ADVERTISEMENT

ಆನೆಕಾಲು ರೋಗ ನಿಯಂತ್ರಣಕ್ಕೆ ಸಲಹೆ

ಸೆ.27ರಿಂದ ಅ.11ರ ವರೆಗೆ ಸಾಮೂಹಿಕ ಔಷಧ ವಿತರಣೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 11:10 IST
Last Updated 24 ಸೆಪ್ಟೆಂಬರ್ 2020, 11:10 IST
ಕೋವಿಡ್-19ಗೆ ಸಂಬಂಧಪಟ್ಟ  ಮುಖ್ಯಮಂತ್ರಿಗಳ ಸಂದೇಶವುಳ್ಳ ಮಾಹಿತಿ, ಆನೆಕಾಲು ರೋಗ ಪ್ರಚಾರ ಸಾಮಗ್ರಿಗಳನ್ನು  ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌  ಬಿಡುಗಡೆಗೊಳಿಸಿದರು
ಕೋವಿಡ್-19ಗೆ ಸಂಬಂಧಪಟ್ಟ  ಮುಖ್ಯಮಂತ್ರಿಗಳ ಸಂದೇಶವುಳ್ಳ ಮಾಹಿತಿ, ಆನೆಕಾಲು ರೋಗ ಪ್ರಚಾರ ಸಾಮಗ್ರಿಗಳನ್ನು  ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌  ಬಿಡುಗಡೆಗೊಳಿಸಿದರು   

ವಿಜಯಪುರ: ಸಿಂದಗಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳಲ್ಲಿ ಸೆ.27 ರಿಂದ ಅ.11ರ ವರೆಗೆ ಆನೆಕಾಲು ರೋಗಕ್ಕೆ ಸಂಬಂಧಿಸಿದಂತೆ ಸಾಮೂಹಿಕ ಔಷಧ ನುಂಗಿಸುವ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆನೆಕಾಲು ರೋಗ ನಿರ್ಮೂಲನೆ ಸಂಬಂಧ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿ ವರ್ಷಕ್ಕೊಮ್ಮೆ ಡಿಇಸಿ ಹಾಗೂ ಅಲ್ಬೇಂಡಜೋಲ್ ಔಷಧ ನುಂಗಿಸುವುದರಿಂದ ಆನೆಕಾಲು ರೋಗವನ್ನು ನಿಯಂತ್ರಿಸಬಹುದಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಳ್ಳಬೇಕು ಎಂದರು.

ADVERTISEMENT

ಅಂಗನವಾಡಿ ಕಾರ್ಯಕರ್ತರ ಸಹಕಾರದೊಂದಿಗೆಪ್ರತಿ ಮನೆಯ ಕುಟುಂಬಸ್ಥರಿಗೂ ಆನೆಕಾಲು ರೋಗದ ಔಷಧ ನುಂಗಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅವರು ತಿಳಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಜೇಬುನ್ನಿಸಾಬೇಗಂ ಬೀಳಗಿ, 2ರಿಂದ 5 ವರ್ಷದ ವರೆಗಿನ ಮಕ್ಕಳಿಗೆ 100 ಮಿಲಿ ಗ್ರಾಂ ಡಿಇಸಿ ಒಂದು ಮಾತ್ರೆ ಹಾಗೂ 400 ಮಿಲಿ ಗ್ರಾಂ ಅಲ್ಬೆಂಡಜಾಲ್ ಒಂದು ಮಾತ್ರೆ ನುಂಗಿಸಲಾಗುತ್ತಿದೆ ಎಂದರು.

