ADVERTISEMENT

ಕ್ರೀಡಾಂಗಣ ನಿರ್ಮಾಣ: ₹15 ಕೋಟಿ ಅನುದಾನಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 16:22 IST
Last Updated 13 ಜೂನ್ 2025, 16:22 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ‘ಕ್ರೀಡಾಪಟುಗಳ ಅನುಕೂಲಕ್ಕಾಗಿ ನಗರದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಅಗತ್ಯವಿರುವ ₹15 ಕೋಟಿ ಅನುದಾನ ಮಂಜೂರು ಮಾಡಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

‘ನಗರದಲ್ಲಿ ಈಗಾಗಲೇ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ ಕ್ರೀಡಾಕೂಟ ಉತ್ತೇಜಿಸುವ ದೃಷ್ಟಿಯಿಂದ ಮಹಾನಗರ ಪಾಲಿಕೆಯ ಅಂದಾಜು ₹6.5 ಕೋಟಿಯಲ್ಲಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. ಇದರಿಂದ ಅಲ್ಲಿ ಯಾವುದೇ ಸಭೆ, ಸಮಾರಂಭ, ಧ್ವಜಾರೋಹಣ, ಕ್ರೀಡಾಕೂಟ ಹಮ್ಮಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದ್ದಾರೆ.

‘ಧ್ವಜಾರೋಹಣ, ಸರ್ಕಾರಿ ಮತ್ತು ಖಾಸಗಿ ಸಭೆಗಳು, ತರಬೇತಿ ಶಿಬಿರ, ರಾಜಕೀಯ, ಧಾರ್ಮಿಕ ಹಾಗೂ ಬೃಹತ್ ಸಭೆ-ಸಮಾರಂಭ ಮತ್ತು ಕ್ರೀಡಾಕೂಟ ಆಯೋಜನೆಗೆ ಕ್ರೀಡಾಂಗಣದ ಅವಶ್ಯಕತೆಯಿದೆ. ಜಿಲ್ಲಾಡಳಿತವು ಈಗಾಗಲೇ ಮಹಲ್‌ ಬಾಗಾಯತದ ಸರ್ವೇ ನಂ.811/ಅ ರಲ್ಲಿ ಇರುವ 77 ಎಕರೆ 10 ಗುಂಟೆ ಜಾಗದಲ್ಲಿ 10 ಎಕರೆ ಜಾಗವನ್ನು ಜಿಲ್ಲಾ ಕ್ರೀಡಾಂಗಣಕ್ಕೆ ಗುರುತಿಸಿದ್ದು, ಅಲ್ಲಿ ಹೊಸದಾಗಿ ವಿಜಯಪುರ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಅಗತ್ಯವಿರುವ ₹15 ಕೋಟಿ ಅನುದಾನವನ್ನು ಮಂಜೂರು ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿ, ಅನುಷ್ಠಾನಗೊಳಿಸಬೇಕು’ ಎಂದು ಪತ್ರದಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.