ADVERTISEMENT

ಆಲಮಟ್ಟಿ ಜಲಾಶಯ: 26 ಗೇಟ್‌ಗಳಿಂದ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 16:20 IST
Last Updated 27 ಜೂನ್ 2025, 16:20 IST

ಆಲಮಟ್ಟಿ: ಆಲಮಟ್ಟಿ ಜಲಾಶಯದ ಒಳಹರಿವು ಶುಕ್ರವಾರ ಸಂಜೆ 1,20,861 ಕ್ಯೂಸೆಕ್‌ಗೆ ಹೆಚ್ಚಳವಾಗಿದ್ದರಿಂದ ಸಂಜೆ 7.30ಕ್ಕೆ  ಹೊರಹರಿವನ್ನು 90,000 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ.

ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯದ ಒಳಹರಿವು ದಿನೇ ದಿನೇ ಏರಿಕೆಯಾಗುತ್ತಿದೆ.

ಕಳೆದ ಮೂರು ದಿನಗಳಿಂದ ಹೊರಹರಿವು 70 ಸಾವಿರ ಕ್ಯೂಸೆಕ್ ಇತ್ತು. ಆದರೆ ಶುಕ್ರವಾರ ರಾತ್ರಿ ಅದನ್ನು ಹೆಚ್ಚಿಸಲಾಯಿತು. ಜಲಾಶಯದ ಎಲ್ಲ 26 ಗೇಟ್‌ಗಳಿಂದ 47,500 ಕ್ಯೂಸೆಕ್ ಹಾಗೂ ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ 42,500 ಕ್ಯೂಸೆಕ್ ಸೇರಿ 90,000 ಕ್ಯೂಸೆಕ್ ನೀರನ್ನು ನದಿಪಾತ್ರಕ್ಕೆ ಹರಿಸಲಾಗುತ್ತಿದೆ.

ADVERTISEMENT

ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ಗೇಟ್‌ಗಳನ್ನು ತೆರೆದು ನೀರು ಬಿಡಲಾಗುತ್ತಿದೆ. ಜಲಾಶಯದಲ್ಲಿ 516.97 ಮೀ ಎತ್ತರದವರೆಗೆ 84.096 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.‌ ಜಲಾಶಯದ ಸಂಗ್ರಹ ಸಾಮರ್ಥ್ಯದ ಶೇ68.33 ರಷ್ಟು ಭರ್ತಿಯಾಗಿದೆ.

ಜಲಾಶಯ ಭರ್ತಿಯತ್ತ ಸಾಗಿದ್ದರಿಂದ ಕಾಲುವೆಗೆ ನೀರು ಹರಿಸುವ ಬೇಡಿಕೆ ಹೆಚ್ಚಿದ್ದು, ಜುಲೈ 1ರಂದು ಬೆಂಗಳೂರಿನಲ್ಲಿ ನಡೆಯಲಿರುವ ನೀರಾವರಿ ಸಲಹಾ ಸಮಿತಿ ಸಭೆ (ಐಸಿಸಿ)ಯನ್ನು ರದ್ದುಗೊಳಿಸಿ ಆಲಮಟ್ಟಿಯಲ್ಲಿಯೇ ನಡೆಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.