ಆಲಮಟ್ಟಿ: ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚುತ್ತಿದ್ದು, ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರನ್ನು ಗುರುವಾರ ಸಂಜೆಯಿಂದ ಹೊರಬಿಡಲಾಗುತ್ತಿದೆ.
‘ಮಹಾರಾಷ್ಟ್ರದ ಕೃಷ್ಣಾ ಜಲಾನಯನದಲ್ಲಿ ಸುರಿಯುತ್ತಿರುವ ಮಳೆ ಗಮನದಲ್ಲಿ ಇಟ್ಟುಕೊಂಡು ಹೊರಹರಿವನ್ನು ಆರಂಭಿಸಲಾಗಿದೆ. ಒಳಹರಿವು ಹೆಚ್ಚಳವಾದರೆ ಮಾತ್ರ ಹೊರಹರಿವು 20 ಸಾವಿರ ಕ್ಯೂಸೆಕ್‌ಗೆ ಹೆಚ್ಚಲಿದೆ’ ಎಂದು ಜಲಾಶಯದ ಮೂಲಗಳು ತಿಳಿಸಿವೆ.
ಇದೇ ಮೊದಲು: ನಾರಾಯಣಪುರ ಜಲಾಶಯಕ್ಕೆ ಬೇಸಿಗೆಯ ಅಗತ್ಯಕ್ಕೆ ತಕ್ಕಂತೆ ಕುಡಿಯುವ ನೀರು ಮತ್ತಿತರ ಬಳಕೆಗೆ ಮೇ ತಿಂಗಳಲ್ಲಿ ನೀರು ಬಿಡಲಾಗುತಿತ್ತು. ಆದರೆ, ಎರಡೂ ಜಲಾಶಯಗಳಿಗೆ ಒಳಹರಿವು ಆರಂಭಗೊಂಡ ನಂತರವೂ ಮುಂಜಾಗ್ರತೆಯ ಕ್ರಮವಾಗಿ ಮೇ ತಿಂಗಳಲ್ಲಿ ನೀರು ಬಿಡುವುದು ಜಲಾಶಯದ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ.
ಪ್ರತಿ ವರ್ಷ ಜೂನ್ ನಲ್ಲಿ ಒಳಹರಿವು ಆರಂಭಗೊಂಡರೂ, ಜುಲೈ ಮೊದಲ ವಾರದಲ್ಲಿ ಜಲಾಶಯ ಭರ್ತಿಯತ್ತ ಸಾಗುತಿತ್ತು. ಜಲಾಶಯದ ಮಟ್ಟ 516 ಮೀಟರ್ ತಲುಪಿದಾಗ ಮಾತ್ರ ಹೊರಹರಿವು ಆರಂಭಿಸಲಾಗುತಿತ್ತು. ಆದರೆ, ಈ ಬಾರಿ ಜಲಾಶಯದ ಮಟ್ಟ 512.78 ಮೀಟರ್ ವರೆಗೆ ಇದ್ದಾಗಲೇ ನೀರು ಹೊರಬಿಡಲಾಗಿದೆ. ಗುರುವಾರ ಜಲಾಶಯದ ಒಳಹರಿವು 60,379 ಕ್ಯೂಸೆಕ್ ಇತ್ತು.
ವಿದ್ಯುತ್ ಉತ್ಪಾದನೆ ಆರಂಭ: ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದ ಬಲಭಾಗದ ವಿದ್ಯುತ್ ಘಟಕದ ಮೂಲಕ ಸಂಜೆ 6ರ ನಂತರ ಆರಂಭಿಸಿರುವುದರಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆ ಆರಂಭವಾಗಿದೆ.
‘ಜಲಾಶಯದ ಎತ್ತರದ ಮಟ್ಟ ಹಾಗೂ ಹೊರಹರಿವು ಕಡಿಮೆಯಾಗಿದ್ದರಿಂದ ವಿದ್ಯುತ್ ಉತ್ಪಾದನಾ ಕೇಂದ್ರದ 6 ಘಟಕಗಳ ಪೈಕಿ ಒಂದು ಘಟಕದ ಮೂಲಕ 55 ಮೆಗಾವಾಟ್ ವಿದ್ಯುತ್ ಉತ್ಪಾದನೆ ಯಶಸ್ವಿಯಾಗಿ ಆರಂಭಗೊಂಡಿದೆ’ ಎಂದು ಕೆಪಿಸಿಎಲ್ ಸೂಪರಿಂಟೆಂಡಿಂಟ್ ಎಂಜಿನಿಯರ್ ಚಂದ್ರಶೇಖರ ದೊರೆ ತಿಳಿಸಿದರು.
