ADVERTISEMENT

ಆಲಮೇಲಕ್ಕೆ ಬೇಕಿದೆ ಪದವಿ ಕಾಲೇಜು

ರಮೇಶ ಎಸ್.ಕತ್ತಿ
Published 30 ಜುಲೈ 2025, 5:00 IST
Last Updated 30 ಜುಲೈ 2025, 5:00 IST
ಆಲಮೇಲ‌ ಪಟ್ಟಣದ ಸಿಂದಗಿ ರಸ್ತೆಯಲ್ಲಿ ಇರುವ ಯುಕೆಪಿ ಕ್ಯಾಂಪಿನ ಕಟ್ಟಡಗಳಲ್ಲಿ ಪದವಿ ಕಾಲೇಜಿನ ತರಗತಿಗಳನ್ನು ಆರಂಭಿಸಲು ಯೋಗ್ಯವಾಗಿವೆ
ಆಲಮೇಲ‌ ಪಟ್ಟಣದ ಸಿಂದಗಿ ರಸ್ತೆಯಲ್ಲಿ ಇರುವ ಯುಕೆಪಿ ಕ್ಯಾಂಪಿನ ಕಟ್ಟಡಗಳಲ್ಲಿ ಪದವಿ ಕಾಲೇಜಿನ ತರಗತಿಗಳನ್ನು ಆರಂಭಿಸಲು ಯೋಗ್ಯವಾಗಿವೆ   

ಆಲಮೇಲ: ಪಟ್ಟಣದ ಒಟ್ಟು ಜನಸಂಖ್ಯೆ 25 ಸಾವಿರದಷ್ಟಿದೆ, 2016ರಲ್ಲಿ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿದೆ. ನಂತರದ ವರ್ಷಗಳಲ್ಲಿ ತಾಲ್ಲೂಕು ಸ್ಥಾನಮಾನವೂ ದೊರೆಯಿತು. ಸುತ್ತಲಿನ 40 ಹಳ್ಳಿಗೆ ಆಲಮೇಲ ಈಗ ಪ್ರಧಾನ ಕೇಂದ್ರವಾಗಿದೆ.


ತಾಲ್ಲೂಕು ಪಂಚಾಯತಿ ಸೇರಿದಂತೆ ಹತ್ತಾರು ಸರ್ಕಾರಿ ಕಚೇರಿಗಳು ಬಂದಿವೆ, ತೋಟಗಾರಿಕೆ ಕಾಲೇಜು ಕಾರ್ಯ ಪ್ರಗತಿಯಲ್ಲಿದೆ. ಇಷ್ಟೆಲ್ಲ ಇದ್ದರೂ ಬಹುದಿನಗಳ ಬೇಡಿಕೆಯಾದ ಸರಕಾರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು ಮಾತ್ರ ಆರಂಭವಾಗುತ್ತಿಲ್ಲ ಎನ್ನುವುದು ಪಟ್ಟಣದ ಸಾರ್ವಜನಿಕರ ಅಳಲು ಆಗಿದೆ.

ಏಕೆ‌ ಬೇಕು? : ಪಟ್ಟಣದ ಸುತ್ತಲಿನ ಹಳ್ಳಿಗಳಾದ ಕಡಣಿ, ದೇವಣಗಾಂವ, ದೇವರನಾವದಗಿ, ಕೋರಹಳ್ಳಿ, ಮಲಘಾಣ ಮೊದಲಾದ ಗ್ರಾಮಗಳಲ್ಲಿ ಪದವಿಪೂರ್ವ ಕಾಲೇಜುಗಳಿವೆ. ಇಲ್ಲಿನ ಬಡ ವಿದ್ಯಾರ್ಥಿಗಳು ಕಡಿಮಿ‌ ಶುಲ್ಕದಲ್ಲಿ ವಿಜ್ಞಾನ ಪದವಿ ಮತ್ತು ವಾಣಿಜ್ಯ ಪದವಿ ಕೋರ್ಸಗಳ ಉನ್ನತ ಶಿಕ್ಷಣಕ್ಕಾಗಿ ದೂರದ ಪಟ್ಟಣಗಳಿಗೆ ಹೋಗಿ ಶಿಕ್ಷಣ ಪೊರೈಸುವುದು ಕಷ್ಟವಾಗುತ್ತಿದೆ. ಅದಕ್ಕಾಗಿ ಆಲಮೇಲ ಸಮೀಪವಾಗಿರುವದರಿಂದ ಪದವಿ ಕಾಲೇಜು ಅಗತ್ಯವಿದೆ ಎಂದು ಎಬಿವಿಪಿ ಯುವ ಮುಖಂಡ‌ ಬಸವರಾಜ ಹೂಗಾರ ಹೇಳುತ್ತಾರೆ.

ADVERTISEMENT

’ಆಲಮೇಲ‌ ಪಟ್ಟಣ ಈಗ ತಾಲ್ಲೂಕು ಕೇಂದ್ರವಾಗಿದೆ, ಸರ್ಕಾರದ ನಿಯಮದಂತೆ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಪದವಿ ಕಾಲೇಜು ಇರಬೇಕು ಎಂಬ ಉದ್ದೇಶ ಈಡೇರಿಕೆಗೆ ಇಲ್ಲಿ ಪದವಿ ಕಾಲೇಜು ಆಗಬೇಕಾದ ಅಗತ್ಯತೆ ಇದೆ’ ಎನ್ನುತ್ತಾರೆ ಪಟ್ಟಣ ಪಂಚಾಯತಿ ಸದಸ್ಯ ಅಶೋಕಗೌಡ ಕೊಳಾರಿ.

