ADVERTISEMENT

ಅರೇಶಂಕರ 4.4 ಸೆಂ.ಮೀ. ಮಳೆ

ಚವನಭಾವಿ: ಸಿಡಿಲಿಗೆ ಆರು ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 13 ಮೇ 2022, 11:33 IST
Last Updated 13 ಮೇ 2022, 11:33 IST
ದೇವರಹಿಪ್ಪರಗಿಯಲ್ಲಿ ಎಚ್.ಪಿ ಗ್ಯಾಸ್ ಕಚೇರಿಯು ಸಿಡಿಲಿನ ಹೊಡೆತಕ್ಕೆ ಸಿಲುಕಿ ಸುಟ್ಟು ಸಂಪೂರ್ಣ ಹಾಳಾಗಿರುವುದು 
ದೇವರಹಿಪ್ಪರಗಿಯಲ್ಲಿ ಎಚ್.ಪಿ ಗ್ಯಾಸ್ ಕಚೇರಿಯು ಸಿಡಿಲಿನ ಹೊಡೆತಕ್ಕೆ ಸಿಲುಕಿ ಸುಟ್ಟು ಸಂಪೂರ್ಣ ಹಾಳಾಗಿರುವುದು    

ವಿಜಯಪುರ: ಜಿಲ್ಲೆಯಾದ್ಯಂತ ಗುರುವಾರ ಸಂಜೆಯಿಂದ ಶುಕ್ರವಾರ ಮುಂಜಾನೆ ವರೆಗೆ ಧಾರಾಕಾರಮಳೆಯಾಗಿದೆ. ಅತೀ ಹೆಚ್ಚು ಅಂದರೆ,ಅರೇಶಂಕರದಲ್ಲಿ 4.4 ಸೆಂ.ಮೀ. ಮಳೆಯಾಗಿದೆ. ಶುಕ್ರವಾರ ದಿನವಿಡೀ ದಟ್ಟ ಮೋಡ ಕವಿದ ವಾತಾವರಣ, ಜಿಟಿಜಿಟಿ ಮಳೆಯ ಪರಿಣಾಮ ವಿಜಯಪುರ ಜಿಲ್ಲೆ ಮಲೆನಾಡಿನಂತೆ ಕಂಡುಬಂದಿತು.

ವಿಜಯಪುರ ನಗರದಲ್ಲಿ 19.2ಮಿ.ಮೀ. ಮಳೆಯಾಗಿದೆ.ಆಲಮಟ್ಟಿ 24, ಮಟ್ಟಿಹಾಳ 28, ಬಬಲೇಶ್ವರ 37.8,ಇಂಡಿ 24.5,ಬಸವನ ಬಾಗೇವಾಡಿ 8.9.ಮನಗೂಳಿ 4.2, ಹೂವಿನ ಹಿಪ್ಪರಗಿ 14.2, ನಾಗಠಾಣ 15.3, ಭೂತನಾಳ 17.6, ಹಿಟ್ನಳ್ಳಿ 38.4, ತಿಕೋಟಾ 7.2, ಮಮದಾಪೂರ 3.8, ಕುಮಟಗಿ 14.6, ನಾದ ಬಿ.ಕೆ. 28.2, ಅಗರಖೇಡ 21.1, ಹೋರ್ತಿ 18.2, ಹಲಸಂಗಿ 17, ಚಡಚಣ 18, ಝಳಕಿ 12.5, ಮುದ್ದೆಬಿಹಾಳ 28, ನಾಲತವಾಡ 14.8, ತಾಳಿಕೋಟಿ 23, ಢವಳಗಿ 40.4, ಸಿಂದಗಿ 26.4, ಆಲಮೇಲ 15,ರಾಮನಹಳ್ಳಿ 8.6, ಕಡ್ಲೆವಾಡ 20.1 ಮತ್ತುದೇವರಹಿಪ್ಪರಗಿ 11.8 ಮಿ.ಮೀ. ಮಳೆಯಾಗಿದೆ.

ರಾತ್ರಿಯಿಡೀ ಜಿಟಿಜಿಟಿ ಮಳೆಯಾದ ಪರಿಣಾಮ ಹೊಲಗಳಲ್ಲಿ ನೀರು ನಿಂತಿದೆ. ಮುಂಗಾರು ಕೃಷಿ ಚಟುವಟಿಕೆಗೆ ಮಳೆಯಿಂದ ಅನುಕೂಲವಾಗಿದೆ.

ADVERTISEMENT

ಸಿಡಿಲಿಗೆ ಆರು ಕುರಿ ಸಾವು:

ಮುದ್ದೇಬಿಹಾಳ ತಾಲ್ಲೂಕಿನ ಚವನಭಾವಿ ಗ್ರಾಮದಲ್ಲಿ ಗುರುವಾರ ರಾತ್ರಿ 8 ಗಂಟೆಗೆ ಸಿಡಿಲು ಬಿದ್ದು ಮಲ್ಲಪ್ಪ ನಂದಪ್ಪ ಗುರಿಕಾರ ಅವರಿಗೆ ಸೇರಿದ ಆರು ಮೇಕೆಗಳು ಸಾವಿಗೀಡಾಗಿವೆ.

