ADVERTISEMENT

ಆಳೂರ ಸರ್ಕಾರಿ ಪ್ರೌಢಶಾಲೆ: ಶೌಚಾಲಯ ಇಲ್ಲದೆ ಪರದಾಟ

ಬಯಲು ಆಶ್ರಯಿಸಬೇಕಾದ ದುಃಸ್ಥಿತಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 6:54 IST
Last Updated 21 ಏಪ್ರಿಲ್ 2025, 6:54 IST
ಆಳೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ
ಆಳೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ   

ಇಂಡಿ: ತಾಲ್ಲೂಕಿನ ಆಳೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಾಲಯ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಶಾಲೆಯಲ್ಲಿರುವ ಒಟ್ಟು 180 ವಿದ್ಯಾರ್ಥಿಗಳಲ್ಲಿ 95 ವಿದ್ಯಾರ್ಥಿನಿಯರು ಹಾಗೂ 85 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೈದಾನ, ಕಟ್ಟಡ ಇದ್ದರೂ ಶೌಚಾಲಯ ಸೌಲಭ್ಯ ಇಲ್ಲ. ಇದರಿಂದ ಮಲ, ಮೂತ್ರ ವಿಸರ್ಜನೆಗೆ  ಹೊಲ ಆಶ್ರಯಿಸುವಂತಾಗಿದೆ. ವಿದ್ಯಾರ್ಥಿನಿಯರ ಪಾಡಂತೂ ಹೇಳತೀರದಾಗಿದೆ.

ಶಾಲೆಯ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿತ್ತು. ಇದು ಹಳೆಯದಾಗಿದ್ದಲ್ಲದೆ, ಶಾಲೆಗೆ ರಜೆ ಇದ್ದಾಗ ಕಿಡಿಗೇಡಿಗಳು ಶೌಚಾಲಯ ಕಟ್ಟಡ ಹಾಗೂ ನೀರಿನ ಸಂಪರ್ಕಕ್ಕೆ ಹಾನಿ ಮಾಡಿದ್ದಾರೆ. ಇದರಿಂದ ಶೌಚಾಲಯವು ಬಳಕೆಗೆ ಬಾರದಂತಾಗಿದೆ.

ADVERTISEMENT

ಹಾಳಾದ ಶೌಚಾಲಯವನ್ನು ದುರಸ್ತಿ ಮಾಡಿಸಿಕೊಡಬೇಕು. ಇಲ್ಲವಾದರೆ ಹೊಸ ಶೌಚಾಲಯ ನಿರ್ಮಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

‘ನಮ್ಮ ಶಾಲೆಯಲ್ಲಿ ಶೌಚಾಲಯ ಇಲ್ಲ. ಇದರಿಂದ ನಮಗೆ ಬಹಳಷ್ಟು ಸಮಸ್ಯೆಯಾಗಿದೆ. ಈ ಬಗ್ಗೆ ಶಿಕ್ಷಕರ ಗಮನಕ್ಕೆ ತಂದಿದ್ದೇವೆ. ಗ್ರಾಮ ಪಂಚಾಯಿತಿಗೆ ಮನವಿಯನ್ನೂ ಸಲ್ಲಿಸಿದ್ದೇವೆ. ಆದರೂ, ಶೌಚಾಲಯ ನಿರ್ಮಿಸಿಲ್ಲ. ಶೌಚಾಲಯದ ಅವಶ್ಯಕತೆ ತುಂಬಾ ಇದ್ದು ಕೂಡಲೇ ಈ ಕುರಿರು ಕ್ರಮ ವಹಿಸಬೇಕು’ ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದರು.

ಆಳೂರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೌಚಾಲಯ ನಿರ್ಮಿಸುವಂತೆ ಪಿಡಿಒಗೆ ಮನವಿ ಸಲ್ಲಿಸಿದ್ದೇನೆ.
–ವಿಜಯಕುಮಾರ ರಾಠೋಡ, ಶಾಲಾ ಸಮುದಾಯದತ್ತ ಕಾರ್ಯಕ್ರಮ ಅಧಿಕಾರಿ
ಆಳೂರ ಪ್ರೌಢಶಾಲೆಯಲ್ಲಿ ಶೌಚಾಲಯ ನಿರ್ಮಿಸುವಂತೆ ಲಿಖಿತ ಮನವಿ ಬಂದಿದೆ. ಶಾಲೆ ಆರಂಭಕ್ಕೂ ಮುನ್ನ ಶೌಚಾಲಯ ನಿರ್ಮಿಸಲಾಗುತ್ತದೆ.
–ಉಮೇಶ ಹೂಗಾರ, ಆಳೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.