ADVERTISEMENT

ಆಲಮಟ್ಟಿ: 3 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ 

ಮುಳುಗಿದ ಜಮೀನು: ನದಿ ತೀರದ ನಿವಾಸಿಗಳಿಗೆ ಕಟ್ಟೆಚ್ಚರ ವಹಿಸಲು ಸೂಚನೆ

ಪ್ರಜಾವಾಣಿ ವಿಶೇಷ
Published 26 ಜುಲೈ 2024, 5:14 IST
Last Updated 26 ಜುಲೈ 2024, 5:14 IST
ಆಲಮಟ್ಟಿ ಜಲಾಶಯದ ಮುಂಭಾಗದ ಅರಳದಿನ್ನಿ ಗ್ರಾಮದ ಕಬ್ಬಿನ ಹೊಲಕ್ಕೆ ನುಗ್ಗಿದ ಕೃಷ್ಣಾ ನದಿ ನೀರು 
ಆಲಮಟ್ಟಿ ಜಲಾಶಯದ ಮುಂಭಾಗದ ಅರಳದಿನ್ನಿ ಗ್ರಾಮದ ಕಬ್ಬಿನ ಹೊಲಕ್ಕೆ ನುಗ್ಗಿದ ಕೃಷ್ಣಾ ನದಿ ನೀರು    

ವಿಜಯಪುರ: ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಅಪಾರ ಪ್ರಮಾಣದ ನೀರು ಆಲಮಟ್ಟಿ ಜಲಾಶಯಕ್ಕೆ ಹರಿದುಬರುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರ ಸಂಜೆಯಿಂದ 3 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ.

ಜಲಾಶಯದ ಎಲ್ಲಾ 26 ಗೇಟ್‌ಗಳನ್ನು 1.5 ಮೀಟರ್‌ ಎತ್ತರಿಸಿ ನದಿಗೆ ನೀರು ಹರಿ ಬಿಡಲಾಗುತ್ತಿದೆ. ಸಂಜೆ 6 ಕ್ಕೆ ಜಲಾಶಯಕ್ಕೆ 1,98,333 ಕ್ಯುಸೆಕ್ ಒಳಹರಿವು ಇದೆ. 123 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 88 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಭಾರಿ ಮಳೆ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಅನೇಕ ಕಡೆ ನಿತ್ಯ 17 ಸೆಂ.ಮೀ.ಗೂ ಅಧಿಕ ಮಳೆ ಸುರಿಯುತ್ತಿದೆ. ಅಲ್ಲಿನ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು, ನೀರು ಬಿಡಲಾಗುತ್ತಿದೆ. ಹೀಗಾಗಿ ಕರ್ನಾಟಕದ ಕಳ್ಳೋಳ ಬ್ಯಾರೇಜ್ ಬಳಿ ಗುರುವಾರ 1,88,742 ಕ್ಯುಸೆಕ್ ಹರಿವು ಇದೆ.

ADVERTISEMENT

ಆಲಮಟ್ಟಿ ಜಲಾಶಯದ ಹಿನ್ನೀರಿನ ಘಟಪ್ರಭಾ ನದಿಯಿಂದಲೂ ಸುಮಾರು 40,000 ಕ್ಯುಸೆಕ್ ಹರಿವು ಇದೆ. ಹೀಗಾಗಿ ಮುಂದಿನ ಮೂರ್ನಾಲ್ಕು ದಿನ ಜಲಾಶಯದ ಒಳಹರಿವು 2 ಲಕ್ಷ ಕ್ಯುಸೆಕ್ ದಾಟುವ ಸಾಧ್ಯತೆಯಿದೆ.

ಘಟಪ್ರಭಾ ನದಿಯಿಂದ ಬರುವ ನೀರಿನ ರಭಸ ಕಡಿಮೆಯಿದ್ದು, ಅದು ಕೃಷ್ಣಾ ನದಿಗೆ ಬಂದು ಸೇರುವಲ್ಲಿ ಒತ್ತಡ ಉಂಟಾಗಿ ಅಕ್ಕ ಪಕ್ಕದ ಜಮೀನಿಗೆ ನೀರು ನುಗ್ಗುವ ಸಾಧ್ಯತೆ ಇದೆ. 

