ADVERTISEMENT

ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯರನ್ನು ಇಳಿಸಲು ಡಿಕೆಶಿ ಷಡ್ಯಂತ್ರ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 15:52 IST
Last Updated 17 ಏಪ್ರಿಲ್ 2024, 15:52 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ‘ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ 15 ದಿನಗಳ ಒಳಗೆ ಸಿದ್ದರಾಮಯ್ಯ ಅವರನ್ನು  ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವ್ಯವಸ್ಥಿತ ಷಡ್ಯಂತ್ರ ನಡೆಸಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

‘ಬಾಗಲಕೋಟೆ ಜಿಲ್ಲೆಯ ಸ್ವಾಮೀಜಿಯೊಬ್ಬರ ಜೊತೆ ಈ ಸಂಬಂಧ ಮಾತನಾಡಿರುವ ಡಿ.ಕೆ.ಶಿವಕುಮಾರ್‌, ಲೋಕಸಭಾ ಚುನಾವಣೆಯಲ್ಲಿ ನನ್ನ ಪರವಾದ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಸಹಕಾರ ನೀಡಿ. ಅವರು ಗೆದ್ದರೆ ಚುನಾವಣೆ ಬಳಿಕ ತಾವೇ ಮುಖ್ಯಮಂತ್ರಿ ಆಗುವುದಾಗಿ ಹೇಳಿದ್ದಾರೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಬಾಗಲಕೋಟೆ, ಧಾರವಾಡ, ಬೆಳಗಾವಿ ಸೇರಿ ಇನ್ನೂ ಮೂರು–ನಾಲ್ಕು ಕಾಂಗ್ರೆಸ್‌ ಲೋಕಸಭಾ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದರೆ ಸಿದ್ದರಾಮಯ್ಯ ಅವರನ್ನು ಇಳಿಸಲು ಅನುಕೂಲವಾಗಲಿದೆ. ಇದಕ್ಕೆ ಲಿಂಗಾಯತರ ಸಹಕಾರ ಬೇಕು ಎಂದು ಶಿವಕುಮಾರ್‌ ಕೋರಿದ್ದಾರೆ’ ಎಂದರು.

ADVERTISEMENT

‘ತಮ್ಮ ಪರವಾದ ಲೋಕಸಭಾ ಸದಸ್ಯರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿಕೊಂಡ ಬಳಿಕ ಡಿ.ಕೆ.ಶಿವಕುಮಾರ್‌  ಫಲಿತಾಂಶ ಬಂದ 15 ದಿನಗಳಲ್ಲಿ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದರೆ ಕಾಂಗ್ರೆಸ್‌ ಇಬ್ಭಾಗ ಮತ್ತು  ಹೊಸ ಸರ್ಕಾರ ರಚನೆ ಗ್ಯಾರಂಟಿ’ ಎಂದು ಹೇಳಿದರು. 

‘ಡಿ.ಕೆ.ಶಿವಕುಮಾರ್‌ ಬೆಂಬಲಿತ ಬಾಗಲಕೋಟೆ, ಧಾರವಾಡ, ಬೆಳಗಾವಿಯ ಕಾಂಗ್ರೆಸ್‌ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದರೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಗ್ಯಾರಂಟಿ. ಹೀಗಾಗಿ ಸಿದ್ದರಾಮಯ್ಯ ಅವರು ಶಿವಕುಮಾರ್‌ ಬೆಂಬಲಿತ ಲೋಕಸಭಾ ಅಭ್ಯರ್ಥಿಗಳನ್ನು ಸೋಲಿಸಿ ತಮ್ಮ ಕುರ್ಚಿಯನ್ನು ಗ್ಯಾರಂಟಿ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.