’ಸುತ್ತಲಿನ ಹಳ್ಳಿಗಳ ಕಾಲೇಜುಗಳಿಂದ ಸಾವಿರಾರು ವಿದ್ಯಾರ್ಥಿಗಳು ಪಿಯು ಶಿಕ್ಷಣ ಮುಗಿಸುತ್ತಾರೆ. ಅವರಿಗೆ ಸರ್ಕಾರಿ ಕಾಲೇಜಿನ ಅವಶ್ಯಕತೆ ಇದೆ’ ಎಂದು ಕಡಣಿ ಗ್ರಾಮದ ಉಮೇಶ ಕ್ಷತ್ರಿ ಹೇಳುತ್ತಾರೆ.

ಯುಕೆಪಿ ಕಟ್ಟಡ ಬಳಕೆ: ಪದವಿ ಕಾಲೇಜು ಸ್ಥಾಪಿಸಲು ಆಲಮೇಲ ಪಟ್ಟಣದಲ್ಲಿ ಇಂಡಿ ರಸ್ತೆ ಹಾಗೂ ಸಿಂದಗಿ ರಸ್ತೆಗಳಲ್ಲಿ ಯುಕೆಪಿ ಕಟ್ಟಡಗಳಿವೆ ಮತ್ತು ಬಯಲು ಜಾಗವು ಇರುವುದರಿಂದ ತಾತ್ಕಾಲಿಕವಾಗಿ ಬಳಸಬಹುದು. 2007ರಲ್ಲಿ ಹೊಸದಾಗಿ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ಪದವಿ ಕಾಲೇಜು ತೆರೆಯಿತು. ನಂತರದ ದಿನಗಳಲ್ಲಿ ಹೋಬಳಿ ಕೇಂದ್ರದಲ್ಲೂ ಪದವಿ ಕಾಲೇಜುಗಳು ಹಾಗೂ ಕೆಲವು ಕಡೆ ಸಣ್ಣ ಊರುಗಳಲ್ಲಿಪದವಿ ಕಾಲೇಜನ್ನು ಸರ್ಕಾರ ಪ್ರಾರಂಭಿಸಿದೆ. ಸ್ಥಳೀಯ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈವರೆಗೂ ಪದವಿ ಕಾಲೇಜು ಸ್ಥಾಪನೆ ಆಗದಿರುವುದು ವಿಷಾದನೀಯ ಎಂದು ಹಿರಿಯ ಬಂಡಾಯ ಸಾಹಿತಿ ಸಿದ್ಧರಾಮ ಉಪ್ಪಿನ ಅವರು ಪ್ರಜಾವಾಣಿಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ಹೆಣ್ಣುಮಕ್ಕಳು, ಅದರಲ್ಲೂ ಆರ್ಥಿಕವಾಗಿ ಹಿಂದುಳಿದವರು ಉನ್ನತ ಶಿಕ್ಷಣ ಪಡೆಯಲು ಇದರಿಂದ ಸಾಕಷ್ಟು ಅನುಕೂಲವಾಗಲಿದೆ, ಸರ್ಕಾರದ ಮೇಲೆ ಸ್ಥಳೀಯ ಜನಪ್ರತಿನಿಧಿಗಳು ಒತ್ತಡ ಹಾಕಿ, ಶಾಸಕರ‌ ಮನವೊಲಿಸಿ ಆಲಮೇಲ ಪಟ್ಟಣದಲ್ಲಿ ಸರಕಾರಿ ಪದವಿ ಕಲಾ, ವಿಜ್ಞಾನ ಮತ್ತು ಬಿಬಿಎ, ಬಿಸಿಎ ಕೋರ್ಸ ಒಳಗೊಂಡಿರುವ ಕಾಲೇಜನ್ಳು ಮುಂದಿನ ಶೈಕ್ಷಣಿಕ ವರ್ಷದಲ್ಲಾದರೂ ಆರಂಭವಾಗಲಿ ಎನ್ನುತ್ತಾರೆ ಇಲ್ಲಿಯ ಜನರು.

ಖಂಡಿತವಾಗಿಯೂ ಆಲಮೇಲಕ್ಕೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಅವಶ್ಯಕತೆ ಇದೆ. ಈ ಕುರಿತು ಉನ್ನತ ಶಿಕ್ಷಣ ಸಚಿವರಿಗೆ ಮನವಿಮಾಡಿ ಕಾಲೇಜು ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ

ಅಶೋಕ ಮನಗೂಳಿ, ಶಾಸಕರು

ಬಹಳ‌ದಿನಗಳ ಬೇಡಿಕೆ ಇದಾಗಿದ್ದರೂ ಕಾರ್ಯರೂಪಕ್ಕೆ ಬರುತ್ತಿಲ್ಲ, ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಬೇಕಾಗುತ್ತದೆ

ಹರೀಶ ಯಂಟಮಾನ, ಹೋರಾಟಗಾರ, ಯುವ ಮುಖಂಡ ಆಲಮೇಲ

ಆಲಮೇಲ‌ ಪಟ್ಟಣದ ಸಿಂದಗಿ ರಸ್ತೆಯಲ್ಲಿ ಇರುವ ಯುಕೆಪಿ ಕ್ಯಾಂಪಿನ ಕಟ್ಟಡಗಳಲ್ಲಿ ಪದವಿ ಕಾಲೇಜಿನ ತರಗತಿಗಳನ್ನು ಆರಂಭಿಸಲು ಯೋಗ್ಯವಾಗಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.