ಜಿಲ್ಲೆಯ ಬಹುತೇಕ ಕಡೆ ಗಾಳಿ–ಮಳೆಗೆ ವಿದ್ಯುತ್‌ ಕೈಕೊಟ್ಟ ಪರಿಣಾಮ ರಾತ್ರಿಯಿಡೀ ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು.

***

ಸಿಡಿಲಿಗೆ ಎಚ್.ಪಿ. ಗ್ಯಾಸ್ ಕಚೇರಿ ಬೆಂಕಿ

ದೇವರಹಿಪ್ಪರಗಿ: ಪಟ್ಟಣದಲ್ಲಿ ಗುರುವಾರ ರಾತ್ರಿ ಸಿಡಿಲಿನ ಹೊಡೆತದಿಂದ ಇನವರ್ಟರ್ ಬ್ಯಾಟರಿ ಸ್ಪೋಟಗೊಂಡು ಪರಿಣಾಮ ಎಚ್.ಪಿ ಗ್ಯಾಸ್ ಕಚೇರಿ ಬೆಂಕಿಗೆ ಆಹುತಿಯಾಗಿದೆ.

ಪಟ್ಟಣದ ಇಂಡಿ ರಸ್ತೆಯ ಇಂಗಳಗಿ ಕೆರೆ ಹತ್ತಿರದ ರಾಜೀವ್‌ ಗಾಂಧಿ ಗ್ರಾಮೀಣ ಎಲ್.ಪಿ.ಜಿ ವಿತರಣೆಯ ಎಚ್.ಪಿ ಗ್ಯಾಸ್ ಕಚೇರಿಗೆ ಸಿಡಿಲು ಬಡಿದು ಕಚೇರಿಯಲ್ಲಿನ ಎರಡು ಇನವರ್ಟರ್ ಬ್ಯಾಟರಿ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿತು.

ಈ ಸಮಯದಲ್ಲಿ ಕಚೇರಿಯಲ್ಲಿ ಯಾವುದೇ ಸಿಬ್ಬಂದಿ ಇರದ ಕಾರಣ ಅದೃಷ್ಟಾವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಕಚೇರಿಯಲ್ಲಿನ 3 ಕಂಪ್ಯೂಟರ್, 1 ಲ್ಯಾಪ್‌ ಟಾಪ್, 3 ಪ್ರಿಂಟರ್, 1 ಅಗ್ನಿಶಾಮಕ ತಡೆ ಉಪಕರಣ ಸೇರಿದಂತೆ ಗ್ಯಾಸ್ ಸಿಲಿಂಡರ್ ವಿತರಣೆಗೆ ಸಂಬಂಧಿಸಿದ ಕಾಗದ ಪತ್ರಗಳು. ಪೀಠೋಪಕರಣ ಸಹಿತ ಒಟ್ಟು 10 ರಿಂದ 13 ಲಕ್ಷ ಅಂದಾಜು ಮೌಲ್ಯದ ಆಸ್ತಿ ಬೆಂಕಿಗೆ ಆಹುತಿಯಾದವು.

ಗ್ಯಾಸ್ ಕಚೇರಿಗೆ ಬೆಂಕಿ ತಗುಲಿದ ಸುದ್ದಿ ಹಾಗೂ ಸ್ಪೋಟದ ಸದ್ದು ಕೇಳಿದ ಸುತ್ತಮುತ್ತಲಿನ ಜನ ಕೆಲ ಸಮಯ ಗಾಬರಿಗೊಳಗಾಗಿದ್ದರು. ಆದರೆ, ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮುಂದೆ ಯಾವುದೇ ಅನಾಹುತವಾಗದಂತೆ ಕ್ರಮ ಕೈಗೊಂಡರು.

ನಾವು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾಗ್ಯೂ ಪ್ರಾಕೃತಿಕ ವಿಕೋಪಗಳನ್ನು ತಡೆಯಲು ಸಾಧ್ಯವಿಲ್ಲ. ಸಿಡಿಲು ಕಚೇರಿಗೆ ಬಡಿದಿದೆ. ಸಾಕಷ್ಟು ಹಾನಿಯಾಗಿದೆ. ಆದರೆ ಯಾವುದೇ ಜೀವಹಾನಿಯಾಗಿಲ್ಲ ಎಂಬುವುದೇ ನೆಮ್ಮದಿಯ ವಿಚಾರ ಎಂದು ಪೊಲೀಸ್ ಸಿಬ್ಬಂದಿಯೊಂದಿಗೆ ಆಗಮಿಸಿದ ಗ್ಯಾಸ್ ವಿತರಣಾ ಕೇಂದ್ರದ ಮಾಲೀಕ ರಾಜೀವ್ ಗುತ್ತೇದಾರ ಪತ್ರಿಕೆಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.