   

ವಿಜಯಪುರ: ಇಲ್ಲಿ ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ವಚನಕಾರರ ಒಳಗೊಳ್ಳುವಿಕೆ ಇಲ್ಲದಿರುವುದು ನೋವಿನ ಸಂಗತಿ ಎಂದು ಬರಹಗಾರ ಹಾಗೂ ಬಸವ ಪ್ರತಿಷ್ಠಾನದ ಉಪಾಧ್ಯಕ್ಷ ಶಿವಕುಮಾರ ಉಪ್ಪಿನ ಬೇಸರ ವ್ಯಕ್ತಪಡಿಸಿದ್ದಾರೆ.

ಬಸವಾದಿ ಶರಣರು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ನಿಮ್ನ ವರ್ಗಕ್ಕಾಗಿಯೇ ಚಳವಳಿ ರೂಪಿಸಿ ಜೀವ ತೇಯ್ದು, ಪ್ರಾಣವನ್ನೇ ಕೊಟ್ಟವರು. ಕೆಳವರ್ಗದಿಂದ ರೂಪುಗೊಂಡ ಕಲ್ಯಾಣ ಕ್ರಾಂತಿಯ ನೆರಳು ಈ ಸಮ್ಮೇಳನದ ಮಾತು, ಗೋಷ್ಠಿ ಕೊನೆಗೆ ಚರ್ಚೆಯ ಮೂಲಕವಾದರೂ ಬೀಳಬೇಕಿತ್ತು ಎಂದು ಹೇಳಿದ್ದಾರೆ.

ಸಮ್ಮೇಳನದಲ್ಲಿ ಈ ಸಂಬಂಧ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಅರ್ಜುನ ಗೊಳಸಂಗಿ ಅವರಿಗೆ ಮನವಿ ಮಾಡಿದ ಅವರು,  ಬಸವಣ್ಣನವರು ಏನೆಲ್ಲ ಮಾಡಿದರು ಎನ್ನುವುದು ಗೊತ್ತೇ ಇದೆ. ಅವರೊಂದಿಗೆ ಹರಳಯ್ಯ, ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ ಸೇರಿದಂತೆ ಬಹುತೇಕರು ದಲಿತರೇ ಆಗಿದ್ದಾರೆ. ಅವರೆಲ್ಲ ಎಲ್ಲರಿಗೂ ಮಾತನಾಡಲು ಕೊರಳಾಗಿ ಅನುಭವ ಮಂಟಪಕ್ಕೆ ಕಾರಣರಾದವರು. ಪ್ರಜಾಪ್ರಭುತ್ವ, ಸಂವಿಧಾನದ ಅಂಶಗಳೆಲ್ಲ ವಚನಗಳಲ್ಲಿವೆ ಎಂದು ಒಪ್ಪಿತ ಮಾತಾಗಿದೆ. ಹಾಗಾಗಿ ಮುಂದಿನ ಸಮ್ಮೇಳನದಲ್ಲಾದರೂ ವಚನಗಳು, ಲಿಂಗಾಯತ ಧರ್ಮದ ಚಳವಳಿಯ ಕುರಿತು ವಿಷಯಗಳಿರಲಿ ಎಂದು ಮನವಿ ಮಾಡಿದರು.

ADVERTISEMENT

ಬಸವಾದಿ ಶರಣರನ್ನು ದಲಿತ ಸಮುದಾಯದವರಾದಿಯಾಗಿ ಯಾರೂ ಮರೆಯುವಂತಿಲ್ಲ. ತುಳಿತಕ್ಕೊಗಾದವರೆಲ್ಲ ದಲಿತರೇ ಆಗಿದ್ದಾರೆ. ಅದಕ್ಕೇ ಬಸವಣ್ಣ, 'ಅಪ್ಪನು ನಮ್ಮ ಮಾದಾರ ಚನ್ನಯ್ಯ..' ಎಂದು ತಾನೇ ಕಟ್ಟ ಕಡೆಯ ವ್ಯಕ್ತಿಯಾಗಿ ಮಿಡಿದಿದ್ದಾರೆ ಎಂದು ಹೇಳಿದರು.

ಹೆಣ್ಣುಮಕ್ಕಳ ಪ್ರಾತಿನಿಧ್ಯದ ಕೊರತೆಯೂ ಸಮ್ಮೇಳನದಲ್ಲಿತ್ತು. ಗೋಷ್ಠಿಗಳಲ್ಲಿ ದಲಿತ ಮಹಿಳೆಯರ ಸಂಖ್ಯೆ ಬಹುತೇಕ ಕಡಿಮೆಯಾಗಿತ್ತು. ಅನೇಕ ಮಹಿಳೆಯರು ದಲಿತ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದು, ಅವರೆಲ್ಲರನ್ನು ಇಂತಹ ಸಮ್ಮೇಳನಗಳು ಗುರುತಿಸಲಿ. ಸತ್ಯಕ್ಯನಂತಹ ಅನೇಕ ವಚನಕಾರ್ತಿಯರನ್ನೂ ನಾವು ಮರೆಯಬಾರದು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.