ADVERTISEMENT

ಆಲಮಟ್ಟಿ| ಕೃಷ್ಣೆಯ ಜಲಧಿಗೆ ಬಾಗಿನ ಅರ್ಪಣೆ ಇಂದು: ಸಿಎಂ ಸ್ವಾಗತಕ್ಕೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 5:47 IST
Last Updated 6 ಸೆಪ್ಟೆಂಬರ್ 2025, 5:47 IST
ಆಲಮಟ್ಟಿ ಜಲಾಶಯದ 26 ಗೇಟ್ ಗಳ ಮೂಲಕ ಶುಕ್ರವಾರ ರಾತ್ರಿ ನೀರನ್ನು ಹೊರಕ್ಕೆ ಬಿಡಲಾಗಿದ್ದು, ವರ್ಣಮಯ ದೀಪದಲ್ಲಿ ಕಂಗೊಳಿಸಿತು
ಆಲಮಟ್ಟಿ ಜಲಾಶಯದ 26 ಗೇಟ್ ಗಳ ಮೂಲಕ ಶುಕ್ರವಾರ ರಾತ್ರಿ ನೀರನ್ನು ಹೊರಕ್ಕೆ ಬಿಡಲಾಗಿದ್ದು, ವರ್ಣಮಯ ದೀಪದಲ್ಲಿ ಕಂಗೊಳಿಸಿತು   

ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ಸೆ.6 ರಂದು ಬಾಗಿನ ಅರ್ಪಿಸಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸ್ವಾಗತಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ತಡರಾತ್ರಿಯವರೆಗೂ ಆಲಮಟ್ಟಿಯ ಅರಣ್ಯ ಇಲಾಖೆಯ ಕಾರ್ಮಿಕರು ಹೂವಿನ ಅಲಂಕಾರ, ತಳಿರು ತೋರಣಗಳ ಶೃಂಗಾರ ಮಾಡಿದರು. ಅಣೆಕಟ್ಟು, ಅಣೆಕಟ್ಟು ವೃತ್ತ, ಹೆಲಿಪ್ಯಾಡ್ ನಿಂದ ಬಾಗಿನ ಅರ್ಪಣೆಯ ಸ್ಥಳದವರೆಗೆ ವಿದ್ಯುತ್ ದೀಪ, ಹೂವಿನ ಅಲಂಕಾರ ಮಾಡಲಾಗಿದೆ.

ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಬರುತ್ತಿರುವ 85,000 ಕ್ಯೂಸೆಕ್ ನೀರನ್ನು ಜಲಾಶಯದ 26 ಗೇಟ್ ಗಳ ಮೂಲಕ ಬಿಡಲಾಗುತ್ತಿದ್ದು, ಅದಕ್ಕೆ ವಿದ್ಯುತ್ ದೀಪದ ಅಲಂಕಾರ ಮಾಡಲಾಗುತ್ತಿದೆ. ಅದು ನೋಡುಗರ ಕಣ್ಮನ ಸೆಳೆಯುತ್ತಿದೆ.

ADVERTISEMENT

ಪ್ರವಾಸಿ ಮಂದಿರದ ಬಲಭಾಗ ಮನವಿ ಅರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ. ಹೆಲಿಪ್ಯಾಡ್ ಸುತ್ತ ಇದೇ ಮೊದಲ ಬಾರಿಗೆ ಹಸಿರು ಹುಲ್ಲು ಹಾಸನ್ನು ನಾನಾ ಅಲಂಕಾರಿಕ, ಕಣ್ಮನ ಸೆಳೆಯುವ ಸಸ್ಯಗಳನ್ನು ಅರಣ್ಯ ಇಲಾಖೆಯವರು ಬೆಳೆಸಿದ್ದು ಹೃನ್ಮನ ಸೆಳೆಯುತ್ತಿದೆ. ಗುರುವಾರವಷ್ಟೇ ಜಲಾಶಯ ಪೂರ್ತಿ ಭರ್ತಿಯಾಗಿದ್ದು, ಭರ್ತಿಯಾದ ಎರಡೇ ದಿನಕ್ಕೆ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುತ್ತಿದ್ದಾರೆ.

ಡಿಸಿ ಪರಿಶೀಲನೆ: ಸಿಎಂ ಕಾರ್ಯಕ್ರಮದ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಕೆ. ಆನಂದ ಮತ್ತೀತರ ಅಧಿಕಾರಿಗಳು ಸಿದ್ಧತೆ ಪರಿಶೀಲಿಸಿದರು.

ಜಲಾಶಯದ ಹಿನ್ನೀರಿನ ಕೆಳಗಿಳಿದು ನೇರವಾಗಿ ಕೃಷ್ಣೆಗೆ ಬಾಗಿನ ಅರ್ಪಿಸುವ ಸ್ಥಳ ಬಿಟ್ಟು, ಜಲಾಶಯದ ಮೇಲ್ಭಾಗದಿಂದಲೇ ಕೃಷ್ಣೆಗೆ ಬಾಗಿನ ಅರ್ಪಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ. ಆನಂದ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಓ ರಿಷಿ ಆನಂದ, ಮುಖ್ಯ ಎಂಜಿನಿಯರ್ ಡಿ.ಬಸವರಾಜ, ವಿ.ಆರ್. ಹಿರೇಗೌಡರ. ತಾರಾಸಿಂಗ ದೊಡಮನಿ, ರವಿ ಚಂದ್ರಗಿರಿಯವರ, ತಹಶೀಲ್ದಾರ್ ಎ.ಡಿ. ಅಮರಾವದಗಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಎಂ.ಎಂ. ಉಪಾಸೆ, ಡಿ.ವಿ. ಅರುಣ, ಶಿವಲಿಂಗ ಕುರೆನ್ನವರ, ಎಂ.ಎಂ. ಉಪಾಸೆ, ಕುಮಾರೇಶ ಹಂಚನಾಳ, ವಿಠ್ಠಲ ಜಾಧವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.