ADVERTISEMENT

ಚುನಾವಣೆ ನಂತರ ಗ್ಯಾರಂಟಿ ಕಾರ್ಡ್‌ ಮಾಯ: ಸಂಸದ ರಮೇಶ ಜಿಗಜಿಣಗಿ

ಸಂಸದ ರಮೇಶ ಜಿಗಜಿಣಗಿಯಿಂದ ಕಾಂಗ್ರೆಸ್‌ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 14 ಜೂನ್ 2023, 13:02 IST
Last Updated 14 ಜೂನ್ 2023, 13:02 IST
ರಮೇಶ ಜಿಗಜಿಣಗಿ
ರಮೇಶ ಜಿಗಜಿಣಗಿ   

ವಿಜಯಪುರ: ನರೇಂದ್ರ ಮೋದಿ ನೇತೃತ್ವದ ಸರ್ಕಾರ ತಮ್ಮ 9 ವರ್ಷದಲ್ಲಿ ಉತ್ತಮ ಆಡಳಿತ ನೀಡಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯ ಹಾಗೂ ದೇಶದಲ್ಲಿ ಹೆಚ್ಚಿನ ಸ್ಥಾನ ಪಡೆದು ಮತ್ತೆ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೂ ಹಾಗೂ ವಿಧಾನಸಭೆ ಚುನಾವಣೆಗೆ  ಹೋಲಿಕೆ ಮಾಡಬೇಡಿ, ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿತ್ತು ಆದರೆ ಇದು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲ್ಲ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗಳು ಲೋಕಸಭೆ ಚುನಾವಣೆವರೆಗೆ ಮಾತ್ರ ಇರಲಿದ್ದು ನಂತರ ಎಲ್ಲ ಗ್ಯಾರಂಟಿಗಳು ಮಾಯವಾಗಲಿದೆ ಎಂದರು.

ಬಿಜೆಪಿ ಕೇಂದ್ರ ಸರ್ಕಾರ ತನ್ನ 9 ವರ್ಷದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದು, ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮೋದಿಗೆ ಎಷ್ಟು ಹೊಗಳಿದರು ಕಡಿಮೆ. ಲೋಕಸಭೆ ಚುನಾವಣೆಯಲ್ಲಿ ಈ ಬಾರಿಯೂ ನನಗೆ ಟಿಕೆಟ್ ನೀಡುತ್ತಾರೆ. ಆ ವಿಶ್ವಾಸ ನನಗಿದೆ. ಕೆಲ ಹೊಟ್ಟಿ ಕಿಚ್ಚಿನ ಜನರು ನನಗೆ ಟಿಕೆಟ್‌ ಸಿಗುವುದಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ADVERTISEMENT

ಮೋದಿ ನೇತೃತ್ವದ ಸರ್ಕಾರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅನೇಕ ಅಭಿವೃದ್ದಿಗಳಾಗಿದ್ದು, ಕಾಂಗ್ರೆಸ್‌ ಸರ್ಕಾರ ಕೇವಲ ಲೂಟಿ ಮಾಡುವುದನ್ನು ಬಿಟ್ಟರೆ ಮತ್ತೇನು ಮಾಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದನಂತರ ವಿದೇಶಿ ವಿನಿಮಯ 303.67 ಮಿಲಿಯನ್ ಡಾಲರ್‌ದಿಂದ 593.73 ಮಿಲಿಯನ್ ಡಾಲರ್‌ಗೆ ಹೆಚ್ಚಳವಾಗಿದೆ. ಎಫ್‌.ಡಿ.ಎಲ್ 596 ರಷ್ಟು, ಎಲ್.ಪಿ.ಜಿ ಗ್ಯಾಸ್ ಕನೆಕ್ಷನ್ 14.5 ಕೋಟಿಯಿಂದ 31.4 ಕೋಟಿಗೆ ಹೆಚ್ಳಳವಾಗಿದೆ ಎಂದರು. 