ಮುಳುಗಿದ ಜಮೀನು:

ಆಲಮಟ್ಟಿ ಜಲಾಶಯದಿಂದ 3 ಲಕ್ಷ ಕ್ಯುಸೆಕ್‌ ನೀರನ್ನು ಕೃಷ್ಣಾ ನದಿಗೆ ಬಿಟ್ಟಿರುವುದರಿಂದ  ಅರಳದಿನ್ನಿ, ಯಲಗೂರು, ಕಾಶಿನಕುಂಟಿ, ಯಲ್ಲಮ್ಮನಬೂದಿಹಾಳ, ಮಸೂತಿ ಗ್ರಾಮಗಳ ವ್ಯಾಪ್ತಿಯ ಜಮೀನಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.

ಅರಳದಿನ್ನಿ ಗ್ರಾಮದ ಕಾಶಿಬಾಯಿ ತುಬಾಕಿ, ಯಲಗೂರದಪ್ಪ ಕೊಳ್ಳಾರ, ಮುತ್ತಪ್ಪ ಕೊಳ್ಳಾರ, ಚಂದ್ರಪ್ಪ ಕೊಳ್ಳಾರ, ಸುರೇಶ್ ಕೊಳ್ಳಾರ, ಮಹಾಂತೇಶ ಕೊಳ್ಳಾರ ಅವರಿಗೆ ಸೇರಿದ ಸುಮಾರು 10 ಎಕರೆಯಷ್ಟು ಜಮೀನಿನಲ್ಲಿ ಬೆಳೆದ ಕಬ್ಬು ಬೆಳೆ ಜಲಾವೃತಗೊಂಡಿದೆ. ರಾತ್ರಿ ಮತ್ತಷ್ಟು ಜಮೀನಿಗೆ ನೀರು ನುಗ್ಗುವ ಸಾಧ್ಯತೆಯಿದೆ.

ಜಲಾಶಯದ ಮುಂಭಾಗದ ಕೂಡಲಸಂಗಮದ ಬಳಿ ಮಲಪ್ರಭಾ ನದಿ ಕೂಡುವುದರಿಂದ ಕೃಷ್ಣಾ ನದಿ ನೀರು ಹಿಮ್ಮುಖವಾಗಿ ಒತ್ತುತ್ತದೆ. ಆಗ ಆಲಮಟ್ಟಿಯಿಂದ ಬಿಟ್ಟ ನೀರು ಸರಾಗವಾಗಿ ಹೋಗದೇ ಅಕ್ಕಪಕ್ಕದ ಜಮೀನುಗಳಿಗೆ ನುಗ್ಗುತ್ತದೆ. ಇದು ಪ್ರತಿ ವರ್ಷದ ಸಮಸ್ಯೆಯಾಗಿದೆ.

ಕೃಷ್ಣಾ ತೀರ ಗ್ರಾಮಗಳಿಗೆ ಭೇಟಿ:

ಪ್ರವಾಹದ ಆತಂಕ ಎದುರಿಸುವ ಮಸೂತಿ ಗ್ರಾಮಕ್ಕೆ ತಹಶೀಲ್ದಾರ್ ಎ.ಡಿ. ಅಮರಾವಡಗಿ ನೇತೃತ್ವದಲ್ಲಿ ತಾಲ್ಲೂಕು ಆಡಳಿತ ವಿವಿಧ ಇಲಾಖೆಯ ಅಧಿಕಾರಿಗಳು ಗುರುವಾರ ಭೇಟಿ ನೀಡಿದರು.

2019ರಲ್ಲಿ ಜಲಾಶಯದಿಂದ ನೀರು ಬಿಟ್ಟಾಗ ಜಲಾವೃತಗೊಂಡಿದ್ದ ಮನೆಗಳಿಗೆ ಭೇಟಿ ನೀಡಿ ಅವರಿಗೆ ಧೈರ್ಯ ತುಂಬಿದರು. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು, ಫಾಗಿಂಗ್ ನಡೆಸಲು ಆಯಾ ಪಿಡಿಒ ಗಳಿಗೆ ಸೂಚಿಸಿದರು.

ಯಲ್ಲಮ್ಮನ ಬೂದಿಹಾಳ, ಯಲಗೂರು, ಕಾಶೀನಕುಂಟಿ, ಅರಳದಿನ್ನಿ ಗ್ರಾಮದ ಕೃಷ್ಣಾ ತೀರಕ್ಕೆ ಭೇಟಿ ನೀಡಿದರು. ನಿತ್ಯ ಡಂಗುರ ಸಾರಲಾಗುತ್ತಿದ್ದು, 4 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಟ್ಟಾಗ ಮಸೂತಿ ಗ್ರಾಮದ ಜನವಸತಿ ಪ್ರದೇಶಕ್ಕೆ ನೀರು ಬರುವ ಸಾಧ್ಯತೆಯಿದೆ  ಎಂದು ತಹಶೀಲ್ದಾರ್ ಅಮರಾವಡಗಿ ತಿಳಿಸಿದರು.

