
ಆಲಮಟ್ಟಿ: ಸಮೀಪದ ಚಿಮ್ಮಲಗಿ ಭಾಗ-1 ಎ ಗ್ರಾಮದಲ್ಲಿ ರಾಮ, ಲಕ್ಷ್ಮಣ, ಸೀತೆ, ಹನುಮಂತ (ರಾಮನ ಪರಿವಾರ)ನ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ಕಾಲ ಜರುಗಿತು.
12 ನೇ ಶತಮಾನದಿಂದಲೂ ಗ್ರಾಮದಲ್ಲಿನ ಚಿಮ್ಮಲಗಿ ಆಚಾರ್ಯರ ಮನೆತನದಿಂದ ಪೂಜಿಸಲ್ಪಡುತ್ತಿರುವ ಈ ರಾಮ ಪರಿವಾರದ ಮೂರ್ತಿಗಳು ಈಚೆಗೆ ಭಿನ್ನವಾಗಿದ್ದವು. ಅದಕ್ಕಾಗಿ ದೇವಸ್ಥಾನವನ್ನು ಪುನರ್ ನವೀಕರಣಗೊಳಿಸಿ, ಹೊಸದಾಗಿ ಮೈಸೂರಿನ ಖ್ಯಾತ ಶಿಲ್ಪಿ (ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತಿದ) ಅರುಣ ಯೋಗಿರಾಜ್ ಅವರ ಕೈಯಲ್ಲಿ ಈ ಮೂರ್ತಿಗಳನ್ನು ಕೆತ್ತಿಸಿ ತರಲಾಗಿತ್ತು. ಎರಡೂವರೆ ಅಡಿ ಎತ್ತರದ ಈ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸಾಂಪ್ರದಾಯಿಕವಾಗಿ, ವಿವಿಧ ಹೋಮ, ಹವನ, ಪೂಜೆಗಳ ಮಧ್ಯೆ ಎರಡು ದಿನಗಳ ಕಾಲ ವಿಜ್ರಂಭಣೆಯಿಂದ ಜರುಗಿತು.
ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು.
ವಿದ್ಯಾಧೀಶಾಚಾರ್ಯ ಗುತ್ತಲ, ಪಂಡಿತ ಸಂಜೀವಾಚಾರ್ಯ ಮದಬಾವಿ, ಜಯಪ್ರಕಾಶ ಆಚಾರ್ಯ ಚಿಮ್ಮಲಗಿ, ಮತ್ತೀತರರ ಗುರು ಬಳಗ ವಿವಿಧ ಪೂಜಾ, ಹೋಮ ಕಾರ್ಯಕ್ರಮಗಳನ್ನು ನಿರ್ವಹಿಸಿದರು.
ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಮಾತನಾಡಿ, ರಾಮನಾಮ ಜಪವು ಮನಸ್ಸಿನ ಶಾಂತಿ, ಏಕಾಗ್ರತೆ, ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುವ ಅತ್ಯಂತ ಪ್ರಭಾವಶಾಲಿ ಸಾಧನೆಯಾಗಿದೆ ಎಂದರು.
ಜಯಪ್ರಕಾಶ ಆಚಾರ್ಯ ಚಿಮ್ಮಲಗಿ ಮಾತನಾಡಿದರು. ವಿದ್ಯಾಸಿಂಹಾಚಾರ್ಯರು, ಮದ್ವಾಚಾರ್ಯ ಮೊಕಾಶಿ, ಸತ್ಯಧಾನಾಚಾರ್ಯ ಕಟ್ಟಿ, ವಿಶ್ವಪ್ರಜ್ಞಾಚಾರ್ಯ ಮಾಹುಲಿ, ಶ್ಯಾಮಾಚಾರ್ಯ ಚಿಮ್ಮಲಗಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.