
ವಿಜಯಪುರ: ‘ನಗರದಲ್ಲಿ ಜ.12 ರಿಂದ ನಡೆಯುವ ಸಿದ್ದೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವದಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿ ಹಿಂದೂ ಸಂಘಟನೆಗಳ ಒಕ್ಕೂಟ ದೇವಸ್ಥಾನದ ಎದುರು ಅಳವಡಿಸಿದ್ದ ಬ್ಯಾನರ್ ತೆರವಿಗೆ ಮುಂದಾದ ದೇವಳದ ಸಿಬ್ಬಂದಿ ಹಾಗೂ ಸಂಘಟನೆಗಳ ಕಾರ್ಯಕರ್ತರ ಮಧ್ಯೆ ಭಾನುವಾರ ಮಾತಿನ ಚಕಮಕಿ ನಡೆಯಿತು.
ಸಿದ್ದೇಶ್ವರ ದೇವಸ್ಥಾನದ ಆಡಳಿತ ಮಂಡಳಿಗೆ, ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರಿಗೆ ಈ ಸಂಬಂಧ ಈಗಾಗಲೇ ಒಕ್ಕೂಟ ಮನವಿ ಸಲ್ಲಿಸಿತ್ತು. ಜತೆಗೆ ದೇವಸ್ಥಾನದ ಮುಂಭಾಗದಲ್ಲಿ, ‘ಸಿದ್ದೇಶ್ವರ ಜಾತ್ರೆಯಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಇದರ ಹೊರತಾಗಿ ಅನ್ಯ ಕೋಮಿನ ಲವ್ ಜಿಹಾದ್ ಹೆಸರಿನಲ್ಲಿ ತುಂಡು ತುಂಡಾಗಿ ಕತ್ತರಿಸುವ ಹಾಗೂ ದೇಶದ ಅಖಂಡತೆಗೆ ಧಕ್ಕೆ ತರುವ ಕೆಲಸ ಮಾಡುವ ಸಮುದಾಯದ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು’ ಎಂದು ಬರೆದಿರುವ ಬ್ಯಾನರ್ ಹಾಕಿಸಿತ್ತು.
ಈ ಬ್ಯಾನರ್ ತೆರವಿಗೆ ಸಿದ್ದೇಶ್ವರ ದೇವಸ್ಥಾನ ಆಡಳಿತ ಮಂಡಳಿ ಸಿಬ್ಬಂದಿ ಮುಂದಾಗಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಶ್ರೀರಾಮ ಸೇನೆಯ ಮುಖಂಡರು, ‘ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ ಅಖಂಡ ವಿಜಯಪುರದ ಹಿಂದೂಗಳಿಗೆ ಮಾತ್ರ ಸೇರಿದ್ದು, ಆದರೆ ಹಿಂದೂ ಸಂಘಟನೆಗಳ ಬ್ಯಾನರ್ ಕಿತ್ತುಹಾಕುವ ಉದ್ದೇಶವೇನು? ಹಿಂದೂಗಳ ಭಾವನೆಗೆ ಬೆಲೆ ಕೊಡದ ಪದಾಧಿಕಾರಿಗಳನ್ನು ಸಂಸ್ಥೆಯಿಂದ ತೆಗೆದು ಹಾಕಬೇಕು’ ಎಂದು ಒತ್ತಾಯಿಸಿದರು. ಕೆಲ ಕ್ಷಣ ವಾಗ್ವಾದ ನಡೆದು, ಬಳಿಕ ಮತ್ತೆ ಬ್ಯಾನರ್ ಯಥಾರೀತಿಯಲ್ಲಿ ಅಳವಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.