
ಆಲಮಟ್ಟಿ: ನಿರ್ಮಾಣಗೊಂಡು ಎರಡು ವರ್ಷ ಕಳೆದರೂ ಉದ್ಘಾಟನೆಗಾಗಿ ಕಾದು ನಿಂತಿದ್ದ ‘ಆಲಮಟ್ಟಿ ವಾಟರ್ ಅಮ್ಯೂಸ್‌ಮೆಂಟ್ ಪಾರ್ಕ್’ ಫೆ. 6ರಂದು ಉದ್ಘಾಟನೆಯಾಗುವ ಸಾಧ್ಯತೆ ಇದೆ. ಅದಕ್ಕಾಗಿ ಅಗತ್ಯ ಸಿದ್ಧತೆ ಆರಂಭಗೊಂಡಿದೆ.
ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಇಲ್ಲಿಯ ಹೆಲಿಪ್ಯಾಡ್ ಹಿಂಬದಿಯಲ್ಲಿ ₹ 9.45 ಕೋಟಿ ವೆಚ್ಚದಲ್ಲಿ 5 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ವಾಟರ್ ಪಾರ್ಕ್ ನಿರ್ಮಾಣ ಆರಂಭ ಗೊಂಡಿದ್ದು 2022 ರಲ್ಲಿ. ಬಹುತೇಕ ಪೂರ್ಣಗೊಂಡಿದ್ದು 2024ರಲ್ಲಿ. ಆಗ ನಾಲ್ಕೈದು ಬಾರಿ ಪ್ರಾಯೋಗಿಕವಾಗಿ ಚಾಲನೆ ಮಾಡಿ ಪರೀಕ್ಷೆ ಮಾಡಲಾಗಿತ್ತು. ಅಂದಿನಿಂದಲೂ ಹಲವು ಕಾರಣಗಳಿಂದ ಉದ್ಘಾಟನೆಯಾಗದೇ ಪ್ರವಾಸಿಗರಿಗೆ ತೀವ್ರ ನಿರಾಸೆಯಾಗಿತ್ತು. ಈಗ ವಾಟರ್ ಪಾರ್ಕ್‌ನ ಸ್ವಚ್ಛತಾ ಕಾರ್ಯ ಆರಂಭಗೊಂಡಿದ್ದು, ಶೀಘ್ರದಲ್ಲೇ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವ ಸಾಧ್ಯತೆ ಇದೆ.
₹ 60 ಲಕ್ಷಕ್ಕೆ ಬಿಡ್, ಉದ್ಘಾಟನೆ ತಡವಾಗಿದ್ದಕ್ಕೆ ಕಾರಣ?: ವಾಟರ್ ಪಾರ್ಕ್ ನಿರ್ವಹಣೆಯನ್ನು ವಾಟರ್ ಅಮ್ಯೂಸ್‌ಮೆಂಟ್ ಕ್ಷೇತ್ರದಲ್ಲಿಯೇ ಪರಿಣಿತ ಏಜೆನ್ಸಿಗೆ ಗುತ್ತಿಗೆ ಕೊಡಲು ನಿರ್ಧರಿಸಿ ಟೆಂಡರ್ ಕರೆಯಲಾಗಿತ್ತು. ಬಿಡ್ ಮೊತ್ತ ಅತಿ ಹೆಚ್ಚಳದ ಕಾರಣಕ್ಕೆ ಮೂರು ಬಾರಿ ಟೆಂಡರ್ ಕರೆದರೂ ಯಾವುದೇ ಏಜೆನ್ಸಿಯೂ ಬಿಡ್ ಮಾಡದೇ ನಿರಾಸಕ್ತಿ ವ್ಯಕ್ತ ವಾಗಿತ್ತು.
