ವಿಜಯಪುರ: ನಗರದ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ನಡೆದ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಹಾಸನ ಜಿಲ್ಲೆಯ ಹೊಳೆನರಸಿಪುರದ ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿತು.
ಇದೇ ವಿಭಾಗದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ ಮಹಿಳೆಯರ ತಂಡ ದ್ವಿತೀಯ ಸ್ಥಾನ, ವಿಜಯಪುರದ ಬಿ.ಎನ್.ಎಂ ಆಯುರ್ವೇದ ವಿದ್ಯಾಲಯ ತೃತಿಯ ಸ್ಥಾನ, ದಾವಣಗೆರೆಯ ಡೆಂಟಲ್ ಕಾಲೇಜ್ ಆಪ್ ಸೈನ್ಸ್ ತಂಡ ನಾಲ್ಕನೇ ಸ್ಥಾನ ಗಳಿಸಿತು.
ಪುರುಷರ ವಿಭಾಗದಲ್ಲಿ ಹಾಸನ ಜಿಲ್ಲೆಯ ಹೊಳೆನರಸಿಪುರ ಸರಕಾರಿ ನರ್ಸಿಂಗ್ ಕಾಲೇಜು ಪ್ರಥಮ, ದಾವಣಗೆರೆ ಜೆ.ಜೆ.ಎಂ ಮೆಡಿಕಲ್ ಕಾಲೇಜು ದ್ವಿತೀಯ, ದಾವಣಗೆರೆ ಡೆಂಟಲ್ ಕಾಲೇಜ್ ಆಪ್ ಸೈನ್ಸ್ ತೃತಿಯ ಹಾಗೂ ವಿಜಯಪುರ ಬಿ.ಎಲ್.ಡಿ.ಇ. ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ ನಾಲ್ಕನೇ ಸ್ಥಾನ ಗಳಿಸಿತು.
ಗುರುವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವೀಕ್ಷಕರಾದ ದಾವಣಗೆರೆಯ ಜೆ.ಜೆ.ಎಂ ನರ್ಸಿಂಗ್ ಕಾಲೇಜಿನ ಡಾ. ಸುರೇಶ ಎಸ್.ಎಂ., ವಿಜಯಪುರ ಬಿ.ಎನ್.ಎಂ. ಆಯುರ್ವೇದ ಕಾಲೇಜಿನ ನಜೀರ ಮಮದಾಪುರ, ಪಂದ್ಯಗಳ ನಿರ್ಣಾಯಕ ಶ್ರೀಧರ ಜೋಶಿ, ಡಾ.ಗಂಗಾಧರ ತಿಮ್ಮಾಪುರ, ಡಾ.ಜೋಸ್ನಾ ಬರಗಿ, ಹನುಮಂತ ಪವಾರ ಉಪಸ್ಥಿತರಿದ್ದರು.
ಪಂದ್ಯಾವಳಿಯಲ್ಲಿ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಅಡಿಯಲ್ಲಿ ಬರುವ ವೈದ್ಯಕೀಯ, ದಂತ ಆಯುರ್ವೇದ, ಹೊಮಿಯೋಪತಿ, ಯುನಾನಿ, ಫಾರ್ಮಸಿ, ನರ್ಸಿಂಗ್ ಮುಂತಾದ ಆರೋಗ್ಯ ವಿಜ್ಞಾನ ವಿದ್ಯಾಲಯಗಳ 15ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.