
ವಿಜಯಪುರ: ನಗರಕ್ಕೆ 3ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ ಬರುವ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು.
ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆಗೊಂಡಿದ್ದು, ಎಲ್ಲ ಭಾಗಕ್ಕೂ ನಿರಂತರ ಮತ್ತು ಸಮಪರ್ಕವಾಗಿ ನೀರು ಒದಗಿಸಲು 3ನೇ ಹಂತದ ಯೋಜನೆ ಅನುಷ್ಠಾನ ಅಗತ್ಯವಿದೆ’ ಎಂದರು.
‘ಶುದ್ಧ ಗಾಳಿ, ಅಭಿವೃದ್ಧಿ, ಗಟ್ಟಿತನ ಹೀಗೆ ಎಲ್ಲದರಲ್ಲೂ ವಿಜಯಪುರ ನಗರ ದೇಶದಲ್ಲಿ ಹೆಸರುವಾಸಿ ಆಗಿದೆ. ಮಾದರಿ ನಗರವಾಗಿ ರೂಪಗೊಂಡಿದೆ’ ಎಂದು ಹೇಳಿದರು.
‘₹3.25 ಕೋಟಿ ಮೊತ್ತದಲ್ಲಿ ವಾರ್ಡ್ ನಂ.22ರಲ್ಲಿ ಬರುವ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಿಂದ ದೇವರಾಜ ಅರಸು ವೃತ್ತದ ವರೆಗೆ (ಜಲನಗರ ಮುಖ್ಯರಸ್ತೆ) ಸಿಸಿ ರಸ್ತೆ ಅಭಿವೃದ್ಧಿ, ₹20 ಲಕ್ಷ ಮೊತ್ತದಲ್ಲಿ ರಾಷ್ಟ್ರವೀರ ಶ್ರೀ ವೀರಮಹಾರಾಣ ಪ್ರತಾಪ್ ಸಿಂಹ ವೃತ್ತದ ಸುತ್ತ ಆವರಣ ಗೋಡೆ, ಕಾಬಲ್ ಪೇವಿಂಗ್ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಲಾಗಿದೆ’ ಎಂದರು.
‘₹1.50 ಕೋಟಿ ಮೊತ್ತದಲ್ಲಿ ವಾರ್ಡ್ ನಂ.21ರಲ್ಲಿ ಬರುವ ಸದಾಶಿವ ನಗರ ಮುಖ್ಯ ರಸ್ತೆಯಿಂದ ಈಶ್ವರ ದೇವಸ್ಥಾನದ ಮೂಲಕ ಏಳು ಮಕ್ಕಳ ತಾಯಿ ಗುಡಿವರೆಗಿನ ಪ್ರಮುಖ ಸಿಸಿ ರಸ್ತೆ ಹಾಗೂ ರೇಣುಕಾ ನಗರ ಆಂತರಿಕ ಸಿಸಿ ರಸ್ತೆ ನಿರ್ಮಾಣ, ₹1.50 ಕೋಟಿ ಮೊತ್ತದಲ್ಲಿ ಗುರುದೇವ ನಗರ ಪಶ್ಚಿಮ ಭಾಗ ಹಾಗೂ ಗುರುದೇವ ನಗರ ಪೂರ್ವ ಭಾಗದ ಒಳ ರಸ್ತೆಗಳ ಡಾಂಬರೀಕರಣ ಕಾಮಗಾರಿ, ₹2 ಕೋಟಿ ಮೊತ್ತದಲ್ಲಿ ಸಾಯಿಪಾರ್ಕ್ ಮುಖ ರಸ್ತೆಯಿಂದ ಗುರುದೇವ ನಗರದ ಮೂಲಕ ಕೊಲ್ಹಾರ ರಸ್ತೆ ಕೂಡುವ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ’ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮೇಯರ್ ಎಂ.ಎಸ್. ಕರಡಿ, ಸದಸ್ಯರಾದ ಪ್ರೇಮಾನಂದ ಬಿರಾದಾರ, ಕುಮಾರ ಗಡಗಿ, ಗಿರೀಶ ಬಿರಾದಾರ, ಮುಖಂಡರಾದ ಶಂಕರ ಹೂಗಾರ, ಚಂದ್ರಶೇಖರ ಚೌದರಿ, ಮಡಿವಾಳ ಯಾಳವಾರ, ಸಂತೋಷ ತಲಕೇರಿ, ರಾಜಶೇಖರ ಭಜಂತ್ರಿ ಇದ್ದರು.
ಧೂಳಾಪುರವಾಗಿದ್ದ ವಿಜಯಪುರ ನಗರದಲ್ಲಿ ನಿರೀಕ್ಷೆ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ಮಾದರಿ ನಗರವಾಗಿ ನಿರ್ಮಾಣಗೊಂಡಿದೆಬಸನಗೌಡ ಪಾಟೀಲ ಯತ್ನಾಳ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.