ಈಗ ನಾಲ್ಕನೇ ಬಾರಿಗೆ ಬಿಡ್ ಮೊತ್ತ ಇಳಿಸಿದ್ದಕ್ಕೆ ಮಹಾರಾಷ್ಟ್ರದ ಸೋಲಾಪುರದ ‘ಶೋವರ್ ಆಂಡ್ ಟೋವರ್ ವಾಟರ್ ಪಾರ್ಕ್’ ಏಜೆನ್ಸಿಯವರಿಗೆ ಗುತ್ತಿಗೆ ದೊರಕಿದೆ. ಅವರು ವಾರ್ಷಿಕವಾಗಿ ₹ 60 ಲಕ್ಷವನ್ನು ಕೆಬಿಜೆಎನ್‌ಎಲ್‌ಗೆ ಪಾವತಿಸಬೇಕಿದೆ.
ವಿಶೇಷತೆ: ವಾಟರ್ ಪಾರ್ಕ್‌ನಲ್ಲಿ ಐದು ವಿಭಾಗಗಳಲ್ಲಿ ವಿವಿಧ ಜಲ ಕ್ರೀಡೆಗಳಿವೆ. ಐದು ರೀತಿಯ ಪಾಂಡ್‌ಗಳಿದ್ದು, ಅದರೊಳಗೆ ಟ್ಯಾಂಕ್ ನಿರ್ಮಿಸಲಾಗಿದೆ. ಪಾಂಡ್‌ನೊಳಗೆ ಉಪಯೋಗಿಸಿದ ನೀರು ಮತ್ತೆ ಶುದ್ಧೀಕರಿಸಿ, ಅದೇ ನೀರು ಮತ್ತೇ ಪಾಂಡ್‌ಗೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ.
9 ಮೀ. ಎತ್ತರದಿಂದ ನೀರಿನೊಂದಿಗೆ ಜಾರುವ 150 ಮೀಟರ್ ಉದ್ದದ ಸ್ಲೈಡಿಂಗ್, 6 ಮೀಟರ್ ಎತ್ತರದ 90 ಮೀಟರ್ ಉದ್ದದ ಸ್ಲೈಡಿಂಗ್ಸ್ ಇವೆ.
ವಾಟರ್ ಪಾರ್ಕ್‌ಗೆ ಪ್ರವೇಶದ್ವಾರ, ಪ್ರತೀಕ್ಷಣಾಲಯ, ಟಿಕೆಟ್ ಕೌಂಟರ್, ಲಾಕರ್ ಕೊಠಡಿ, ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಸ್ನಾನಗೃಹಗಳು (ಶಾವರ್), ಶೌಚಾಲಯಗಳು, ಕೆಫೆಟೆರಿಯಾ (ಕ್ಯಾಂಟಿನ್), ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಕಟ್ಟಡಗಳೂ ಇವೆ.
ವಾಟರ್ ಅಮ್ಯೂಸ್‌ಮೆಂಟ್ ಪಾರ್ಕ್‌ನ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಬಹುತೇಕ ಫೆಬ್ರುವರಿ ತಿಂಗಳಲ್ಲಿ ಉದ್ಘಾಟನೆಯಾಗಲಿದೆಡಿ.ಬಸವರಾಜ, ಮುಖ್ಯ ಎಂಜಿನಿಯರ್ ಆಲಮಟ್ಟಿ
₹400 ದರ ನಿಗದಿ
ವಾಟರ್ ಪಾರ್ಕ್‌ನ ಶುಲ್ಕ ನಿಗದಿಗೊಳಿಸಲಾಗಿದ್ದು ಹಿರಿಯರಿಗೆ ₹ 400 ಚಿಕ್ಕಮಕ್ಕಳಿಗೆ ₹ 200 ದರ ನಿಗದಿಪಡಿಸಲಾಗಿದೆ. ವಾಟರ್ ಪಾರ್ಕ್‌ನ ಎಲ್ಲ ಕ್ರೀಡೆಗಳನ್ನೂ ಆಡಬಹುದು. ಊಟ ತಿಂಡಿ ಬಟ್ಟೆಗೆ ಪ್ರತ್ಯೇಕ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.