ಇಡೀ ತಾಲ್ಲೂಕು ಆಡಳಿತ ಮಹಾಪುರ ಎದುರಿಸಲು ಸನ್ನದ್ಧವಾಗಿದ್ದು, ದಿನದ 24 ಗಂಟೆಯೂ ನಿಗಾ ವಹಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಒಂದೆಡೆ ನದಿ ನೀರಿನ ಭೀತಿ, ಜಮೀನುಗಳು ಮುಳುಗುವ ಆತಂಕ, ವಿಷ ಜಂತುಗಳ ಕಾಟ, ಅಂತರ್ಜಲ‌ ಮಟ್ಟ ಹೆಚ್ಚಿಸಿ ಹಿಡಿಯುವ ಮನೆಗಳು, ಮನೆ ಕುಸಿಯುವ ಭೀತಿಯೂ ಪ್ರತಿ ವರ್ಷದ ಜುಲೈ, ಆಗಸ್ಟ್‌ನಲ್ಲಿ ಅನುಭವಿಸುತ್ತೇವೆ ಎನ್ನುತ್ತಾರೆ ಮಸೂತಿ ಗ್ರಾಮದ ಶ್ರೀಶೈಲ‌ ಪಾಟೀಲ.

ಆಲಮಟ್ಟಿ ಜಲಾಶಯದಿಂದ 3 ಲಕ್ಷ ಕ್ಯುಸೆಕ್ ನೀರನ್ನು ಗುರುವಾರ ಸಂಜೆ ನದಿಗೆ ಬಿಟ್ಟಿರುವ ದೃಶ್ಯ ಪ್ರಜಾವಾಣಿ ಚಿತ್ರ

ಹೆಚ್ಚು ನೀರು ಹರಿಸಲು ಮಹಾರಾಷ್ಟ್ರ ಒತ್ತಡ 

ಆಲಮಟ್ಟಿ: ಕೃಷ್ಣಾ ಕೊಳ್ಳದ ಸಾಂಗಲಿ ಹಾಗೂ ಕೊಲ್ಹಾಪುರ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು ಇದಕ್ಕೆ ಆಲಮಟ್ಟಿ ಜಲಾಶಯದ ಎತ್ತರ ಕಾರಣ ಎಂದು ಆರೋಪಿಸಿ ಮಹಾರಾಷ್ಟ್ರ ಸರ್ಕಾರವೂ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ಆಲಮಟ್ಟಿ ಜಲಾಶಯದ ಸದ್ಯದ ನೀರು ಸಂಗ್ರಹ ಮಟ್ಟವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದೆ. ಮಹಾರಾಷ್ಟ್ರದ ಶಾಸಕ ಸತೇಜ್ ಪಾಟೀಲ ನೇತೃತ್ವದಲ್ಲಿ ಮಹಾರಾಷ್ಟ್ರದ ಮುಖಂಡರು ಗುರುವಾರ ಬೆಂಗಳೂರಿನಲ್ಲಿ‌ ಮುಖ್ಯಮಂತ್ರಿ ಸಿದ್ಧರಾಮಯ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರನ್ನು ಭೇಟಿ ಮಾಡಿ ಮಹಾಪೂರ ಸಮಯದಲ್ಲಿ ಆಲಮಟ್ಟಿ ಜಲಾಶಯದ ಮಟ್ಟವನ್ನು ಆಗಸ್ಟ್‌ 15 ರವರೆಗೆ 517 ಮೀಟರ್ ವರೆಗೆ ಇಟ್ಟುಕೊಳ್ಳಬೇಕು.  3.5 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಬೇಕು ಎಂದು ಮನವಿ ಮಾಡಿದರು. ಕೇಂದ್ರ ಸಚಿವರಿಗೂ ಮನವಿ: ಕೇಂದ್ರದ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ ಅವರಿಗೆ ಭೇಟಿ ಮಾಡಿದ ಕೊಲ್ಹಾಪುರದ ಮಾಜಿ ಸಂಸದ ಧನಂಜಯ ಮಹಾಧಿಕ್ ಆಲಮಟ್ಟಿ ಜಲಾಶಯದಿಂದ ತಕ್ಷಣವೇ ಹೆಚ್ಚಿನ ನೀರು ನದಿಗೆ ಹರಿಸಲು ಕ್ರಮಕೈಗೊಳ್ಳಬೇಕು ಹಾಗೂ  ಪ್ರವಾಹ ನಿಯಂತ್ರಣಕ್ಕೆ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.