ADVERTISEMENT

ಮಕ್ಕಳ ನೆರವಿಗಾಗಿ ಚೈಲ್ಡ್ ಲೈನ್‌ಗೆ ಕರೆ ಮಾಡಲು ಸಲಹೆ

‘ಚೈಲ್ಡ್ ಲೈನ್ 1098 ಹೆಲ್ಪ್ ಡೆಸ್ಕ್’ ಉದ್ಘಾಟಿಸಿದ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 13:25 IST
Last Updated 24 ಸೆಪ್ಟೆಂಬರ್ 2021, 13:25 IST
ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಚೈಲ್ಡ್ ಲೈನ್ 1098 ಹೆಲ್ಪ್ ಡೆಸ್ಕ್  ಅನ್ನು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್  ಉದ್ಘಾಟಿಸಿ ಮಾತನಾಡಿದರು. ಎಸ್‌.ಪಿ.ಆನಂದಕುಮಾರ್‌ ಇದ್ದಾರೆ
ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಚೈಲ್ಡ್ ಲೈನ್ 1098 ಹೆಲ್ಪ್ ಡೆಸ್ಕ್  ಅನ್ನು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್  ಉದ್ಘಾಟಿಸಿ ಮಾತನಾಡಿದರು. ಎಸ್‌.ಪಿ.ಆನಂದಕುಮಾರ್‌ ಇದ್ದಾರೆ   

ವಿಜಯಪುರ: ಜಿಲ್ಲೆಯಲ್ಲಿ ಕಳೆದು ಹೋದ, ದೌರ್ಜನ್ಯಕ್ಕೆ ಒಳಗಾದ, ಓಡಿಹೋದ, ವೈದ್ಯಕೀಯ ನೆರವು ಅಗತ್ಯವಿರುವ ಹಾಗೂ ಪೋಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳ ನೆರವಿಗಾಗಿ ಚೈಲ್ಡ್ ಲೈನ್ 1098 ಕ್ಕೆ ಕರೆ ಮಾಡಿ ಚೈಲ್ಡ್ ಹೆಲ್ಪ್ ಲೈನ್ ತಂಡವು 60 ನಿಮಿಷದೊಳಗಾಗಿ ಮಗುವಿನ ನೆರವಿಗಾಗಿ ಬರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಹೇಳಿದರು.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಚೆನ್ಹೈನ ಚೈಲ್ಡ್ ಲೈನ್ ಇಂಡಿಯಾ ಫೌಂಡೆಷನ್ ಹಾಗೂ ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಚೈಲ್ಡ್ ಲೈನ್ 1098 ಹೆಲ್ಪ್ ಡೆಸ್ಕ್’ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹದ ಬಗ್ಗೆ ಸಾರ್ವಜನಿಕರು ದೂರು ನೀಡಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಆ ಸ್ಥಳಕ್ಕೆ ಭೇಟಿ ನೀಡಿ ಬಾಲ್ಯವಿವಾಹವನ್ನು ತಡೆದು ಬಾಲ್ಯವಿವಾಹ ಮಾಡುವವರ ವಿರುದ್ಧ ಕಠಿಣ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ADVERTISEMENT

ಬಾಲ್ಯ ವಿವಾಹದ ಬಗ್ಗೆ ಅಧಿಕಾರಿಗಳು ಪಟ್ಟಣದಲ್ಲಿ ಹಾಗೂ ಹಳ್ಳಿಗಳಲ್ಲಿ ಜಾಗೃತಿಯನ್ನು ಮೂಡಿಸುವಂತಹ ಕೆಲಸಗಳನ್ನು ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್, ಮಕ್ಕಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಅನಾಥ ಮಕ್ಕಳು ಕಂಡುಬಂದಲ್ಲಿ ಚೈಲ್ಡ್ ಹೆಲ್ಪ್‌ಲೈನ್‌ 1098 ಗೆ ಕರೆ ಮಾಡಬೇಕು ಎಂದರು.

ಶಿಕ್ಷಕರು ಶಾಲೆಗಳಲ್ಲಿ ಬಾಲ್ಯ ವಿವಾಹದ ಬಗ್ಗೆ ತಿಳಿಹೇಳಬೇಕು ಹಾಗೂ ಪಾಲಕರು ಕೂಡ ಮನೆಗಳಲ್ಲಿ ಮಕ್ಕಳಿಗೆ ನೈತಿಕತೆಯ ಬಗ್ಗೆ ತಿಳಿಹೇಳಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ಇಲಾಖೆಯು ಮಕ್ಕಳ ಸಮಸ್ಯೆಗಳ ಪರಿಹಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ. ಚವ್ಹಾಣ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶ್ರೀಧರ್ ಕುಲಕರ್ಣಿ, ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ನಿರ್ದೇಶಕ ವಾಸುದೇವ ತೋಳಬಂದಿ, ಚೈಲ್ಡ್ ಲೈನ್ ಇಂಡಿಯಾ ಫೌಂಡೇಶನ್ ರಾಜ್ಯ ಯೋಜನಾ ಮುಖ್ಯಸ್ಥರಾದ ಚಿತ್ರಾ ಅಂಚನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.