6 ರಿಂದ 14 ವರ್ಷ ವಯಸ್ಸಿನವರಿಗೆ 200 ಮಿಲಿ ಗ್ರಾಂ ಡಿಇಸಿ 2 ಮಾತ್ರೆಗಳು ಹಾಗೂ 400 ಮಿಲಿ ಗ್ರಾಂ ಅಲ್ಬೆಂಡಜಾಲ್ ಒಂದು ಮಾತ್ರೆ ನುಂಗಿಸಲಾಗುತ್ತಿದೆ. 15 ವರ್ಷ ಮೇಲ್ಪಟ್ಟವರಿಗೆ 300 ಮಿಲಿ ಗ್ರಾಂ 3 ಡಿಇಸಿ ಮಾತ್ರೆಗಳನ್ನು ಹಾಗೂ 400 ಮಿಲಿ ಗ್ರಾಂ ಒಂದು ಅಲ್ಬೆಂಡಜಾಲ್ ಮಾತ್ರೆಯನ್ನು ನುಂಗಿಸಲಾಗುತ್ತಿದೆ ಎಂದರು.

ಎರಡು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಮತ್ತು ತೀವ್ರಕಾಯಿಲೆಯಿಂದ ನರಳುತ್ತಿರುವವರನ್ನು ಹೊರತುಪಡಿಸಿ ಎಲ್ಲರೂ ಊಟದ ನಂತರ ತಪ್ಪದೇ ಡಿಇಸಿ ಗುಳಿಗೆ ಸೇವಿಸಬಹುದು. ಬಿ.ಪಿ ಹಾಗೂ ಸಕ್ಕರೆ ಕಾಯಿಲೆ ಇದ್ದವರು ಸಹ ಔಷಧ ಸೇವಿಸಬಹುದು ಎಂದು ಹೇಳಿದರು.

ಈ ಔಷಧ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಮತ್ತು ಇದರಿಂದ ಯಾವುದೇ ತೀವ್ರ ತರವಾದ ಅಡ್ಡ ಪರಿಣಾಮಗಳಾಗುವುದಿಲ್ಲ. ಒಂದು ವೇಳೆ ಡಿಇಸಿ ಸೇವಿಸಿದವರಲ್ಲಿ ವಾಂತಿ, ವಾಕರಿಕೆ, ನಿದ್ದೆ, ತಲೆಸುತ್ತುವುದು ಕಾಣಿಸಿಕೊಳ್ಳಬಹುದು. ಆದರೆ, ಗಾಬರಿಪಡುವ ಅಗತ್ಯವಿರುವುದಿಲ್ಲ. ಇವು ತಾತ್ಕಾಲಿಕವಾಗಿದ್ದು, ಯಾವುದೇ ಚಿಕಿತ್ಸೆಯಿಲ್ಲದೆ ಗುಣವಾಗುತ್ತದೆ. ಆದರೂ ಸಹ ಆರೋಗ್ಯ ಸಹಾಯಕರಿಗೆ ಅಥವಾ ವೈದ್ಯಾಧಿಕಾರಿಗಳಿಗೆ ತಕ್ಷಣ ತಿಳಿಸಬೇಕು ಎಂದರು.

ಸೊಳ್ಳೆ ಪರದೆ ಉಪಯೋಗಿಸಿ ಆನೆಕಾಲು ರೋಗ, ಮಲೇರಿಯಾ, ಡೆಂಗಿ, ಚಿಕ್ಯೂನ್‍ಗುನ್ಯ, ಮೆದುಳು ಜ್ವರಗಳಿಂದ ರಕ್ಷಿಸಿಕೊಳ್ಳಲು ಜನರಿಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಗ್ರಾಮದಲ್ಲಿ ಸೊಳ್ಳೆ ಉತ್ಪತ್ತಿಯಾಗುವ ತಾಣಗಳನ್ನು ಗುರುತಿಸಿ ನಾಶಪಡಿಸಲು ಅಗತ್ಯಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪಸೆ, ಆರ್.ಸಿ.ಎಚ್. ಮಹೇಶ ನಾಗರಬೆಟ್ಟ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ.ಮುಕುಂದ ಗಲಗಲಿ, ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ವರಿ ಗಲಗಲಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಈರಣ್ಣ ಇಂಗಳೆ, ಸತೀಶ ತಿವಾರಿ, ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಸಂಪತ್‍ ಗುಣಾರೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.