ಶಿವಾನಂದ ಪಾಟೀಲ
ವಿಜಯಪುರ: ‘ಆಲಮಟ್ಟಿ ಲಾಲಬಹದ್ದೂರ್ ಶಾಸ್ತ್ರಿ ಜಲಾಶಯ(ಆಣೆಕಟ್ಟೆ) ಎತ್ತರವನ್ನು ಹಂತಹಂತವಾಗಿ ಎತ್ತರಿಸಲು ರಾಜ್ಯ ಸರ್ಕಾರ ಒಲವು ಹೊಂದಿದೆ. ಪ್ರಥಮ ಹಂತವಾಗಿ ಒಂದು ಮೀಟರ್ ಎತ್ತರಿಸಲು ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು’ ಎಂದು ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಒತ್ತಾಯಿಸಿದರು.
‘ಕೃಷ್ಣಾ ನದಿ ನೀರು ಹಂಚಿಕೆ ವಿವಾದದ ಬಗ್ಗೆ 2010ರಲ್ಲೇ ಅಂತಿಮ ತೀರ್ಪು ಬಂದರೂ ಇದುವರೆಗೂ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿಲ್ಲ, ಸುಪ್ರೀಂ ಕೋರ್ಟ್ ಕೂಡ ವಿವಾದವನ್ನು ಶೀಘ್ರ ಇತ್ಯರ್ಥಕ್ಕೆ ಆದ್ಯತೆ ನೀಡುತ್ತಿಲ್ಲ. ಜೊತೆಗೆ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳು ವಿವಾದ ಬಗೆಹರಿಸಿಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ. ಇದರಿಂದ ಕರ್ನಾಟಕಕ್ಕೆ ಸಿಗಬೇಕಾದ 80 ಟಿಎಂಸಿ ಅಡಿ ನೀರು ಆಂಧ್ರ, ತೆಲಂಗಾಣದ ಪಾಲಾಗುತ್ತಿದೆ. ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುತ್ತಿದ್ದು, ರಾಜ್ಯಕ್ಕೆ ನಷ್ಠವಾಗುತ್ತಿದೆ’ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಆಣೆಕಟ್ಟೆಯ ಸದ್ಯ ಇರುವ ಎತ್ತರ 519 ಮೀಟರ್‌ನಿಂದ 520 ಮೀಟರ್‌ಗೆ ಎತ್ತರಿಸುವುದರಿಂದ ಯಾವುದೇ ಕಾನೂನು ತೊಡಕು ಆಗುವುದಿಲ್ಲ ಎಂದು ನೀರಾವರಿ ತಜ್ಞ, ವಕೀಲರಾದ ಮೋಹನ್ ಕಾತರಕಿ ಅವರು ಮುಖ್ಯಮಂತ್ರಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಯುಕೆಪಿ ವ್ಯಾಪ್ತಿಯ ಶಾಸಕರು, ಸಚಿವರ ಸಭೆಯಲ್ಲಿ ಸಲಹೆ ನೀಡಿದ್ದಾರೆ’ ಎಂದರು.
‘ಆಣೆಕಟ್ಟೆಯನ್ನು ಕೇವಲ ಒಂದು ಮೀಟರ್ ಎತ್ತರಿಸುವುದರಿಂದ 25 ಸಾವಿರ ಎಕರೆ ಭೂಮಿ ಮುಳುಗಡೆ ಆಗಲಿದೆ. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಯೂ ಮುಗಿದಿದೆ. ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ. ರಾಜ್ಯಕ್ಕೆ ಸುಮಾರು 30 ಟಿಎಂಸಿ ಅಡಿ ನೀರು ಬಳಕೆಗೆ ಲಭಿಸಲಿದ್ದು, ಸುಮಾರು ಒಂದು ಲಕ್ಷ ಎಕರೆಗೆ ನೀರಾವರಿ, ವಿಜಯಪುರ ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಅನುಕೂಲವಾಗಲಿದೆ' ಎಂದು ಹೇಳಿದರು.
‘ಆಲಮಟ್ಟಿ ಜಲಾಶಯದ ಉದ್ದೇಶಿತ 524 ಮೀಟರ್‌ಗೆ ಎತ್ತರಿಸುವ ಕಾರ್ಯ ಒಮ್ಮೆಲೆ ಆಗದು. ಇದಕ್ಕೆ ಸುಮಾರು ₹1 ಲಕ್ಷ ಕೋಟಿ ಅನುದಾನ ಬೇಕಾಗುತ್ತದೆ. ಸದ್ಯದ ಸ್ಥಿತಿಯಲ್ಲಿ ಹಂತಹಂತವಾಗಿ ಎತ್ತರಿಸುವುದೇ ಉತ್ತಮ ಪರಿಹಾರ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.