ವಿಜಯಪುರ: ಪ್ರತಿಯೊಬ್ಬ ನಾಗರಿಕ ಸ್ವಾವಲಂಬಿಯಾಗಬೇಕು ಎನ್ನುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅನೇಕ ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದಾರೆ, ಜೀವನಾವಶ್ಯಕ ವಸ್ತುಗಳ ಮೇಲೆ ಜಿಎಸ್‍ಟಿ ಕಡಿತಗೊಳಿಸುವ ಮೂಲಕ ಜನಸಾಮಾನ್ಯರಿಗೆ ದೊಡ್ಡ ಉಡುಗೊರೆ ನೀಡಿದ್ದು, ಸ್ವಾವಲಂಬಿ, ಸ್ವದೇಶಪ್ರೇಮ, ಸ್ವಾಭಿಮಾನದ ಸೂತ್ರಗಳು ಬದುಕಿನ ಭಾಗವಾಗಿಸಿಕೊಳ್ಳಲು ಕೇಂದ್ರ ಸರ್ಕಾರ ನೀಡುತ್ತಿರುವ ಕೊಡುಗೆ ಅನನ್ಯ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ‘ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ’ ಅಂಗವಾಗಿ ಜಾಗೃತಿ ಕಾರ್ಯಾಗಾರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಒಂದು ದೇಶ ಒಂದೇ ತೆರಿಗೆ, ಒಂದು ರಾಷ್ಟ್ರ ಒಂದೇ ರಸಗೊಬ್ಬರ, ಒಂದು ಜಿಲ್ಲೆ ಒಂದೇ ಉತ್ಪನ್ನ, ಒಂದು ರಾಷ್ಟ್ರ ಒಂದೇ ರೇಷನ್, ಒಂದು ಶ್ರೇಣಿ ಒಂದೇ ಪಿಂಚಣಿ ಇವೆಲ್ಲರೂ ಆತ್ಮ ನಿರ್ಭರದ ಸಾಕಾರ ರೂಪದ ಯೋಜನೆಗಳು ಎಂದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ತಂತ್ರಜ್ಞಾನ, ಆಹಾರ ಉತ್ಪಾದನೆ, ನ್ಯಾಯದಾನ ವ್ಯವಸ್ಥೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಅನೇಕ ಸುಧಾರಣೆಗಳನ್ನು ತರಲಾಗಿದ್ದು ಆತ್ಮನಿರ್ಭರ ಸಾಕ್ಷಾತ್ಕಾರವಾಗಿದೆ ಎಂದು ಹೇಳಿದರು.
ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ವಾವಲಂಬನೆ ಹಾಗೂ ಸ್ವದೇಶಿ ಉತ್ಪಾದನೆಗೆ ಆದ್ಯತೆ ಕಲ್ಪಿಸಿದ ಪರಿಣಾಮ ಆತ್ಮ ನಿರ್ಭರ ಭಾವ ಸಾಕಾರ ರೂಪ ತೆಳೆದಿದೆ ಎಂದರು.
ಗಗನಯಾನ ಗಗನಕುಸುಮವಾಗಿದ್ದ ಸಂದರ್ಭದಲ್ಲಿ ನಮ್ಮ ಸರ್ಕಾರ ಈ ವಲಯಕ್ಕೂ ಆದ್ಯತೆ ನೀಡಿದ್ದು, ಬಾಹ್ಯಾಕಾಶದಲ್ಲಿಯೇ ಅನುಪಮ ಸಾಧನೆ ಮಾಡುವ ಮೂಲಕ ದಿಟ್ಟ ಹೆಜ್ಜೆ ಇರಿಸಿದೆ, ಐತಿಹಾಸಿಕ ಚಂದ್ರಯಾನ ಯಶಸ್ವಿಯಾಗಿದೆ ಎಂದರು.
ಆತ್ಮ ನಿರ್ಭರ ಜಿಲ್ಲಾ ಸಂಚಾಲಕ ಎಸ್.ಎ. ಪಾಟೀಲ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಉಪ ಮೇಯರ್ ಸುಮಿತ್ರಾ ಜಾಧವ, ಮುಖಂಡರಾದ ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ಮಳುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಸಂಜೀವ ಐಹೊಳಿ, ಸಾಬು ಮಾಶ್ಯಾಳ, ಮಲ್ಲಿಕಾರ್ಜುನ ಜೋಗೂರ, ಕೃಷ್ಣಾ ಗುನ್ನಾಳಕರ, ಶಿಲ್ಪಾ ಕುದರಗೊಂಡ, ಪ್ರಭುಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ದೇವರಮನಿ, ಸುರೇಶ ಬಿರಾದಾರ, ಸ್ವಪ್ನಾ ಕಣಮುಚನಾಳ ಪಾಲ್ಗೊಂಡಿದ್ದರು.
ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಕಾರ್ಯ ಯೋಜನೆಗಳ ಮಹತ್ವಗಳನ್ನು ಮನೆ-ಮನೆಗೂ ತಲುಪಿಸುವ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕುರಮೇಶ ಜಿಗಜಿಣಗಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.