ಸಿಂದಗಿ: ಕಳೆದ 15 ವರ್ಷಗಳಿಂದ ಬಂದಾಳ ರಸ್ತೆ ಇದ್ದ ಸ್ಥಿತಿಯಲ್ಲಿಯೇ ಇದೆ. ಸಂಪೂರ್ಣ ಹದಗೆಟ್ಟು ಹೋಗಿದೆ. ಈ ರಸ್ತೆಯಲ್ಲಿ ಸಂಚರಿಸುವುದು ಅಷ್ಟೇ ಅಪಾಯಕಾರಿ ಆಗಿದೆ.
ವಾಹನಗಳ ಸಂಚಾರಕ್ಕೂ ಅಷ್ಟೇ ತೊಂದರೆ ಇದೆ. ಎಲ್ಲೆಂದರಲ್ಲಿ ದೊಡ್ಡ ದೊಡ್ಡ ಗುಂಡಿಗಳಿವೆ. ಅದರಲ್ಲಿ ನೀರು ನಿಂತಿದೆ. ಬೈಕ್ ಸವಾರರಂತೂ ಸರ್ಕಸ್ ಮಾಡುತ್ತ ಸಾಗಬೇಕಿದೆ.
ಪಾದಚಾರಿಗಳಿಗೆ ಹೋಗಲು ಸಾಧ್ಯವಿಲ್ಲದ ದುಃಸ್ಥಿತಿ ಇದೆ. ಇಷ್ಟೆಲ್ಲ ತೊಂದರೆಗಳನ್ನು ಸಾರ್ವಜನಿಕರು ಅನುಭವಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಯಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸುತ್ತಿಲ್ಲ. ಈ ರಸ್ತೆಗೆ ಮುಕ್ತಿ ಯಾವಾಗ? ಎಂಬುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ.
ಈ ರಸ್ತೆ ಕಾಮಗಾರಿಗೆ ಟೆಂಡರ್ ಆಗಿ ಅದೆಷ್ಟೋ ತಿಂಗಳೇ ಗತಿಸಿವೆ. ಅದಾದ ಅಷ್ಟೋ ತಿಂಗಳ ನಂತರ ಮತಕ್ಷೇತ್ರದ ಶಾಸಕರು ಕಾಮಗಾರಿ ಭೂಮಿಪೂಜೆ ಮಾಡಿ ತಿಂಗಳೇ ಆಗಿದೆ. ಆದರೂ ಕಾಮಗಾರಿ ಪ್ರಾರಂಭವಾಗುತ್ತಿಲ್ಲ.
ಬಂದಾಳ ಗ್ರಾಮಕ್ಕೆ ಹೋಗುವ ಜಿಲ್ಲಾ ಮುಖ್ಯ ರಸ್ತೆ 3-4 ವಾರ್ಡುಗಳಿಗೆ ಸಂಬಂಧಿಸಿದೆ. ರಸ್ತೆ ವಿಸ್ತರಣೆ ಮತ್ತು ಸುಧಾರಣೆ ಕಾಮಗಾರಿ ₹ 2 ಕೋಟಿ ವೆಚ್ಚದಲ್ಲಿ ಪ್ರಸ್ತಾಪಿತ ಕಿ.ಮೀ 0.00 ರಿಂದ ಕಿ.ಮೀ 0.940 ಇದೆ. ಅದರಲ್ಲಿ ಸ್ವಾಮಿ ವಿವೇಕಾನಂದ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಂದಾಳ ಮುಖ್ಯರಸ್ತೆ ಇದೆ.
₹2 ಕೋಟಿ ವೆಚ್ಚದಲ್ಲಿ ಸಿ.ಸಿ ರಸ್ತೆ, ಸಿ.ಸಿ ಚರಂಡಿ, ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ನಡೆಯಬೇಕಿದೆ. ರಸ್ತೆ ಕಾಮಗಾರಿ ಪ್ರಾರಂಭಿಸುವ ಮುನ್ನ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡುವ ಕಾರ್ಯ ಈಗಾಗಲೇ ಮುಗಿಯಬೇಕಿದ್ದರೂ ಗುತ್ತಿಗೆದಾರ ಯಾವ ಕೆಲಸಕ್ಕೂ ಮುಂದಾಗಿಲ್ಲ. ಈಗ ಮಳೆಗಾಲದಲ್ಲಿ ಈ ರಸ್ತೆಯಲ್ಲೆಲ್ಲ ಗುಂಡಿಗಳಲ್ಲಿ ನೀರು ನಿಂತು ಸಾರ್ವಜನಿಕರು ತುಂಬಾ ತೊಂದರೆಪಡುತ್ತಿದ್ದಾರೆ.
ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಪ್ರಶ್ನಿಸಿದರೆ ‘ನನ್ನ ಕೆಲಸ ನಾನು ಮಾಡಾಗಿದೆ. ಇನ್ನು ಗುತ್ತಿಗೆದಾರ ಕಾಮಗಾರಿ ಪ್ರಾರಂಭಿಸಬೇಕು. ಅವರು ಯಾಕೆ ವಿಳಂಬ ಮಾಡುತ್ತಿದ್ದಾರೆ ನನಗೆ ತಿಳಿಯದು’ ಎಂದು ಹೇಳಿ ಕೈತೊಳೆದುಕೊಳ್ಳುತ್ತಾರೆ.
ರಸ್ತೆ ಕಾಮಗಾರಿ ಭೂಮಿಪೂಜೆ ಮಾಡಿದರೆ ಸಾಲದು ಕಾಮಗಾರಿ ಶುರು ಆಗಬೇಕು. ಈ ಬಗ್ಗೆ ಶಾಸಕರು ಇತ್ತ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.