
ಪ್ರಜಾವಾಣಿ ವಾರ್ತೆ
ಆಲಮಟ್ಟಿ: ಸಂಕ್ರಾಂತಿ ಅಂಗವಾಗಿ ಇಲ್ಲಿನ ನದಿಯಲ್ಲಿ ಪುಣ್ಯಸ್ನಾನ ಮಾಡಲು ಆಗಮಿಸಿದ್ದ ಭಕ್ತರ ಸಂಖ್ಯೆ ಕಡಿಮೆಯಿತ್ತು.
ಪ್ರತಿ ವರ್ಷ ಸಂಕ್ರಾಂತಿಯಂದು ಆಲಮಟ್ಟಿಯಲ್ಲಿ 25 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿ, ಪುಣ್ಯಸ್ನಾನ ಮಾಡುತ್ತಿದ್ದರು. ಆಲಮಟ್ಟಿ ಪೆಟ್ರೋಲ್ ಪಂಪ್‌ನಿಂದ ಅಣೆಕಟ್ಟೆ ವೃತ್ತದವರೆಗೆ ಜನ ಜಾತ್ರೆ ಇರುತ್ತಿತ್ತು. ಗುರುವಾರ, ಸಂಕ್ರಾಂತಿ ಹಬ್ಬವಿದ್ದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲಿಲ್ಲ.
ಆಲಮಟ್ಟಿಯ ಚಂದ್ರಮ್ಮಾ ದೇವಸ್ಥಾನ, ಪಾರ್ವತಿ ಕಟ್ಟಾ ಸೇತುವೆ, ಜಲಾಶಯದ ಮುಂಭಾಗ, ಸೀತಿಮನಿ, ಯಲಗೂರು ಮೊದಲಾದೆಡೆ ಜನರು ಕುಟುಂಬ ಸಮೇತರಾಗಿ, ತಂಡೋಪತಂಡವಾಗಿ ಆಗಮಿಸಿ ಕೃಷ್ಣಾ ನದಿಯಲ್ಲಿ ಮಿಂದೆದ್ದರು.
ಸಂಜೆ, ಸಂಗೀತ ಕಾರಂಜಿಯುಳ್ಳ ಆಲಮಟ್ಟಿ ಉದ್ಯಾನಕ್ಕೆ ತುಸು ಹೆಚ್ಚಿನ ಸಂಖ್ಯೆಲ್ಲಿ ಪ್ರವಾಸಿಗರು ಭೇಟಿ ನೀಡಿದರು. ಲೇಸರ್ ಪ್ರದರ್ಶನವನ್ನು ನಾಲ್ಕಕ್ಕೆ ಸೀಮಿತಗೊಳಿಸಲಾಯಿತು. ರಾಕ್ ಗಾರ್ಡನ್ ಬಳಿ ಬೋಟಿಂಗ್ ಹಾಗೂ ವಾಟರ್ ಅಮ್ಯೂಸ್ಮೆಂಟ್ ಪಾರ್ಕ್ ಆರಂಭಗೊಳ್ಳದ್ದೂ ಪ್ರವಾಸಿಗರಲ್ಲಿ ನಿರಾಸೆ ಮೂಡಿಸಿತು. ಸರಿಯಾಗಿ ವ್ಯಾಪಾರ ಆಗದೆ, ವ್ಯಾಪಾರಸ್ಥರೂ ಬೇಸರ ವ್ಯಕ್ತಪಡಿಸಿದರು.
ಬಂದೋಬಸ್ತ್: ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ನೇತೃತ್ವದಲ್ಲಿ ಸಿಪಿಐ, ಐವರು ಪಿಎಸ್‌ಐ, 70 ಕಾನ್‌ಸ್ಟೆಬಲ್, ಎರಡು ಡಿಎಆರ್ ಪಡೆಯನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು. ಕೆಎಸ್‌ಐಎಸ್‌ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಈರಣ್ಣ ವಾಲಿ ಹಾಗೂ ಇನ್‌ಸ್ಪೆಕ್ಟರ್ ಶಿವಲಿಂಗ ಕುರೆನ್ನವರ ನೇತೃತ್ವದಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯಸಿಬ್ಬಂದಿ ಭದ್ರತೆಗೆ ಸಹಕರಿಸಿದರು. ಅರಣ್ಯ ಇಲಾಖೆಯ ಡಿಎಫ್‌ಒ ಎನ್.ಕೆ. ಬಾಗಾಯತ್, ಆರ್‌ಎಫ್ಒ ಮಹೇಶ ಪಾಟೀಲ, ಕೃಷ್ಣಾ ಭಾಗ್ಯ ಜಲ ನಿಗಮದ ವಿವಿಧ ಅಧಿಕಾರಿಗಳು ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಿದರು.
Quote - ಆಲಮಟ್ಟಿಯ ಪ್ರವಾಸಿ ತಾಣಗಳಲ್ಲಿ ಹೊಸತನ ಇಲ್ಲ ಸಪ್ಪೆ ಎನಿಸುತ್ತಿದೆ. ಪ್ರವಾಸಿಗರನ್ನು ಆಕರ್ಷಿಸಲು ಉದ್ಯಾನಗಳಿಗೆ ಹೊಸ ಮೆರಗು ನೀಡಬೇಕಿದೆ ಎಚ್.ಜಿ. ಮಿರ್ಜಿ ಪ್ರವಾಸಿಗ ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.