ADVERTISEMENT

ವಿಜಯಪುರ: ಮನಸೂರೆಗೊಂಡ ಆಳ್ವಾಸ್ ಸಾಂಸ್ಕೃತಿಕ ವೈಭವ

500ಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರಿಂದ ಭಾರತೀಯ ನೃತ್ಯ, ಕಲೆ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:58 IST
Last Updated 27 ಫೆಬ್ರುವರಿ 2026, 7:58 IST
ವಿಜಯಪುರ ನಗರದ ದರ್ಬಾರ್‌ ಮೈದಾನದಲ್ಲಿ ಬುಧವಾರ ಸಂಜೆ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವಕ್ಕೆ ಸಂಸದ ರಮೇಶ ಜಿಗಜಿಣಗಿ, ಮಠಾಧೀಶರು ಚಾಲನೆ ನೀಡಿದರು 
ವಿಜಯಪುರ ನಗರದ ದರ್ಬಾರ್‌ ಮೈದಾನದಲ್ಲಿ ಬುಧವಾರ ಸಂಜೆ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವಕ್ಕೆ ಸಂಸದ ರಮೇಶ ಜಿಗಜಿಣಗಿ, ಮಠಾಧೀಶರು ಚಾಲನೆ ನೀಡಿದರು    

ವಿಜಯಪುರ: ನಗರದ ದರ್ಬಾರ್‌ ಮೈದಾನದಲ್ಲಿ ಬುಧವಾರ ಸಂಜೆ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವ ಗುಮ್ಮಟನಗರದ ಪ್ರೇಕ್ಷಕರ ಎದುರು ಭಾರತೀಯ ಕಲಾ ಲೋಕವನ್ನೇ ಅನಾವರಣಗೊಳಿಸಿತು.

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500ಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರು ಪ್ರದರ್ಶಿಸಿದ ನೃತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ಮಂತ್ರಮುಗ್ಧಗೊಳಿಸಿತು.

ಜಗಮಗಿಸುವ ವೇದಿಕೆಯ ಮೇಲೆ ಆರಂಭದಲ್ಲಿ ಶಿವನನ್ನು ಸ್ತುತಿಸುವ ಹಾಡಿಗೆ ಯೋಗಪಟುಗಳು ಯೋಗ ದೀಪಿಕಾ ಕಲಾತ್ಮಕ ಯೋಗ ಪ್ರದರ್ಶನ ನೀಡಿದರು. 

ADVERTISEMENT

ಒಂದೆಡೆ ಬಾಲಕರು ಮಲ್ಲಕಂಬದ ಮೇಲೆ ವಿವಿಧ ರಚನೆಗಳನ್ನು ಮಾಡಿ ತೋರಿಸಿ, ಪ್ರೇಕ್ಷಕರನ್ನು ಮುದಗೊಳಿಸಿದರು. ಇನ್ನೊಂದೆಡೆ ಬಾಲಕಿಯರು ಹಗ್ಗದ ಮೇಲೆ ನೇತಾಡುತ್ತಾ ಬಗೆಬಗೆಯ ಕಸರತ್ತುಗಳನ್ನು ಪ್ರದರ್ಶಿಸುವ ಮೂಲಕ ನೋಡುಗರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು.

ಮಣಿಪುರದ ಪ್ರಸಿದ್ಧ ಸ್ಟಿಕ್‌ ಡ್ಯಾನ್ಸ್‌ ಜೊತೆ  ಸಮರ ಕಲೆ ಪ್ರದರ್ಶನವಂತೂ ಪ್ರೇಕ್ಷಕರ ಮೈ ರೋಮಾಂಚನಗೊಳಿಸಿತು.  

ಕರಾವಳಿಯ ಪ್ರಸಿದ್ಧ ಯಕ್ಷಗಾನ ಪ್ರದರ್ಶನ ಬಯಲು ನಾಡಿನ ಪ್ರೇಕ್ಷಕರಿಗೂ ಖುಷಿ ನೀಡಿತು. ಶಿವ–ಪಾರ್ವತಿಯರ ಆದರ್ಶ ದಾಂಪತ್ಯದ ಚಿತ್ರಣ ನೀಡುವ ಬಡಗುತಿಟ್ಟು ಯಕ್ಷಗಾನ ‘ಶಂಕರಾರ್ಧ ಶರೀರಿಣಿ’ ಹಾಗೂ ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನ ಪ್ರಸ್ತುತಗೊಂಡಿತು.

ಸಾಂಪ್ರದಾಯಿಕ ಲಂಬಾಣಿ ನೃತ್ಯ,  ಅಷ್ಟ ಲಕ್ಷ್ಮಿಯರನ್ನು ಧರೆಗಿಳಿಸಿದ ಶಾಸ್ತ್ರೀಯ ನೃತ್ಯ... ಹೀಗೆ ಹತ್ತು ಹಲವು ಭಾರತೀಯ ಸಾಂಸ್ಕೃತಿಕ ಲೋಕವನ್ನು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಅನಾವರಣಗೊಳಿಸಿದರು.

ಅಷ್ಟಲಕ್ಷ್ಮಿಯರನ್ನು ಪರಿಚಯಿಸಿದ ಶಾಸ್ತ್ರೀಯ ನೃತ್ಯವು ಭೂಲೋಕಕ್ಕೆ ಲಕ್ಷ್ಮಿಯರೇ ಕರೆತಂದಂತ್ತಿತ್ತು. ಕಲಾವಿದೆಯರು ವಿವಿಧ ನೃತ್ಯಗಳ ಮೂಲಕ ಕಲಾರಸಿಕರ ಮನಕ್ಕೆ ಲಗ್ಗೆ ಇಟ್ಟರು.

