ADVERTISEMENT

ಸರ್ಕಾರಿ ಕಾಲೇಜಿಗಾಗಿ ಎಐಡಿಎಸ್ಓ ಆಗ್ರಹ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 14:05 IST
Last Updated 3 ಜುಲೈ 2018, 14:05 IST
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಕಾಲೇಜು ಮಂಜೂರಾತಿಗಾಗಿ ಒತ್ತಾಯಿಸಿ ಎಐಡಿಎಸ್ಓ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಕಾಲೇಜು ಮಂಜೂರಾತಿಗಾಗಿ ಒತ್ತಾಯಿಸಿ ಎಐಡಿಎಸ್ಓ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು   

ವಿಜಯಪುರ:ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಮಹಾ ವಿದ್ಯಾಲಯ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಎಐಡಿಎಸ್ಓ ಜಿಲ್ಲಾ ಘಟಕದ ನೇತೃತ್ವದಲ್ಲಿ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಚ್.ಟಿ.ಭರತಕುಮಾರ ಮಾತನಾಡಿ, ‘ಕಳೆದ ಒಂದೂವರೆ ದಶಕದಿಂದ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜನ್ನು ಮಂಜೂರು ಮಾಡಬೇಕು ಎಂಬ ಕೂಗು ಪ್ರತಿಧ್ವನಿಸುತ್ತಿದ್ದರೂ; ಯಾವುದೇ ಪ್ರಯೋಜನವಾಗಿಲ್ಲ.

ಈ ಕುರಿತು ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯು ಕಾಳಜಿ ತೋರುತ್ತಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಪಕ್ಷ ಬೇಧ ಮರೆತು ಜಿಲ್ಲೆಯ ಜನರ ಬಹುದಿನದ ಬೇಡಿಕೆಯನ್ನು ಈಡೇರಿಸಲು ಒಟ್ಟಾಗಿ ಶ್ರಮಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ನಗರದಲ್ಲಿ ಈಗಾಗಲೇ ಸುಸಜ್ಜಿತ ಸರ್ಕಾರಿ ಆಸ್ಪತ್ರೆಯಿದೆ. ಎಂಸಿಐನ ಅವಶ್ಯಕತೆಗನುಗುಣವಾಗಿ ಬೇಕಾಗುವ ಎಲ್ಲಾ ಅವಶ್ಯಕತೆಗಳನ್ನು ಸಹ ಹೊಂದಿದೆ. ಜತೆಗೆ ರಾಜ್ಯದಲ್ಲಿಯೇ ವಿಶಾಲವಾದ ಸ್ಥಳಾವಕಾಶ ಕೂಡ ಇದೆ. ಆದ್ದರಿಂದ ಈಗಿರುವ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ವೈದ್ಯಕೀಯ ಕಾಲೇಜನ್ನು ಆರಂಭಿಸಬೇಕು. ರಾಜ್ಯ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು, ಪಾಲಕರು, ಸಾಹಿತಿಗಳು, ಶಿಕ್ಷಣ ಪ್ರೇಮಿಗಳನ್ನು ತೊಡಗಿಸಿಕೊಂಡು ಪ್ರಬಲ ಹೋರಾಟ ಮಾಡುವುದಾಗಿ’ ಎಚ್ಚರಿಕೆ ನೀಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಸುನೀಲ ಸಿದ್ರಾಮಶೆಟ್ಟಿ ಮಾತನಾಡಿ ‘ಜಿಲ್ಲೆಯು ನಿರಂತರವಾಗಿ ಬರಗಾಲಕ್ಕೆ ತುತ್ತಾಗುತ್ತಾ ಬಂದಿದೆ. ಬಹುತೇಕ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳು ಕಷ್ಟ ಪಟ್ಟು ಅಭ್ಯಾಸ ಮಾಡಿ ಮುಂದೆ ಬರಬೇಕೆಂದರೆ, ಖಾಸಗಿ ಕಾಲೇಜುಗಳಲ್ಲಿ ಡೋನೇಷನ್ ಕೊಟ್ಟು ಕಲಿಯಲು ಖಂಡಿತ ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ವಿಶೇಷ ಮುತುವರ್ಜಿ ವಹಿಸಿ ಜಿಲ್ಲೆಯಲ್ಲಿ ಒಂದು ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜು ಆರಂಭಿಸಬೇಕು’ ಎಂದು ಆಗ್ರಹಿಸಿದರು.

ಕಾವೇರಿ ರಜಪೂತ, ಸುರೇಖಾ ಕಡಪಟ್ಟಿ, ದೀಪಾ ವಡ್ಡರ, ಸದಾಶಿವ ಬಡಿಗೇರ, ತನ್ವೀರಾ ಜುಮನಾಳ, ಆನಂದ ಚವ್ಹಾಣ, ಮಂಜುನಾಥ ಹತ್ತರಕಿ, ಆಭಿಷೇಕ ಪಾಟೀಲ, ಅಕ್ಷಯ ರಾಠೋಡ, ಗಣೇಶ ಭಜಂತ್ರಿ, ಜ್ಯೋತಿ, ಕನ್ಯಾಕುಮಾರಿ, ರಂಜಿತಾ, ಲಕ್ಷ್ಮೀ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.