ಆಲಮಟ್ಟಿ: ಯುಗಾದಿ ಅಮವಾಸ್ಯೆ ಹಿಂದೂಗಳಿಗೆ ವರ್ಷಾರಂಭದ ಮೊದಲ ಹಬ್ಬವಾಗಿದ್ದು, ಎರಡು ದಿನಗಳಿಂದ ಅವಳಿ ಜಿಲ್ಲೆಯ ನಾನಾ ಕಡೆಯಿಂದ ಕೃಷ್ಣಾನದಿ ತೀರಕ್ಕೆ 200ಕ್ಕೂ ಅಧಿಕ ದೇವರುಗಳ ಪಲ್ಲಕ್ಕಿ ಮೆರವಣಿಗೆ ಭಕ್ತರ ಜೊತೆ ಬರುತ್ತಿವೆ.
ಕೃಷ್ಣಾ ತೀರದ ಎರಡೂ ಬದಿ ಪಲ್ಲಕ್ಕಿಗಳ ಜತೆ ಆಗಮಿಸುವ ಭಕ್ತರ ಸಂಖ್ಯೆಯೂ ಅಧಿಕವಾಗಿದೆ. ಡೊಳ್ಳುಗಳ ಕುಣಿತ, ಜಾಗಟೆ, ಗಂಟೆ, ಹಲಗೆ ವಾದನ, ಕೊಂಬು ನಿನಾದ ಎಲ್ಲೆಡೆ ಮೊಳಗುತ್ತಿದೆ. ಎಲ್ಲಿ ನೋಡಿದರಲ್ಲಿ ಪಲ್ಲಕ್ಕಿಗಳ ಸಮಾಗಮ ಸಾಮಾನ್ಯವಾಗಿದೆ. ಈ ಪಲ್ಲಕ್ಕಿಗಳ ಉತ್ಸವ ಯುಗಾದಿ ಪಾಡ್ಯ(ಭಾನುವಾರ)ದವರೆಗೂ ಇರಲಿದೆ.
ಬಹುತೇಕ ಗ್ರಾಮಗಳಲ್ಲಿರುವ ದೇವರುಗಳ ಪಲ್ಲಕ್ಕಿ, ಉತ್ಸವ ಮೂರ್ತಿ, ಛತ್ರಿ, ಚಾಮರ ಸೇರಿದಂತೆ ದೇವರ ಪರಿಕರಗಳನ್ನು ಯುಗಾದಿಯಂದು ಕೃಷ್ಣಾ ನದಿಯಲ್ಲಿ ಶುದ್ಧಗೊಳಿಸುತ್ತಾರೆ. ಟಂಟಂ, ಟ್ರ್ಯಾಕ್ಟರ್, ಗೂಡ್ಸ್ ವಾಹನ ಸೇರಿದಂತೆ ಇತರೆ ವಾಹನಗಳಲ್ಲಿಯೂ ಪಲ್ಲಕ್ಕಿಗಳನ್ನು ತರುತ್ತಿದ್ದಾರೆ. ನದಿ ತೀರದಲ್ಲಿಯೇ ಒಲೆ ಹೂಡಿ, ಹೂರಣ ರುಬ್ಬಿ, ಹೋಳಿಗೆ ತಯಾರಿಸಿ, ದೇವರಿಗೆ ನೈವೇದ್ಯ ಅರ್ಪಿಸಿದರು.
ದೇವರುಗಳು: ಅವಳಿ ಜಿಲ್ಲೆಯ ನಾನಾ ಗ್ರಾಮಗಳ ದುರ್ಗಮ್ಮಾ, ದ್ಯಾಮವ್ವ, ಶೆಟಗೆವ್ವಾ, ಪರಮಾನಂದ, ಬೀರಲಿಂಗೇಶ್ವರ, ಮಾಳಿಂಗರಾಯ, ಜಟ್ಟಿಂಗರಾಯ, ಅಂಬಾಭವಾನಿ, ರೇಣುಕಾ ಯಲ್ಲಮ್ಮ, ಬನಶಂಕರಿ, ಶಿವ, ಪಾರ್ವತಿ, ಹನುಮಂತ, ಚಂದ್ರಮ್ಮಾ, ಬಸವಣ್ಣ, ಮಲ್ಲಿಕಾರ್ಜುನ, ಮಡಿವಾಳಪ್ಪ, ಹುಚ್ಚಯ್ಯಸ್ವಾಮಿ, ವೆಂಕಟಪ್ಪ, ವೀರೇಶ್ವರ, ಮಲ್ಲಯ್ಯ, ಅಮೋಘಸಿದ್ದ, ಕೆಂಚಮ್ಮಾ ಹೀಗೆ ನಾನಾ ದೇವರುಗಳ ಪಲ್ಲಕ್ಕಿಗಳು, ಉತ್ಸವ ಮೂರ್ತಿಗಳು, ದೇವರ ಪರಿಕರಗಳು ಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.