ವಿಜಯಪುರ: ‘ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣದ ಮತದಾರರು ತಕ್ಕಪಾಠ ಕಲಿಸುತ್ತಾರೆ‘ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಅವರಿಗೆ ಬಿಜೆಪಿ- ಜೆಡಿಎಸ್ ಮೈತ್ರಿ ಟಿಕೆಟ್ ಕೊಟ್ಟರೆ ನಮ್ಮ ಪಕ್ಷ ಉಳಿಯುತ್ತಾ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಆ ಪಕ್ಷ (ಜೆಡಿಎಸ್) ಎಲ್ಲಿದೆ ಉಳಿಯೋಕೆ?’ ಎಂದು ಪ್ರಶ್ನಿಸಿದರು.
‘ಇವರನ್ನು ಜನ ಎಷ್ಟು ಅಂತಾ ಸಹಿಸಿಕೊಳ್ಳುತ್ತಾರೆ. ರಾಮನಗರ ಇತ್ತು, ರಾಮನಗರಕ್ಕೆ ರಾಜೀನಾಮೆ ಕೊಟ್ಟರು. ಈಗ ಸೋತಿದ್ದಾರೆ. ಚನ್ನಪಟ್ಟಣಕ್ಕೆ ಜನ ಆಯ್ಕೆ ಮಾಡಿದ್ದರು. ಚನ್ನಪಟ್ಟಣ ಜನರನ್ನು ಕೇಳಿ, ಅನುಮತಿ ಪಡೆದು ಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ರಾ..? ತಮ್ಮ ಮನಸ್ಸಿಗೆ ಬಂದಂಗೆ ಮಾಡಿದ್ದಾರೆ’ ಎಂದು ಕುಟುಕಿದರು.
ಜಾತಿ ಗಣತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಜಾತಿ ಗಣತಿ ಜಾರಿ ಕುರಿತು ಪ್ರತಿಕ್ರಿಯಿಸಿದ ಅವರು, ಜಾತಿಗಣತಿ ಜಾರಿ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಜಾತಿ ಗಣತಿ ಜಾರಿಯಾಗಬೇಕಿತ್ತು. ಆದರೇ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಕುರಿತು ಗಮನಹರಿಸಲಿಲ್ಲ ಎಂದರು.
‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆಶಯದಂತೆ ಜಾತಿಗಣತಿ ಅನುಷ್ಠಾನ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.