ADVERTISEMENT

ಎಚ್.ಎಸ್.ಅನುಪಮಾ ಅವರ 'ಮಾನಸಿಕ ಆರೋಗ್ಯ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 13:46 IST
Last Updated 29 ಜುಲೈ 2021, 13:46 IST
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮಹಿಳೆ, ಸಂತಾನೋತ್ಪತ್ತಿ ಮತ್ತು ಮಾನಸಿಕ ಆರೋಗ್ಯ’ ಪುಸ್ತಕವನ್ನು ಪ್ರೊ.ಶಕುಂತಲಾ ಶೆಟ್ಟರ್, ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಬಿಡುಗಡೆಗೊಳಿಸಿದರು
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮಹಿಳೆ, ಸಂತಾನೋತ್ಪತ್ತಿ ಮತ್ತು ಮಾನಸಿಕ ಆರೋಗ್ಯ’ ಪುಸ್ತಕವನ್ನು ಪ್ರೊ.ಶಕುಂತಲಾ ಶೆಟ್ಟರ್, ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಬಿಡುಗಡೆಗೊಳಿಸಿದರು   

ವಿಜಯಪುರ: ನಮ್ಮ ಇಂದಿನ ಸಮಾಜ ಮಹಿಳೆಯರ ಮೇಲೆ ಒತ್ತಡವನ್ನು ಹೇರುತ್ತಿದೆ. ಇದರಿಂದಾಗಿ ಮಹಿಳೆಯರು ಅನೇಕ ಮಾನಸಿಕ ಒತ್ತಡಗಳಿಗೆ ಒಳಗಾಗುತ್ತಿದ್ದಾರೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಶಕುಂತಲಾ ಶೆಟ್ಟರ್ ಹೇಳಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶ್ರೀಮತಿ ಯಶೋಧರಮ್ಮ ದಾಸಪ್ಪ ದತ್ತಿ ಪೀಠದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮಹಿಳೆ, ಸಂತಾನೋತ್ಪತ್ತಿ ಮತ್ತು ಮಾನಸಿಕ ಆರೋಗ್ಯ’ ಎಂಬ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಆರೋಗ್ಯಕರ ಬದಲಾವಣೆ ತರುವ ನಿಟ್ಟಿನಲ್ಲಿ ಎಚ್.ಎಸ್.ಅನುಪಮಾ ಅವರ ಉಪನ್ಯಾಸ ಮಾಲಿಕೆಗಳನ್ನು ಒಳಗೊಂಡ ಪುಸ್ತಕ ರೂಪದಲ್ಲಿ ಹೊರತರುತ್ತಿರುವುದು ಸಂತಸದ ವಿಷಯ.ತಮ್ಮ ತಿಳಿವಳಿಕೆ, ಜ್ಞಾನ ಹಾಗೂ ವೃತ್ತಿ ಅನುಭವದಿಂದ ಈ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕ ಈಗ ಸ್ನಾತಕೋತ್ತರ ಪದವಿ ಓದುತ್ತಿರುವ ಎಲ್ಲ ವಿದ್ಯಾರ್ಥಿನಿಯರಿಗೆ ಅತ್ಯಂತ ಉಪಯುಕ್ತವಾಗಿದೆ ಎಂದರು.

ADVERTISEMENT

ದೈಹಿಕ ಸಮಸ್ಯೆ, ಒತ್ತಡ, ಖಿನ್ನತೆಯಿಂದ ಮಹಿಳೆಯ ಮಾನಸಿಕ ಆರೋಗ್ಯದ ಮೇಲೆ ಅನೇಕ ಪರಿಣಾಮಗಳು ಬೀರುತ್ತಿವೆ. ಈ ನಿಟ್ಟಿನಲ್ಲಿ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಈ ಪುಸ್ತಕ ಮಹತ್ವದ್ದಾಗಿದೆ ಎಂದರು.

ಹೊನ್ನಾವರ ತಾಲ್ಲೂಕಿನ ಕವಲಕ್ಕಿಯ ಸ್ರೀ ರೋಗ ತಜ್ಞೆ ಡಾ.ಎಚ್.ಎಸ್.ಅನುಪಮಾ ಅವರು ಆನ್‍ಲೈನ್ ಮುಖಾಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಮಾತನಾಡಿ, ಮಾನವ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿ ಹಿನ್ನೆಲೆಯಲ್ಲಿ ಮಹಿಳೆಯರ ಆರೋಗ್ಯ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹಲವಾರು ನೀತಿಗಳು, ನಮ್ಮ ಸುತ್ತಮುತ್ತಲಿನ ಪರಿಸರ, ಆಹಾರ, ಸಾಮಾಜಿಕ ಅಂಶಗಳು, ಆರ್ಥಿಕ ಸ್ಥಿತಿಗತಿ, ಹೀಗೆ ಪ್ರತಿಯೊಂದು ಮಹಿಳೆಯರ ಆರೋಗ್ಯ ಮೇಲೆ ಪ್ರಭಾವ ಬೀರುತ್ತವೆ. ಆದ್ದರಿಂದ ನಮ್ಮ ಆರೋಗ್ಯದ ಕುರಿತು ಸರಿಯಾದ ತಿಳಿವಳಿಕೆ ಇರಬೇಕು ಎಂದರು.

ಡಾ. ಲಕ್ಷ್ಮಿದೇವಿ ವೈ, ಡಾ.ಭಾಗ್ಯಶ್ರೀ ದೊಡ್ಡಮನಿ, ಡಾ.ಮಂಜುಳಾ, ಜಕ್ಕವ್ವ ವಠಾರ ಇದ್ದರು.‌‌ಮಹಿಳಾ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರು ಹೋರಾಟ ಗೀತೆಯನ್ನು ಹಾಡಿದರು.

ಮಹಿಳಾ ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ವಿಶ್ವವಿದ್ಯಾಲಯ, ಕಾಲೇಜುಗಳಿಂದ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.