ADVERTISEMENT

ಮಹಿಳೆಯ, ಮಕ್ಕಳ ರಕ್ಷಣೆಗೆ ಅಕ್ಕಪಡೆ

ಯೋಜನೆಯ ವಾಹನಕ್ಕೆ ಚಾಲನೆ: ಎಸ್‌.ಪಿ. ನಿಂಬರಗಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 5:06 IST
Last Updated 16 ಜನವರಿ 2026, 5:06 IST
ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಎಸ್‌.ಪಿ ಲಕ್ಷ್ಮಣ ನಿಂಬರಗಿ ಅವರು ‘ಅಕ್ಕಪಡೆ’ಯ ವಾಹನಕ್ಕೆ ಬುಧವಾರ ಚಾಲನೆ ನೀಡಿದರು 
ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಎಸ್‌.ಪಿ ಲಕ್ಷ್ಮಣ ನಿಂಬರಗಿ ಅವರು ‘ಅಕ್ಕಪಡೆ’ಯ ವಾಹನಕ್ಕೆ ಬುಧವಾರ ಚಾಲನೆ ನೀಡಿದರು    

ವಿಜಯಪುರ: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಘನತೆ ಕಾಪಾಡುವುದು ಹಾಗೂ ಸಬಲೀಕರಣದ ಉದ್ದೇಶದಿಂದ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ‘ಅಕ್ಕಪಡೆ’ ಯೋಜನೆಯ ವಾಹನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಬುಧವಾರ ಚಾಲನೆ ನೀಡಿದರು.

ನಗರದಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಕ್ಕಪಡೆ ಯೋಜನೆಯು ರಾಜ್ಯದಾದ್ಯಂತ ಅನುಷ್ಠಾನಗೊಂಡಿದೆ. ಇದರಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯು ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತವೆ’ ಎಂದರು.

‘ಜಿಲ್ಲೆಯಲ್ಲಿ ಅಕ್ಕಪಡೆ ಸಿಬ್ಬಂದಿ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ’ ಎಂದು ಹೇಳಿದರು.

ADVERTISEMENT

‘ಸಹಾನುಭೂತಿ ಮತ್ತು ಸಮುದಾಯ ಸೇವೆಯ ಆಶಯದೊಂದಿಗೆ ಕಾರ್ಯನಿರ್ವಹಿಸುವ ಅಕ್ಕಪಡೆ, ಶೈಕ್ಷಣಿಕ ಶಕ್ತಿಯಾಗಿಯೂ ಕೆಲಸ ಮಾಡಲಿದೆ. ಸೈಬರ್ ಅಪರಾಧ, ಶಿಕ್ಷಣದ ಮಹತ್ವ, ಆತ್ಮವಿಶ್ವಾಸ, ಬಾಲ್ಯ ವಿವಾಹ ತಡೆ, ಪೋಕ್ಸೊ ಕಾಯ್ದೆ, ವಿವಿಧ ಸಹಾಯವಾಣಿ ಸೇವೆಗಳು ಹಾಗೂ ಇತರೆ ಯೋಜನೆಗಳ ಕುರಿತು ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತದೆ’ ಎಂದರು.

‘ಸಂತೆ, ದೇವಸ್ಥಾನ, ಜಾತ್ರೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ನೀಡುವಂತೆ ಅಕ್ಕಪಡೆ ಸಿಬ್ಬಂದಿಗೆ ಸೂಚಿಸಲಾಗಿದೆ. ಪಡೆಗೆ ಪ್ರತ್ಯೇಕ ವಾಹನದ ಸೌಲಭ್ಯವಿದ್ದು, ಅದರಲ್ಲಿ ಪೊಲೀಸ್ ಇಲಾಖೆಯ ವಾಹನ ಚಾಲಕ ಹಾಗೂ ಮಹಿಳಾ ಪೊಲೀಸ್ ಕಾನ್‍ಸ್ಟೆಬಲ್ ಇರುತ್ತಾರೆ’ ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ಪೊಲೀಸ್ ಇನ್‌ಸ್ಪೆಕ್ಟರ್ ವಿಠ್ಠಲ ಕೊಕಟನೂರ, ಜಿಲ್ಲಾ ಮಿಷನ್ ಸಂಯೋಜಕಿ ಭಾರತಿ ಹೊನ್ನಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹಿಳಾ ಅಧಿಕಾರಿ ದೀಪಾ ಕಾಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.