ADVERTISEMENT

‘ಅನುಕಂಪ ಬಯಸದೆ ಸ್ವಾವಲಂಬಿಗಳಾಗಿ’

ಅಂಗವಿಕಲರಿಗೆ ಜಿಲ್ಲಾಧಿಕಾರಿ ಸಂಜಯ ಬಿ.ಶೆಟ್ಟೆಣ್ಣವರ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 14:51 IST
Last Updated 3 ಡಿಸೆಂಬರ್ 2018, 14:51 IST
ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಪದಾಧಿಕಾರಿಗಳು, ಸೋಮವಾರ ವಿಜಯಪುರದ ಅಂಬೇಡ್ಕರ್‌ ಕ್ರೀಡಾಂಗಣದ ಮುಂಭಾಗ ಅಂಗವಿಕಲ ಕ್ರೀಡಾಪಟುಗಳಿಗೆ ಅನ್ಯಾಯ ಎಸಗಲಾಗುತ್ತಿದೆ ಎಂದು ದೂರಿ ಪ್ರತಿಭಟಿಸಿದರು. ಇಲಾಖೆಯ ಅಧಿಕಾರಿ, ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರುಪ್ರಜಾವಾಣಿ ಚಿತ್ರ
ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಪದಾಧಿಕಾರಿಗಳು, ಸೋಮವಾರ ವಿಜಯಪುರದ ಅಂಬೇಡ್ಕರ್‌ ಕ್ರೀಡಾಂಗಣದ ಮುಂಭಾಗ ಅಂಗವಿಕಲ ಕ್ರೀಡಾಪಟುಗಳಿಗೆ ಅನ್ಯಾಯ ಎಸಗಲಾಗುತ್ತಿದೆ ಎಂದು ದೂರಿ ಪ್ರತಿಭಟಿಸಿದರು. ಇಲಾಖೆಯ ಅಧಿಕಾರಿ, ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರುಪ್ರಜಾವಾಣಿ ಚಿತ್ರ   

ವಿಜಯಪುರ: ‘ಅಂಗವಿಕಲರನ್ನು ಈಚೆಗೆ ವಿಶೇಷ ಚೇತನರು ಎಂದು ಕರೆಯಲಾಗುತ್ತಿದೆ. ದೈಹಿಕವಾಗಿ ನೀವು ಇತರರಿಗಿಂತ ಭಿನ್ನರಾಗಿದ್ದರೂ; ವಿಶೇಷ ಶಕ್ತಿಯನ್ನು ಪಡೆದವರಾಗಿರುತ್ತೀರಿ. ಆದ್ದರಿಂದ ಇನ್ನೊಬ್ಬರಿಂದ ಅನುಕಂಪವನ್ನು ಬಯಸದೆ, ಸ್ವಾವಲಂಬಿಗಳಾಗಿ ಬದುಕಿ’ ಎಂದು ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಕಿವಿಮಾತು ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಸ್ಥಳೀಯ ಸಂಘ-–ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಂಗವಿಕಲರ ಕ್ರೀಡಾಕೂಟ, ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿದ ಅವರು ಮಾತನಾಡಿದರು.

‘ವಿಶ್ವ ಅಂಗವಿಕಲರ ದಿನಾಚರಣೆ 1992ರಿಂದ ಜಾರಿಗೆ ಬಂತು. ಅಂಗವಿಕಲರ ಅಭಿವೃದ್ದಿ ಹಾಗೂ ಸಬಲೀಕರಣಕ್ಕಾಗಿ ವಿಶ್ವಸಂಸ್ಥೆ ಹಲ ಕಾರ್ಯಕ್ರಮಗಳನ್ನು ರೂಪಿಸಿದೆ. ಅನೇಕ ಅಂತರರಾಷ್ಟ್ರೀಯ ಒಪ್ಪಂದಗಳು, ಸರ್ಕಾರದ ಆದೇಶಗಳೂ ಈ ಕುರಿತಂತೆ ಆಗಿವೆ. ಆದರೆ ಬೇರೆಯವರು ಕೊಡುವ ಸಹಾಯಗಳನ್ನು ಬಳಸಿಕೊಂಡು, ಆತ್ಮಗೌರವದಿಂದ ಬದುಕುವ ಛಲ ಅಂಗವಿಕಲರಲ್ಲಿ ಬರಬೇಕು’ ಎಂದು ಅವರು ಹೇಳಿದರು.

ADVERTISEMENT

‘ಸಮಾನ ವೇತನ, ಗೌರವ, ಪ್ರಾತಿನಿಧ್ಯ ನಿಮ್ಮ ಹಕ್ಕು. ನಿಮ್ಮ ದೌರ್ಬಲ್ಯವೇ ನಿಮ್ಮ ಶಕ್ತಿಯಾಗಿ ಪರಿವರ್ತನೆಯಾಗಬೇಕು. ನಿಮ್ಮ ಸ್ವಾಭಿಮಾನವನ್ನು ಬಿಟ್ಟು ಯಾರಿಂದಲೂ ಅನುಕಂಪ, ಕನಿಕರವನ್ನು ನಿರೀಕ್ಷಿಸಬೇಡಿ. ನಿಮಗೆ ಗ್ರಾಮ ಮಟ್ಟದಲ್ಲಿ ಸರ್ಕಾರಿ ಸೌಲಭ್ಯ ಪಡೆಯುವಲ್ಲಿ ತೊಂದರೆಯಾದಲ್ಲಿ, ಸ್ಥಳೀಯ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಅಥವಾ ಪಿಡಿಓಗಳನ್ನು ಸಂಪರ್ಕಿಸಿ. ನಿಮಗಾಗಿ ಸರ್ಕಾರ ನೀಡಿರುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಅಂಗವಿಕಲರ ಕ್ರೀಡಾಕೂಟ ಸಮಿತಿ ಅಧ್ಯಕ್ಷ ಎಚ್.ಪ್ರಸನ್ನ ಮಾತನಾಡಿ, ‘ಅಂಗವಿಕಲರಿಗೆಂದೇ ವಿಶೇಷ ಕ್ರೀಡಾಕೂಟಗಳನ್ನು ಸರ್ಕಾರ ಹಮ್ಮಿಕೊಳ್ಳುತ್ತದೆ. ನಿಮಗೆ ಸಾಧ್ಯವಿರುವ ಎಲ್ಲ ಕ್ರೀಡೆಗಳಲ್ಲೂ ಭಾಗವಹಿಸಿ. ನಿಮ್ಮ ಸಾಮರ್ಥ್ಯ ಸಾಬೀತುಪಡಿಸಿ’ ಎಂದು ಪ್ರೋತ್ಸಾಹದ ನುಡಿಗಳನ್ನಾಡಿದರು.

ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಜಿ.ಲೋಣಿ, ಜಾವೀದ ಜಮಾದಾರ, ಅಡಿವೆಪ್ಪ ಸಾಲಗಲ್ಲ, ನಾಗರಾಜ ಲಂಬು, ಅರವಿಂದ ಕೊಪ್ಪ, ಜಿತೇಂದ್ರ ಕಾಂಬ್ಳೆ, ವಿನೋದ ಖೇಡ ಉಪಸ್ಥಿತರಿದ್ದರು.

ಶಿವರಣ ಹರಳಯ್ಯ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದರು. ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ವಿ.ಜಿ.ಉಪಾಧ್ಯೆ ಸ್ವಾಗತಿಸಿ, ನಿರೂಪಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಅಶೋಕ ಕೆಲವಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.