ಆಲಮಟ್ಟಿ: ಭಾರತವು ಪಾಕ್ ಭಯೋತ್ಪಾದನೆ ನೆಲಗಟ್ಟಿನ ಮೇಲೆ ದಾಳಿ ನಡೆಸಿದ ಬಳಿಕ, ಭದ್ರತಾ ದೃಷ್ಟಿಯಿಂದ ಆಲಮಟ್ಟಿ ಅಣೆಕಟ್ಟಿಯಲ್ಲಿ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಜಲಾಶಯದ ಭದ್ರತೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್‌ಐಎಸ್‌ಎಫ್) ಅಧೀನದಲ್ಲಿದ್ದು, ದಿನದ 24 ಗಂಟೆಯೂ ಜಲಾಶಯಕ್ಕೆ ಹೆಚ್ಚಿನ ಭದ್ರತೆ ಇದೆ.
‘ದಾಳಿಯ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಿಂದ ಅಣೆಕಟ್ಟುಗಳ ಬಳಿ ಹೆಚ್ಚಿನ ಭದ್ರತೆ ಕೈಗೊಳ್ಳುವಂತೆ ಸೂಚನೆಯಿದೆ. ಆಲಮಟ್ಟಿ ಪೆಟ್ರೋಲ್ ಪಂಪ್‌ನಿಂದ ಆಲಮಟ್ಟಿಗೆ ಬರುವ ಪ್ರತಿ ವಾಹನದ ವಿವರವನ್ನು ಸಂಗ್ರಹಿಸಲಾಗುತ್ತಿದ್ದು, ಅಗತ್ಯ ಬಿದ್ದರೆ ತಪಾಸಣೆ ನಡೆಸಲಾಗುತ್ತಿದೆ. ಸಿಬ್ಬಂದಿ ಬಳಿ ಅತ್ಯಾಧುನಿಕ ಆಯುಧಗಳು, ಬಂದೂಕುಗಳು, ಮದ್ದುಗುಂಡುಗಳಿವೆ’ ಎಂದು ಅಣೆಕಟ್ಟು ಭದ್ರತಾ ಉಸ್ತುವಾರಿ ಅಧಿಕಾರಿ ಕೆಎಸ್‌ಐಎಸ್‌ಎಫ್ ಇನ್‌ಸ್ಪೆಕ್ಟರ್ ಶಿವಲಿಂಗ ಕುರೆನ್ನವರ ಮಾಹಿತಿ ನೀಡಿದರು.
ಭಾರಿ ವಾಹನ ನಿಷೇಧ: ಆಲಮಟ್ಟಿಯ ಪೆಟ್ರೋಲ್ ಪಂಪ್‌ನಿಂದ ಹಾಗೂ ಜವಾಹರ ನವೋದಯ ವಿದ್ಯಾಲಯದ ಬಳಿಯ ಗೇಟ್‌ಗಳಿಂದ ಆಲಮಟ್ಟಿಯೊಳಗೆ ಭಾರಿ ವಾಹನ, ಗೂಡ್ಸ್ ವಾಹನ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಗತ್ಯವಿದ್ದರೆ ಮಾತ್ರ ಕೆಬಿಜೆಎನ್‌ಎಲ್ ಅಧಿಕಾರಿಗಳ ಅನುಮತಿ ಪಡೆದು ವಾಹನ ಪ್ರವೇಶ ಪಡೆಯಬಹುದು.
ಜಲಾಶಯದ ಭದ್ರತೆಗೆ ಒಬ್ಬ ಅಸಿಸ್ಟೆಂಟ್ ಕಮಾಂಡೆಂಟ್ (ಡಿವೈಎಸ್‌ಪಿ ಕೇಡರ್) ಇದ್ದು, ಇಬ್ಬರು ಇನ್ಸ್‌ಪೆಕ್ಟರ್, ಒಬ್ಬ ಪಿಎಸ್‌ಐ, 17 ಜನ ಎಎಸ್‌ಐ, 65 ಜನ ಪೊಲೀಸರು ದಿನದ 24 ಗಂಟೆಯೂ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.
ಅಣೆಕಟ್ಟು ಹಿನ್ನೀರಿನಲ್ಲಿ ಬೋಟ್ ಮುಖಾಂತರ ರಾತ್ರಿ ಒಮ್ಮೆ, ಹಗಲು ಎರಡು ಬಾರಿ ಪೆಟ್ರೋಲಿಂಗ್ ನಡೆಸಿ ತಪಾಸಣೆ ನಡೆಸಲಾಗುತ್ತದೆ. ಜಲಾಶಯದ ಮುಂಭಾಗದಲ್ಲಿ ನೀರು ಇಲ್ಲದ ಕಾರಣ, ಜಲಾಶಯದ ಕೆಳಭಾಗದಲ್ಲಿಯೂ ಪೊಲೀಸರನ್ನು ನಿಯೋಜಿಸಲಾಗಿದೆ. ನಿಯೋಜನೆಗೊಂಡ ಪೊಲೀಸರು ಕಾರ್ಯವೈಖರಿಯನ್ನು ಪ್ರತಿ ಗಂಟೆಗೊಮ್ಮೆ ಪಿಎಸ್‌ಐ ಮಟ್ಟದ ಅಧಿಕಾರಿಗಳು ತೆರಳಿ ಪರಿಶೀಲಿಸುತ್ತಾರೆ. ಕೆಎಸ್‌ಐಎಸ್‌ಎಫ್‌ನ ಸಿಬ್ಬಂದಿಯ ರಜೆ ಕಡಿತಗೊಳಿಸಿದ್ದು, ಕೇಂದ್ರ ಸ್ಥಾನ ಬಿಟ್ಟು ತೆರಳದಂತೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.