ADVERTISEMENT

ಆಲಮಟ್ಟಿ ಜಲಾಶಯ: ಒಳಹರಿವು ಆರಂಭ

ಅಚ್ಚುಕಟ್ಟು ಪ್ರದೇಶದಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆ

​ಪ್ರಜಾವಾಣಿ ವಾರ್ತೆ
Published 23 ಮೇ 2025, 15:15 IST
Last Updated 23 ಮೇ 2025, 15:15 IST
ಆಲಮಟ್ಟಿ ಜಲಾಶಯದ ಹಿನ್ನೀರಿನ ದೃಶ್ಯ
ಆಲಮಟ್ಟಿ ಜಲಾಶಯದ ಹಿನ್ನೀರಿನ ದೃಶ್ಯ   

ಆಲಮಟ್ಟಿ: ಕಳೆದ ನಾಲ್ಕೈದು ದಿನಗಳಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯ ಕಾರಣ ಆಲಮಟ್ಟಿ ಜಲಾಶಯದ ಒಳಹರಿವು ಮೇ 3ನೇ ವಾರದಲ್ಲಿಯೇ ಆರಂಭಗೊಂಡಿದೆ.

ಈ ವರ್ಷದ ಮೊದಲ ಬಾರಿಯ ಒಳಹರಿವು ಮೇ 19 ಸೋಮವಾರ ದಾಖಲಾಗಿದೆ. ಅಂದು ಜಲಾಶಯಕ್ಕೆ 424 ಕ್ಯುಸೆಕ್ ಒಳಹರಿವು ಬಂದಿದೆ. ಮೇ 20 ಮಂಗಳವಾರ 382, ಬುಧವಾರ 1722, ಗುರುವಾರ 1722, ಶುಕ್ರವಾರ 1679 ಕ್ಯುಸೆಕ್ ನೀರು ಹರಿದು ಬಂದಿದೆ. ಐದು ದಿನಗಳಲ್ಲಿ ಜಲಾಶಯಕ್ಕೆ 5929 ಕ್ಯುಸೆಕ್ (0.512 ಟಿಎಂಸಿ ಅಡಿ) ನೀರು ಹರಿದು ಬಂದಿದೆ.

ಆಲಮಟ್ಟಿ ಜಲಾಶಯದ ಹಿನ್ನೀರು

ಇದು ಇತ್ತೀಚಿನ ವರ್ಷಗಳಲ್ಲಿ ಅತೀ ಬೇಗನೆಯ ಒಳಹರಿವು. ಪ್ರತಿ ವರ್ಷ ಜೂನ್ ಮೊದಲ ವಾರದಲ್ಲಿಯೇ ಒಳಹರಿವು ಆರಂಭವಾಗುತ್ತಿತ್ತು.

ADVERTISEMENT
ಹಿನ್ನೀರು

ಆಲಮಟ್ಟಿ ಜಲಾಶಯದಲ್ಲಿ ಇನ್ನೂ ಸುಮಾರು 6 ಟಿಎಂಸಿ ಅಡಿ ನೀರು ಜೀವ ಜಲ (ಲೈವ್ ಸ್ಟೋರೇಜ್ ನೀರು) ಇತ್ತು. ಆಗಲೇ ಮತ್ತೇ ಈ ವರ್ಷದ ಹೊಸ ಒಳಹರಿವು ಆರಂಭಗೊಂಡಿದ್ದು, ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಂತಸ ತಂದಿದೆ.

ಆಲಮಟ್ಟಿ ಜಲಾಶಯದ ಹಿನ್ನೀರು

ಈ ವರ್ಷ ಮೇ ಕೊನೆಯವಾರದಲ್ಲಿಯೇ ಮುಂಗಾರು ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ಕೂಡಾ ಉತ್ತಮ ಮಳೆ ಬೀಳುವ ನಿರೀಕ್ಷೆಗೆ ಬಲ ಬಂದಂತಾಗಿದೆ.

ಆಲಮಟ್ಟಿ ಜಲಾಶಯದ ಹಿನ್ನೀರು
ಆಲಮಟ್ಟಿ ಜಲಾಶಯದ ಹಿನ್ನೀರು

ತಾತ್ಕಾಲಿಕ ಒಳಹರಿವು:

ಆಲಮಟ್ಟಿ ಹಿನ್ನೀರಿನ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಬೀಳುತ್ತಿರುವ ಕಾರಣ ಈಗ ಒಳಹರಿವು ಬರುತ್ತಿದೆ. ಬೆಳಗಾವಿ ಮಹಾರಾಷ್ಟ್ರದಿಂದ ನೀರು ಇನ್ನೂ ಜಲಾಶಯಕ್ಕೆ ಬಂದಿಲ್ಲ. ಇದು ತಾತ್ಕಾಲಿಕ ಒಳಹರಿವು. ಮಳೆ ಕಡಿಮೆಯಾದ ಕೂಡಲೇ ಒಳಹರಿವು ಸ್ಥಗಿತಗೊಳ್ಳುತ್ತದೆ ಎಂದು ಕೆಬಿಜೆಎನ್ಎಲ್ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ.ಬಸವರಾಜ ತಿಳಿಸಿದರು. ಇನ್ನೂ ಮಹಾರಾಷ್ಟ್ರದ ಅಣೆಕಟ್ಟುಗಳು ಭರ್ತಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.