
ವಿಜಯಪುರ: ‘ಚುನಾವಣೆ ಸಮೀಪ ಬಂದಾಗ ಕೆಲವರು ಗೊಂದಲ ಸೃಜಿಸುವ ಕೆಲಸ ಮಾಡುತ್ತಾರೆ. ಟಿಕೆಟ್ ನನ್ನ ಕೈಯಲ್ಲಿಯೇ ಇವೆ ಎಂದು ಹೇಳುತ್ತಾರೆ. ಬಿಜೆಪಿ ಟಿಕೆಟ್ ಯಾರ ಬಳಿಯೂ ಇಲ್ಲ, ಟಿಕೆಟ್ ಹಂಚಿಕೆಗೆ ತನ್ನದೇ ಆದ ಮಾನದಂಡಗಳನ್ನು ಬಿಜೆಪಿ ಅನುಸರಿಸುತ್ತದೆ. ಹತ್ತಾರು ಮಟ್ಟದಲ್ಲಿ ಚರ್ಚೆ, ವರಿಷ್ಠರ ಸಲಹೆ ಮೊದಲಾದ ಪ್ರಕ್ರಿಯೆಗಳನ್ನು ಆಧರಿಸಿ ಟಿಕೆಟ್ ನೀಡಲಾಗುತ್ತದೆ. ಈ ಬಗ್ಗೆ ಯಾವ ಗೊಂದಲವನ್ನೂ ಇಟ್ಟುಕೊಳ್ಳಬೇಡಿ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲೆಯ ಎಲ್ಲ ಮಂಡಳಗಳ ಸಂಘಟನಾತ್ಮಕ ಸಭೆ ಹಾಗೂ ಮುಂಬರುವ ಚುನಾವಣೆ ಮತ್ತು ಪಕ್ಷ ಬಲವರ್ಧನೆ ಕುರಿತಾದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವುದು ನಿಶ್ಚಿತ’ ಎಂದು ಹೇಳಿದರು.
‘ಕಳೆದ ಬಾರಿ ಕಾಂಗ್ರೆಸ್ ಜನರಿಗೆ ನೂರೆಂಟು ಸುಳ್ಳು ಹೇಳಿ, ಸುಳ್ಳು ಆಶ್ವಾಸನೆಗಳನ್ನು ಬಿತ್ತಿ ಹೇಗೋ ಅಧಿಕಾರ ಗದ್ದುಗೆ ಏರಿದೆ. ಆದರೆ, ಅಧಿಕಾರಕ್ಕೆ ಬಂದ ತಕ್ಷಣ ಕಾಂಗ್ರೆಸ್ ನೈಜ ಬಣ್ಣ ಜನತೆಯ ಮುಂದೆ ಬಯಲಾಗಿದೆ. ಹಗರಣಗಳಲ್ಲಿಯೇ ಮುಳುಗಿರುವ ಕಾಂಗ್ರೆಸ್‌ನಿಂದ ಯಾವ ಪ್ರಯೋಜನವೂ ಇಲ್ಲ ಎಂಬುದು ಜನರಿಗೂ ಅರ್ಥವಾಗಿದೆ’ ಎಂದರು.
ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಮಾತನಾಡಿ, ‘ಬಿಜೆಪಿಗೆ ಕಾರ್ಯಕರ್ತರೇ ದೊಡ್ಡ ಬಲ, ಕಾರ್ಯಕರ್ತರೇ ಶಕ್ತಿ, ಹೀಗಾಗಿ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಬಿಜೆಪಿ ಕಾರ್ಯಕರ್ತರು ಸನ್ನದ್ಧರಾಗಬೇಕು. ಲೂಟಿ ಸರ್ಕಾರವಾಗಿರುವ ಕಾಂಗ್ರೆಸ್ ಸರ್ಕಾರ ಕಿತ್ತೆಸೆಯಲು ಮುಂದಾಗಬೇಕು’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಮುಖಂಡರಾದ ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ವಿವೇಕಾನಂದ ಡಬ್ಬಿ, ಕಾಸುಗೌಡ ಬಿರಾದಾರ, ಸುರೇಶ ಬಿರಾದಾರ, ಸಂಜೀವ ಐಹೊಳಿ, ಗೋಪಾಲ ಘಟಕಾಂಬಳೆ, ಈರಣ್ಣ ರಾವೂರ, ಮಳುಗೌಡ ಪಾಟೀಲ, ಸಾಬು ಮಾಶ್ಯಾಳ, ಭೀಮಾಶಂಕರ ಬಿರಾದಾರ, ಬಸವರಾಜ ಬೈಚಬಾಳ, ಶಿಲ್ಪಾ ಕುದರಗೊಂಡ, ಪ್ರಭುಗೌಡ ಬಿರಾದಾರ ಇದ್ದರು.
ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಜನವರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು. ಸ್ಪಷ್ಟತೆ ಬದ್ಧತೆಯ ಬಲದೊಂದಿಗೆ ಆತ್ಮ ವಿಶ್ವಾಸದೊಂದಿಗೆ ಕಾರ್ಯಕರ್ತರು ಕೆಲಸ ಮಾಡಬೇಕುಅರುಣ ಶಹಾಪುರ ವಿಧಾನ ಪರಿಷತ್ ಮಾಜಿ ಸದಸ್ಯ
ವಿಜಯಪುರ: ರಾಜ್ಯದಲ್ಲಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಒಂದು ಸಾವಿರ ದಿನವನ್ನು ವೈಫಲ್ಯ ಹಾಗೂ ಹಗರಣಗಳಿಂದಲೇ ಪೂರ್ಣಗೊಳಿಸಿದ್ದು ಸರ್ಕಾರದ ವೈಫಲ್ಯ ಪ್ರತಿಬಿಂಬಿಸುವ ಫೋಸ್ಟರ್‌ಗಳನ್ನು ಶಿವಾಜಿ ವೃತ್ತದಲ್ಲಿ ಸರ್ಕಾರಿ ಬಸ್‌ಗಳಿಗೆ ಅಂಟಿಸುವ ಅಭಿಯಾನ ನಡೆಯಿತು.
ಈ ಅಭಿಯಾನಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ರಾಜ್ಯ ಸರ್ಕಾರ ಹಗರಣದಲ್ಲಿಯೇ ಕಾಲಹರಣ ಮಾಡುತ್ತಿದೆ. ಅತ್ತ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡುತ್ತಿಲ್ಲ ಅನೇಕ ಯೋಜನೆಗಳ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿ ಸರ್ಕಾರದ ಬೊಕ್ಕಸವನ್ನೇ ಬರಿದು ಮಾಡಿ ಕರ್ನಾಟಕವನ್ನು ಆರ್ಥಿಕ ದಿವಾಳಿತನದತ್ತ ದೂಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಸಂಬಳ ನೀಡಲು ಹಣದ ಕೊರತೆ ಉಂಟಾಗಿದೆ ಎಂದರು. ಬಿಜೆಪಿ ನಗರ ಮಂಡಳ ಅಧ್ಯಕ್ಷ ಸಂದೀಪ ಪಾಟೀಲ ಚಿನ್ನು ಚಿನಗುಂಡಿ ವಿಜಯ ಜೋಶಿ ಗಣೇಶ ರಣದೇವಿ ವಿಕಾಸ್ ಪದಕಿ ಆನಂದ ಮುಚ್ಚಂಡಿ ವಿವೇಕ ತಾವರಗೇರಿ ಸಂಜೀವ ಬಡಿಗೇರ ಸತೀಶ ಗೇಸುದರಾಜ್ ಇನಾಮದಾರ ಗಣೇಶ ಉಪ್ಪಾರ ಸತೀಶ ಗಾಯಕವಾಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.