ADVERTISEMENT

ಆಲಮಟ್ಟಿ: 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 6:38 IST
Last Updated 20 ಆಗಸ್ಟ್ 2025, 6:38 IST
<div class="paragraphs"><p>ಆಲಮಟ್ಟಿ ಜಲಾಶಯದಿಂದ ಈ ವರ್ಷದ ಗರಿಷ್ಠ 2 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿರುವ ಮಂಗಳವಾರದ ದೃಶ್ಯ </p></div>

ಆಲಮಟ್ಟಿ ಜಲಾಶಯದಿಂದ ಈ ವರ್ಷದ ಗರಿಷ್ಠ 2 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿರುವ ಮಂಗಳವಾರದ ದೃಶ್ಯ

   

ಪ್ರಜಾವಾಣಿ ಚಿತ್ರ: ಚಂದ್ರಶೇಖರ ಕೋಳೇಕರ

ಆಲಮಟ್ಟಿ: ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮುಂಜಾಗ್ರತೆಯ ಕ್ರಮವಾಗಿ ಮಂಗಳವಾರ ಸಂಜೆಯಿಂದ ಆಲಮಟ್ಟಿ ಜಲಾಶಯದ ಹೊರಹರಿವನ್ನು 2 ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ.

ADVERTISEMENT

ಬೆಳಿಗ್ಗೆ 1.50 ಲಕ್ಷ ಕ್ಯೂಸೆಕ್ ಇದ್ದ ಹೊರಹರಿವನ್ನು ಬೆಳಿಗ್ಗೆ 10ಕ್ಕೆ 1.75 ಲಕ್ಷ ಕ್ಯೂಸೆಕ್‌ಗೆ ಹಾಗೂ ಸಂಜೆ 6ಕ್ಕೆ 2 ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ಇದು ಈ ವರ್ಷದ ಗರಿಷ್ಠ ಹೊರಹರಿವು.

ಮಳೆಯ ಅಬ್ಬರ:

ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಮಂಗಳವಾರ ಒಂದೇ ದಿನ ನವಜಾದಲ್ಲಿ ದಾಖಲೆಯ 31.6 ಸೆಂ.ಮೀ, ಕೊಯ್ನಾದಲ್ಲಿ 19.2 ಸೆಂ.ಮೀ, ರಾಧಾನಗರಿಯಲ್ಲಿ 22.1 ಸೆಂ.ಮೀ, ಮಹಾಬಲೇಶ್ವರದಲ್ಲಿ 15.1 ಸೆಂ.ಮೀ, ದೂಧಗಂಗಾದಲ್ಲಿ 11.9 ಸೆಂ.ಮೀ ಮಳೆಯಾಗಿದೆ.

ಮಹಾರಾಷ್ಟ್ರದ ಅಣೆಕಟ್ಟು ಕೊಯ್ನಾ ಜಲಾಶಯದಿಂದ 80,500 ಕ್ಯೂಸೆಕ್ ಹಾಗೂ ವಾರಣಾದಿಂದ 36,630 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರ ಜತೆಗೆ ಕರ್ನಾಟಕದ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ ಬಂದು ಸೇರುವ ದೂಧಗಂಗಾ ನದಿಯ ಹರಿವು 21,824 ಕ್ಯೂಸೆಕ್ ಸೇರಿ, ಅಲ್ಲಿಯ ಕೃಷ್ಣೆಯ ಹರಿವು 1 ಲಕ್ಷ ಕ್ಯೂಸೆಕ್ ದಾಟಿದೆ.

ಆಲಮಟ್ಟಿ ಜಲಾಶಯದ ಹಿಂಭಾಗದ ಘಟಪ್ರಭಾ ನದಿಯ ಹರಿವು ಹೆಚ್ಚಾಗಿದ್ದು, ಲೋಳಸೂರ ಬಳಿ ಸುಮಾರು 50 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇವೆಲ್ಲಾ ನೀರು ಮುಂದಿನ 48 ಗಂಟೆಯೊಳಗೆ ಆಲಮಟ್ಟಿ ಜಲಾಶಯಕ್ಕೆ ಬಂದು ಸೇರಲಿದ್ದು, ಜಲಾಶಯದ ಒಳಹರಿವು 1.50 ಲಕ್ಷ ಕ್ಯೂಸೆಕ್ ದಾಟುವ ಸಾಧ್ಯತೆಯಿದೆ.

