
ಬಸವನಬಾಗೇವಾಡಿ: ‘ಮಕ್ಕಳಲ್ಲಿ ಸದ್ಗುಣ ಬೆಳೆಸಿದರೆ ಮುಂದೆ ಅವರು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ’ ಎಂದು ಯುವ ಮುಖಂಡ ಸತ್ಯಜೀತ್ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಸಂಜೆ ಬಸವೇಶ್ವರ ದೇವಾಲಯದ ಅಂತರರಾಷ್ಟ್ರೀಯ ಶಾಲೆಯಲ್ಲಿ ಆಯೋಜಿಸಿದ್ದ 14ನೇ ವಾರ್ಷಿಕೋತ್ಸವದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯೆ ಯಾರೂ ಕದಿಯಲಾಗದ ಆಸ್ತಿ. ಮಕ್ಕಳಿಗೆ ಅಂಕ ಗಳಿಕೆಯಷ್ಟೇ ಮುಖ್ಯವಲ್ಲ. ಕಲಿತ ವಿದ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಶ್ರೇಷ್ಠ ವ್ಯಕ್ತಿಗಳಾಗಲು ಸಾಧ್ಯ’ ಎಂದು ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ‘ಈ ಶಾಲಾ ಸಮಿತಿ ಅಧ್ಯಕ್ಷನಾದ ಸಮಯದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲ ಹಿರಿಯರು, ಬೋಧಕ, ಬೋಧಕೇತರ ಸಿಬ್ಬಂದಿ ಸಹಕಾರ ನೀಡಿದ್ದಾರೆ’ ಎಂದರು.
ಸಚಿವ ಶಿವಾನಂದ ಪಾಟೀಲರು ಈ ಶಾಲೆಗಾಗಿ ₹ 5 ಕೋಟಿ ಅನುದಾನ ಮೀಸಲಿಟ್ಟು ಪಟ್ಟಣ ಹೊರವಲಯದಲ್ಲಿ 16 ಎಕರೆ ಜಾಗ ನಿಗದಿಗೊಳಿಸಿ, ಸುಸಜ್ಜಿತ ಶಾಲಾ ಕಟ್ಟಡ ಹಾಗೂ ಎಲ್ಲ ರೀತಿಯ ಮೂಲಸೌಲಭ್ಯ ಒದಗಿಸಿ ವಸತಿ ಸಹಿತ ಶಾಲೆ ನಿರ್ಮಿಸಲು ನೀಲನಕ್ಷೆ ಹಾಕಿಕೊಂಡಿದ್ದಾರೆ. ಈಗಿನ ಅಧ್ಯಕ್ಷರಾದ ಅನಿಲ ಅಗರವಾಲ ಸಹ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ‘ ಎಂದರು.
ಎಸ್‌ಬಿಟಿಐ ಶಾಲಾ ಸಮಿತಿ ಅಧ್ಯಕ್ಷ ಅನಿಲ ಅಗರವಾಲ ಅಧ್ಯಕ್ಷತೆ ವಹಿಸಿದ್ದರು. ‘ಹೊಸ ಜಾಗದಲ್ಲಿ ಶಾಲಾ ಕಟ್ಟಡ ಅಭಿವೃದ್ಧಿಗೆ, ಮೂಲ ಸೌಕರ್ಯಗಳಿಗೆ ₹ 5 ಕೋಟಿ ಅನುದಾನ ಸಾಲುವುದಿಲ್ಲ. ಇನ್ನೂ ಹೆಚ್ಚಿನ ಅನುದಾನ ಒದಗಿಸಲು ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.
ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಶಿವನಗೌಡ ಬಿರಾದಾರ ಮಾತನಾಡಿದರು. ಶಾಲೆಯ ವಿವಿಧ ವಿಭಾಗಗಳಲ್ಲಿ, ವಿಷಯವಾರು, ತರಗತಿವಾರು ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ, ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಉನ್ನತ ಶಿಕ್ಷಣ ಪೂರೈಸಿದ ಹಳೆಯ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ನೀಡಿ ಸನ್ಮಾನಿಸಿದರು.
ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ, ಶಾಲಾ ಸಮಿತಿ ಉಪಾಧ್ಯಕ್ಷ ಎಸ್.ಎಸ್.ಝಳಕಿ, ಸದಸ್ಯರಾದ ಎಂ.ಜಿ.ಆದಿಗೊಂಡ, ಎಸ್.ಎಸ್.ಎಳಮೇಲಿ, ಎಸ್.ಬಿ.ಪಾಟೀಲ, ಪಿ.ಬಿ.ರಾಯಗೊಂಡ, ಎಲ್.ಜೆ.ಮಾಲಗಾರ, ಬಿ.ಐ.ಗಣಾಚಾರಿ, ಎಂ.ಪಿ.ಮೋದಿ, ಎಸ್.ಎಸ್.ಚಿಕ್ಕೊಂಡ, ಎಲ್.ಸಿ.ಹಿಟ್ನಳ್ಳಿ ಹಾಗೂ ಪ್ರಾಂಶುಪಾಲರಾದ ರೋಹಿಣಿ ರೋಣದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.