624 ಮೆಗಾವಾಟ್ ವಿದ್ಯುತ್ ಉತ್ಪಾದನೆ: ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಈ ವರ್ಷ 510 ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಗುರಿ ನೀಡಲಾಗಿದೆ. ಪ್ರತಿ ವರ್ಷ ಜೂನ್ ಅಂತ್ಯ ಇಲ್ಲವೇ ಜುಲೈನಲ್ಲಿ ವಿದ್ಯುತ್ ಉತ್ಪಾದನೆ ಆರಂಭಗೊಳ್ಳುತ್ತಿತ್ತು. ಆದರೆ, ಈ ವರ್ಷ ಒಂದು ತಿಂಗಳು ಮೊದಲೇ ವಿದ್ಯುತ್ ಉತ್ಪಾದನೆ ಆರಂಭಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ಮುಂಗಾರು ಪೂರ್ವ ಮಳೆ ಕಾರಣ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು ಮುಂಜಾಗ್ರತೆಯ ಕ್ರಮವಾಗಿ 10 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ನದಿ ತೀರದಲ್ಲಿ ಜನ ಜಾನುವಾರುಗಳನ್ನು ನದಿಗೆ ಇಳಿಸಬಾರದು.– ಡಿ.ಬಸವರಾಜ ಸಿ.ಇ ಆಲಮಟ್ಟಿ
ರೈತರ ಒತ್ತಡ ಕಾರಣವೇ?
ಆಲಮಟ್ಟಿ ಜಲಾಶಯದ ಮಟ್ಟ 519.60 ಮೀ ನಿಂದ 508 ಮೀ.ವರೆಗೆ ಇಳಿಕೆಯಾದಾಗ ಜಲಾಶಯದ ಹಿಂಭಾಗದ ಲಭ್ಯವಾಗುವ ಸಾವಿರಾರು ಎಕರೆ ಫಲವತ್ತಾದ ಜಮೀನಿನಲ್ಲಿ ರೈತರು ಒಂದು ಬೆಳೆ ಬೆಳೆಯುತ್ತಾರೆ. ಜೂನ್ 15 ರವರೆಗೂ ನೀರು ಬರುವುದಿಲ್ಲ ಎಂಬ ಕಾರಣಕ್ಕೆ ಎಲ್ಲರೂ ಬೆಳೆಯುತ್ತಾರೆ. ಆದರೆ ಈ ಸಲ ಬೇಗನೇ ನೀರು ಬರುತ್ತಿದೆ. ಆ ಎಲ್ಲಾ ಬೆಳೆಗಳ ಫಸಲು ಇನ್ನೂ ಕೆಲ ದಿನಗಳಲ್ಲಿ ರೈತರ ಕೈಗೆ ಬರುತ್ತದೆ. ಆ ರೈತರ ಹಾಗೂ ಹಿನ್ನೀರು ಭಾಗದ ಜನಪ್ರತಿನಿಧಿಗಳ ಒತ್ತಡಕ್ಕಾಗಿ ನೀರು ಬಿಡಲಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಆದರೆ ಇದನ್ನು ಕೆಬಿಜೆಎನ್ ಎಲ್ ಅಧಿಕಾರಿಗಳು ನಿರಾಕರಿಸಿದ್ದು ಜಲಾಶಯದಲ್ಲಿ ನೀರು ಲಭ್ಯವಿದ್ದು ನಾರಾಯಣಪುರ ಜಲಾಶಯಕ್ಕೆ ನೀರು ಬಿಡಲಾಗುತ್ತಿದೆ. ನೀರು ನಿರ್ವಹಣೆಯ ಭಾಗವಾಗಿ ನೀರನ್ನು ಬಿಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.