ಮುಂಜಾಗ್ರತೆಯ ಕ್ರಮವಾಗಿ 2 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಒಂದು ವೇಳೆ ಬುಧವಾರವೂ ಮಳೆಯ ಅಬ್ಬರ ಹೀಗೆಯೇ ಮುಂದುವರೆದರೇ ಹೊರಹರಿವು ಮತ್ತಷ್ಟು ಹೆಚ್ಚಲಿದೆ ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ.ಬಸವರಾಜ ತಿಳಿಸಿದರು.

ಆಲಮಟ್ಟಿ ಜಲಾಶಯಕ್ಕೆ ಸಂಜೆ 6ಕ್ಕೆ 1,11,306 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಮಟ್ಟ 518.92 ಮೀಟರ್‌ ಇದೆ.

ನದಿ ತೀರದಲ್ಲಿ ಕಟ್ಟೆಚ್ಚರ:

ಆಲಮಟ್ಟಿ ಜಲಾಶಯದ ಹೊರಹರಿವು ಹೆಚ್ಚಿದ್ದರಿಂದ ಕೃಷ್ಣಾ ನದಿ ತೀರದ ಗ್ರಾಮಗಳಾದ ಅರಳದಿನ್ನಿ, ಕಾಶೀನಕುಂಟಿ, ಯಲಗೂರು, ಯಲ್ಲಮ್ಮನಬೂದಿಹಾಳ, ಮಸೂತಿ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಆದರೆ, ಆಲಮಟ್ಟಿ ಜಲಾಶಯಕ್ಕಿಂತಲೂ ಹೆಚ್ಚಿನ ನೀರನ್ನು ನಾರಾಯಣಪುರ ಜಲಾಶಯದಿಂದಲೂ ಬಿಡಲಾಗುತ್ತಿದ್ದು, ಇದರಿಂದ ಪ್ರವಾಹ ಸ್ಥಿತಿ ಉಂಟಾಗುವ ಸಾಧ್ಯತೆ ಕಡಿಮೆ. 4 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಬಿಟ್ಟಾಗ ಮಾತ್ರ ಮಸೂತಿ ಗ್ರಾಮದ ಕೆಲ ಮನೆಗಳು ಜಲಾವೃತಗೊಳ್ಳುತ್ತವೆ. ಆದರೆ, ಸದ್ಯಕ್ಕೆ ಆ ಸ್ಥಿತಿಯಿಲ್ಲ ಎಂದು ತಹಶೀಲ್ದಾರ್ ಎ.ಡಿ. ಅಮರಾವದಗಿ ತಿಳಿಸಿದರು.

ಕೃಷ್ಣಾ ತೀರದ ಗ್ರಾಮಗಳಲ್ಲಿ ಡಂಗೂರು ಸಾರಿ ಜನ, ಜಾನುವಾರುಗಳು ನದಿ ಪಾತ್ರಕ್ಕೆ ತೆರಳದಂತೆ ಸೂಚಿಸಲಾಗುತ್ತಿದೆ. ತಾಲ್ಲೂಕು ಆಡಳಿತ 24 ಗಂಟೆಯೂ ಸತತ ನಿಗಾ ಇಟ್ಟಿದೆ ಎಂದರು.

ಆಲಮಟ್ಟಿ ಜಲಾಶಯದಿಂದ ಮಂಗಳವಾರ ಸಂಜೆ 6 ಕ್ಕೆ 2 ಲಕ್ಷ ಕ್ಯೂಸೆಕ್ ಬಿಟ್ಟ ನಂತರ ಜಲಾಶಯದ ಮುಂಭಾಗದ ಯಲಗೂರು ಬಳಿ ಕೃಷ್ಣಾ ನದಿಯ ಹರಿವು ಕಂಡಿದ್ದು ಹೀಗೆ ಪ್ರಜಾವಾಣಿ ಚಿತ್ರ: ಚಂದ್ರಶೇಖರ ಕೋಳೇಕರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.