ಗುಜರಾತ್‌ನ ದಾಂಡಿಯ ನೃತ್ಯ ಸಭಾಂಗಣದಲ್ಲಿ ತುಂಬಿದ್ದವರನ್ನು ಕುಳಿತಲ್ಲೇ ಕುಣಿಸಿತು. ಕಥಕ್‌ ವರ್ಷಧಾರೆ ನೃತ್ಯ, ಸಿಂಹಬೇಟೆಯ ಪುರುಲಿಯಾ ನೃತ್ಯ, ಬೊಂಬೆಗಳ ವಿನೋದಾವಳಿ ಪ್ರೇಕ್ಷಕರನ್ನು ಪುಳಕಗೊಳಿಸಿತು.

ಹಲವು ರಾಜರು ಕಲೆಗಳಿಗೆ ಆಶ್ರಯ ನೀಡಿ ಬೆಳೆಸಿದ್ದಾರೆ. ಆದರೆ ಇಂದಿನ ಸರ್ಕಾರಗಳಿಗೆ ಈ ಬಗ್ಗೆ ಆಸಕ್ತಿ ಇಲ್ಲ. ಈ ಕಾರಣಕ್ಕೆ ಕಲೆ ಕಲಾವಿದರನ್ನು ಬೆಳಸಿಕೊಂಡು ಹೋಗಬೇಕಿದೆ
– ಡಾ.ಮೋಹನ್‌ ಆಳ್ವಾ, ಅಧ್ಯಕ್ಷ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಮೂಡುಬಿದಿರೆ 

ಸಿದ್ದೇಶ್ವರ ಶ್ರೀಗಳಿಗೆ ಅರ್ಪಣೆ: ಆಳ್ವಾ

ವಿಜಯಪುರ: ‘ಆಳ್ವಾಸ್‌ ಸಾಂಸ್ಕೃತಿಕ ವೈಭವವನ್ನು ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಅರ್ಪಣೆ ಮಾಡುತ್ತೇನೆ’ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್‌ ಆಳ್ವಾ ಹೇಳಿದರು.

‘ದೇಶದಲ್ಲಿ 52 ಕೋಟಿ ಯುವ ಸಂಪತ್ತು ಇದೆ. ಜಗತ್ತಿನಲ್ಲಿ ಅತೀ ಹೆಚ್ಚು ಯುವ ಸಂಪತ್ತು ಭಾರತದಲ್ಲಿದೆ. ಯುವ ಸಂಪತ್ತಿನ ಜೊತೆ ಅಮೂಲ್ಯವಾದ ಸಾಂಸ್ಕೃತಿಕ ಸಂಪತ್ತು ಇದೆ. ದೇಶದ ಸಾಂಸ್ಕೃತಿಕ ಬದುಕು ಶ್ರೀಮಂತವಾಗಿದೆ. ಈ ಎರಡು ಸಂಪತ್ತುಗಳ ಸದುಪಯೋಗವಾಗಬೇಕಿದೆ’ ಎಂದರು.

‘ಐದು ಸಾವಿರ ವರ್ಷಗಳಿಂದ ಕಟ್ಟಿ ಬೆಳೆಸಿದ ಸಂಗೀತ ನೃತ್ಯ ಕಲೆ ವಾದ್ಯ ಜಾನಪದ ಕಲೆಯನ್ನು ಇಂದಿನ ಯುವ ಜನತೆಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಹೇಳಿದರು.

‘ಸೌಂದರ್ಯ ಪ್ರಜ್ಞೆಯನ್ನು ಲೋಕಕ್ಕೆ ಕಟ್ಟಿಕೊಡಬೇಕಿದೆ. ಸೌಂದರ್ಯ ಪ್ರಜ್ಞೆ ಇರುವವರು ಈ ದೇಶದ ಸಂಪತ್ತು. ಯಾರಿಗೆ ಸೌಂದರ್ಯ ಪ್ರಜ್ಞೆ ಇಲ್ಲವೋ ಅವರು ದೇಶಕ್ಕೆ ಅಪಾಯಕಾರಿ’ ಎಂದು ಹೇಳಿದರು. ಸಂಸದ ರಮೇಶ ಜಿಗಜಿಣಗಿ ಜ್ಞಾನ ಯೋಗಾಶ್ರಮದ ಬಸವ ಲಿಂಗ ಸ್ವಾಮೀಜಿ ಮಹಾನಗರ ಪಾಲಿಕೆ ಮೇಯರ್‌ ಎಂ.ಎಸ್‌.ಕರಡಿ ಪಾಲಿಕೆ ಸದಸ್ಯ ದಿನೇಶ ಹಳ್ಳಿ ಆಳ್ವಾಸ್‌ ನುಡಿಸಿರಿ ವಿರಾಸತ್‌ ವಿಜಯಪುರ ಘಟಕದ ಪದಾಧಿಕಾರಿ ಚಂದ್ರಕಾಂತ ಶೆಟ್ಟಿ ಡಾ.ಕೆ.ಬಿ.ನಾಗೂರ ರಾಜಶೇಖರ್ ಮಗಿಮಠ ನಿಂಗನಗೌಡ ಬಿರಾದಾರ ಸುರೇಶ ಲೋಣಿ ರಾಜೇಶ ದರಬಾರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.