ವಿಜಯಪುರ: ‘ಸೈನ್ಯದಲ್ಲಿ ಮಹಿಳೆಯರಿಗೆ ವಿಪುಲ ಅವಕಾಶಗಳಿವೆ. ಹಲವಾರು ಮಹಿಳಾ ಸೈನ್ಯಾಧಿಕಾರಿಗಳು ಪರಾಕ್ರಮ ತೋರಿಸಿದ್ದಾರೆ. ಅವರ ಪರಿಶ್ರಮ ನಿಮಗೆ ಪ್ರೇರಣಾದಾಯಕವಾಗಿದೆ. ನಿಮಗೆ ಸೈನ್ಯದಲ್ಲಿ ಮಾನ ಸನ್ಮಾನ, ಉತ್ತಮ ವೇತನವಿದೆ. ಸೈನ್ಯ ಸೇರಲು ಸಿದ್ಧರಾಗಿ’ ಎಂದು ಸೇನಾ ನಿವೃತ್ತ ಉಪ ಮುಖ್ಯಸ್ಥ ರಮೇಶ ಹಲಗಲಿ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಆಯೋಜಿಸಿದ್ದ 22ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಾಮಾಣಿಕತೆ, ಕಾರ್ಯಶೀಲತೆ ಮತ್ತು ಸಾಧನೆ ಮುಂತಾದ ಮೌಲ್ಯಗಳನ್ನು ಪಾಲನೆ ಮಾಡಿದಾಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ’ ಎಂದರು.
‘ಇಂದಿನ ಯುವ ಜನಾಂಗವೇ ಮಾದರಿ ಭಾರತದ ನಿರ್ಮಾತೃಗಳು. ನಿಮ್ಮ ಶಕ್ತಿ, ಸಾಮರ್ಥ್ಯ, ಪ್ರತಿಭೆಯ ಮೂಲಕ ಗುರಿ ಸಾಧಿಸಲು ಶ್ರಮಿಸಬೇಕು’ ಎಂದರು.
ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ‘ಮಹಿಳಾ ವಿವಿ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ಅನೇಕರು ಶ್ರಮಿಸಿದ್ದಾರೆ. ಅವರೆಲ್ಲರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ’ ಎಂದರು.
ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ. ಚಂದ್ರಶೇಖರ ಮಾತನಾಡಿ, ‘ವಿವಿಧ ಕ್ಷೇತ್ರಗಳಲ್ಲಿ ನಮ್ಮ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ತಾವು ತೋರಿಸಿರುವ ಸಾಧನೆ, ಶ್ರದ್ಧೆ ಮತ್ತು ಸಮರ್ಪಣೆಯಿಂದ ವಿಶ್ವವಿದ್ಯಾನಿಲಯದ ಹೆಸರಿಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ’ ಎಂದು ತಿಳಿಸಿದರು.
ಮಹಿಳಾ ವಿವಿಯ ನಿವೃತ್ತ ಬೋಧಕೇತರ ಸಿಬ್ಬಂದಿ ಶ್ರೀದೇವಿ ಬಂಡಗಾರ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸಾಧನೆಗಳನ್ನು ಮಾಡಿದ ಬೋಧಕ-ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.
ಶ್ರೇಷ್ಠ ಶೈಕ್ಷಣಿಕ ಪ್ರಯಾಣ
‘ಈ ಭಾಗದ ಮಹಿಳೆಯರಿಗೆ ಉನ್ನತ ಶಿಕ್ಷಣ ನೀಡುವ ಮಹತ್ತ್ವಾಕಾಂಕ್ಷೆಯಿಂದ ಸ್ಥಾಪಿತವಾದ ಮಹಿಳಾ ವಿ.ವಿ ತನ್ನ 22 ವರ್ಷದ ಶ್ರೇಷ್ಠ ಶೈಕ್ಷಣಿಕ ಪ್ರಯಾಣ ನೆರವೇರಿಸುತ್ತಿದೆ’ ಎಂದು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ. ಟಿ ಹೇಳಿದರು. ‘ಆರಂಭದಲ್ಲಿ ಕೇವಲ 260 ವಿದ್ಯಾರ್ಥಿನಿಯರೊಂದಿಗೆ ಪ್ರಾರಂಭವಾದ ವಿವಿ ತನ್ನ ನಿಷ್ಠೆ ಗುಣಮಟ್ಟದ ಶಿಕ್ಷಣ ಹಾಗೂ ಸಾಮಾಜಿಕ ಬದ್ಧತೆಯ ಮೂಲಕ ಇಂದು 4000 ರಿಂದ 5000 ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.