ADVERTISEMENT

ಅಯ್ಯನಗುಡಿ ರಥೋತ್ಸವ ಸಂಪನ್ನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:14 IST
Last Updated 29 ಜನವರಿ 2026, 6:14 IST
ನಾಲತವಾಡದ ಕೃಷ್ಣಾ ನದಿ ತೀರದ ಸುಕ್ಷೇತ್ರ ಅಯ್ಯನಗುಡಿ ಗಂಗಾಧರ ರಥೋತ್ಸವ ಸಂಭ್ರಮದಿಂದ ಜರುಗಿತು
ನಾಲತವಾಡದ ಕೃಷ್ಣಾ ನದಿ ತೀರದ ಸುಕ್ಷೇತ್ರ ಅಯ್ಯನಗುಡಿ ಗಂಗಾಧರ ರಥೋತ್ಸವ ಸಂಭ್ರಮದಿಂದ ಜರುಗಿತು   

ನಾಲತವಾಡ: ಹಿಂದೂ-ಮುಸ್ಲಿಮರ ಭಾವೈಕ್ಯದ ಹರಿಕಾರರಾಗಿರುವ ಕೃಷ್ಣಾ ನದಿ ತೀರದ ಸುಕ್ಷೇತ್ರ ಅಯ್ಯನಗುಡಿ ರಥೋತ್ಸವವು ಬುಧವಾರ ಸಂಜೆ ಲಕ್ಷಾಂತರ ಭಕ್ತರ ಜಯಘೋಷಗಳ ನಡುವೆ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.

ಶ್ರೀ ಗಂಗಾಧರ ರಥಕ್ಕೆ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಹಾಗೂ ನಾಡಗೌಡ್ರ ಕುಟುಂಬ ಸದಸ್ಯರು ವಿಶ್ವಕರ್ಮ ಸಮಾಜದ ಪುರವಂತರೊಂದಿಗೆ ಪೂಜೆ ಸಲ್ಲಿಸಿದರು. ರಥ ಬೀದಿಯಲ್ಲಿ ನೆರೆದಿದ್ದ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು.

‘ಏಕ್‌ ಲಾಕ್‌ ಐಂಸಿ ಹಜಾರ್‌ ಪಾಚೋ ಪೀರ್‌ ಪೈಗಂಬರ್‌ ಜೀತಾ ಪೈಗಂಬರ್‌ ಮಾನುದ್ದೀನ್‌, ಕಾಶೀಪತಿ ಗಂಗಾಧರ ಹರಹರ ಮಹಾದೇವ’ ಎನ್ನುವ ಗಂಗಾಧರ ಭಕ್ತರಿಂದ ಉದ್ಗರಿಸುವ ಜಯಘೋಷಗಳು ಆಕಾಶಕ್ಕೆ ತಲುಪಿ ದೇವಲೋಕದ ದೇವಾನು ದೇವತೆಗಳನ್ನು ಅಯ್ಯನಗುಡಿ ಕ್ಷೇತ್ರದೆಡೆಗೆ ಗಮನಿಸಲು ಕೋರುವಂತೆ ಭಾಸವಾಗುತ್ತಿತ್ತು.

ADVERTISEMENT

ಲಕ್ಷಾಂತರ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ಕಬ್ಬಿನ ಜಲ್ಲೆ, ಮುಡಿಪಾಗಿಟ್ಟ ನಾಣ್ಯ ಸೇರಿದಂತೆ ಮಂಗಳಕರ ವಸ್ತುಗಳನ್ನು ಅರ್ಪಿಸಿ ಕೈಮುಗಿದು, ಗಂಗಾಧರನ ರಥ ಎಳೆದು ಭಕ್ತಿ ಭಾವ ಮೆರೆದರು.

ಭಕ್ತವೃಂದಕ್ಕೆ ತೊಂದರೆಯಾಗದಂತೆ ದೇವಸ್ಥಾನದ ಸಮಿತಿಯವರು ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿದ್ದರು. ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಐಯ್ಯನಗುಡಿ ಉತ್ಸವ ಹಾಗೂ ಗಂಗಾಧರ ಜಾತ್ರೆಯಲ್ಲಿ ನಾಟಕ ಕಂಪನಿಗಳು, ತಿಂಡಿ ತಿನಿಸುಗಳು, ಸರ್ಕಸ್‌ ಕಂಪನಿಗಳು, ಮಕ್ಕಳಿಗೆ ಪ್ರಿಯವಾದ ಜೋಕಾಲಿಗಳು, ಮಕ್ಕಳ ಆಟಿಕೆ ಅಂಗಡಿಗಳು, ಹೆಂಗಳೆಯರಿಗೆ ಪ್ರಿಯವಾದ ಬಳೆಗಳು, ಜಿಲೇಬಿ, ಭಜಿ ಅಂಗಡಿಗಳು ಜನರನ್ನು ಸೆಳೆಯುತ್ತಿವೆ.

ರಥೋತ್ಸವದ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಮುನ್ನಾಧಣಿ ನಾಡಗೌಡ, ಚಿನ್ನು ಧಣಿ, ಬಾಳಾಸಾಹೇಬ ನಾಡಗೌಡ, ನಾಲತವಾಡ ಪಟ್ಟಣ ಪಂಚಾಯಿತಿ ಸದಸ್ಯ ಪೃಥ್ವಿರಾಜ್ ನಾಡಗೌಡ್ರು, ರಕ್ಕಸಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಿತೀಶ್ ನಾಡಗೌಡ, ಸಂಗಣ್ಣ (ಕುಮ್ಮಣ್ಣ) ದೇಶಮುಖ, ಶಂಕರರಾವ್ ದೇಶಮುಖ, ಗುರುಪ್ರಸಾದ ದೇಶಮುಖ, ಲೊಟಗೇರಿಯ ಗುರುಮೂರ್ತಿ ಕಣಕಾಲಮಠ, ಎ.ಜಿ. ಗಂಗನಗೌಡ್ರ, ಶಿವಪ್ಪಗೌಡ ತಾತರಡ್ಡಿ, ಬಸವರಾಜ ಯಾಳಗಿ, ಸಂಗಣ್ಣ ಪತ್ತಾರ ಪಾಲ್ಗೊಂಡಿದ್ದರು.

ನಾಲತವಾಡದ ಕೃಷ್ಣಾ ನದಿ ತೀರದ ಸುಕ್ಷೇತ್ರ ಅಯ್ಯನಗುಡಿ ಗಂಗಾಧರ ರಥೋತ್ಸವ ಸಂಭ್ರಮದಿಂದ ಜರುಗಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.