ADVERTISEMENT

ಬಬಲೇಶ್ವರಕ್ಕೆ ರಸ್ತೆ, ನೀರು ಸೌಲಭ್ಯ ಒದಗಿಸಿ

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:57 IST
Last Updated 20 ಜನವರಿ 2026, 2:57 IST
ಬಬಲೇಶ್ವರದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ  ಸೋಮವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು
ಬಬಲೇಶ್ವರದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ  ಸೋಮವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು   

ಬಬಲೇಶ್ವರ: ಪಟ್ಟಣದಲ್ಲಿ ತಾಲ್ಲೂಕು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳನ್ನು ಆರಂಭಿಸಲು ಹಾಗೂ ರಸ್ತೆ, ಕುಡಿಯುವ ನೀರು, ಶಾಲೆ, ಕಾಲೇಜು ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಶಾಂತವೀರ ಸ್ವಾಮೀಜಿ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಸೋಮವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಕಿರಸೂರ ಮಾತನಾಡಿ, ಬಬಲೇಶ್ವರ ತಾಲ್ಲೂಕು ಘೋಷಣೆ ಮಾಡಿ ಹಲವು ವರ್ಷಗಳು ಕಳೆದರು ತಾಲ್ಲೂಕಿನಲ್ಲಿ ಎಲ್ಲ ಇಲಾಖೆಗಳ ಕಚೇರಿಗಳನ್ನು ಪ್ರಾರಂಭಿಸದೇ ಇರುವುದು ನೋವಿನ ಸಂಗತಿ ಎಂದರು.

ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಸರ್ಕಾರ ಹೆಸರಿಗಷ್ಟೇ ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಿ, ಯಾವುದೇ ಕಚೇರಿಗಳನ್ನು ಪ್ರಾರಂಭಿಸದೇ ಕೈ ತೊಳೆದುಕೊಂಡಿದೆ. ತಾಲ್ಲೂಕಿನಲ್ಲಿ ಯಾವುದೇ ಕಚೇರಿಗಳು ಪ್ರಾರಂಭವಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ನಿತ್ಯದ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರಕ್ಕೆ ಅಲೆದಾಡುವಂತೆ ಮಾಡಿರುವ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದರು.

ADVERTISEMENT

ರೈತ ಮುಖಂಡ ಈರಪ್ಪ ಹಂಚನಾಳ ಮಾತನಾಡಿ, ತಾಲ್ಲೂಕಿನಲ್ಲಿ ರೈತರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳಿಸಿ ಹಲವಾರು ತಿಂಗಳು ಗತಿಸಿದರೂ ಕಾರ್ಖಾನೆ ಮಾಲೀಕರು ಕಬ್ಬಿನ ಬಿಲ್ ಪಾವತಿಸಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ವಾಲ್ಮಿಕಿ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ಡೋಣಿ ನದಿ ಹೂಳು ತೆಗೆಯಬೇಕು, 50 ಹಳ್ಳಿಗಳ ರಸ್ತೆಗಳನ್ನು ಡಾಂಬರೀಕರಣಗೊಳಿಸಬೇಕು. ಉಪಕಾಲುವೆಗಳು ನಿರ್ಮಾಣ ಮಾಡಿ ಎಲ್ಲ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ರೈತ ಭಾರತ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ, ಎಸ್.ಎಸ್. ಹಿರೇಮಠ, ರುದ್ರಪ್ಪ ಗೊಳಸಂಗಿ, ಸುರೇಶ ಬ್ಯಾಡಗಿ, ಸಿದ್ರಾಯ ಚೌರ, ಬಸವರಾಜ ಸುತಗುಂಡಿ, ಸಿದ್ಧರಾಮ ಹಳ್ಳೂರ, ಪುಟ್ಟು ಗಡದನ್ನವರ, ಲಕ್ಷ್ಮಣ ಕಂಬಾಗಿ, ಗುರನಗೌಡ ಬಿರಾದಾರ, ಲಕ್ಷ್ಮೀ ಬಿರಾದಾರ, ಸಂಗಮೇಶ ಬಿರಾದಾರ, ಮಳೆಪ್ಪ ಆನಿ, ಪ್ರಕಾಶ ಬಿರಾದಾರ, ಕುಮಾರ ಗುಣದಾಳ, ಶ್ರೀಶೈಲ ಕಂಬಾಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.