ಕಾಂಗ್ರೆಸ್‌ನ ಅಧಿಕಾರವಧಿಯಲ್ಲಿ ಮೆಟ್ರೋಗಳ ಸಂಖ್ಯೆ ಕೇವಲ 5 ನಗರಳಲ್ಲಿ ಮಾತ್ರ ಇದ್ದವು, ಮೋದಿಯವರ 9 ವರ್ಷದ ಆಡಳಿತಾವಧಿಯಲ್ಲಿ 23 ನಗರಗಳಲ್ಲಿ ಮೆಟ್ರೋ ನಿರ್ಮಾಣವಾಗಿದೆ. ಮೆಟ್ರೋ ರೈಲು ಸಂಪರ್ಕ 248 ಕಿಲೋಮಿಟರ್‌ನಿಂದ 860 ಕಿಲೋಮೀಟರ್‌ ವರೆಗೆ ಹೆಚ್ಚಿಸಲಾಗಿದೆ ಎಂದರು.

ವಿಮಾನ ನಿಲ್ದಾಣ 74 ರಿಂದ 148 ಹೆಚ್ಚಳವಾಗಿದ್ದು, ರಾಜ್ಯ ಸೇರಿದಂತೆ ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಳಕ್ಕೆ ಮೋದಿ ಅವರ ಕೊಡುಗೆ ಅಪಾರ. ದೇಶದ ಎಲ್ಲ ರೈಲು ಮಾರ್ಗಗಳನ್ನು ವಿದ್ಯುತ್‌ ಚಾಲಿತ ಮಾಡಲು ಪಣತೊಟ್ಟಿದ್ದು ಕೆಲವೆ ದಿನಗಳಲ್ಲಿ ಎಲ್ಲ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದರು.

ಕಾಂಗ್ರೆಸ್‌ ಸಮಯದಲ್ಲಿ ದೊಡ್ಡ ಹಾಗೂ ಶ್ರೀಮಂತ ಸಮಾಜದವರು ಮಾತ್ರ ಮೆಡಿಕಲ್ ಕಾಲೇಜ್ ಸೀಟು ಗಿಟ್ಟಿಸಿಕೊಳ್ಳುತ್ತಿದ್ದರು. ಆದರೆ ಈಗ ದೇಶದಲ್ಲಿ 660 ಮೆಡಿಕಲ್ ಕಾಲೇಜ್‌ಗಳು ನಿರ್ಮಾಣವಾಗಿದ್ದು, ಬಡವನ ಮಕ್ಕಳಿಗೂ ಮೆಡಿಕಲ್ ಸೀಟು ಸಿಗುವಂತಾಗಿದೆ ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಇಲಾಖೆಯಿಂದ ಜಲ್‌ ಜೀವನ್‌ ಮಿಷನ್‌ ಅಡಿ ಮನೆ ಮನೆಗಳಿಗೆ ನಳ ಜೋಡಣೆ, ಇಂಡಿ ತಾಲ್ಲೂಕಿನ ಬಹು ಹಳ್ಳಿ ಯೋಜನೆ, ಅಮೃತ ಯೋಜನೆಯಡಿ ಕುಡಿಯುವ ನೀರು ಒದಗಿಸಲು ಹಾಗೂ ನಗರದಲ್ಲಿ ಉದ್ಯಾನವನ ನಿರ್ಮಾಣಕ್ಕೆ ಅನುದಾನ ತರುವ ಕೆಲಸ ಮಾಡಿದ್ದೇನೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದರು. 

6 ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ

ನನ್ನ ಅಧಿಕಾರ ಅವಧಿಯಲ್ಲಿ ಫಂಡಾರಪುರ–ವಿಜಯಪುರ ಸೊಲ್ಲಾಪುರ–ವಿಜಯಪುರವಿಜಯಪುರ–ಹುಬ್ಬಳಿ ವಿಜಯಪುರ–ಗುಲ್ಬರ್ಗ ವಿಜಯಪುರ–ಅಂಕೇಶ್ವರ ಅಗರಖೇಡ –ವಿಜಯಪುರ ಹೀಗೆ 6 ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮಾಡಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಜಿಲ್ಲೆಯಲ್ಲಿ ರೈಲು ಮೇಲ್ಸೇತುವೆ ಕೆಳಸೇತುವೆಗಳ ನಿರ್ಮಾಣ ವಿಮಾನ ನಿಲ್ದಾಣ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ವಿವಿಧ ಕಾಮಗಾರಿ ಪ್ರಧಾನಮಂತ್ರಿ ಆವಾಸ ಯೋಜನೆ ಇಂದಿರಾಗಾಂಧಿ ಆವಾಸ್‌ ಯೋಜನೆಯಡಿ ಅನೇಕ ಮನೆಗಳನ್ನು ನಿರ್ಮಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.