ADVERTISEMENT

ಕಾರ್ಯರೂಪಕ್ಕೆ ಬಾರದ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ

ಬಸವರಾಜ ಎಸ್.ಉಳ್ಳಾಗಡ್ಡಿ
Published 6 ಜುಲೈ 2025, 5:45 IST
Last Updated 6 ಜುಲೈ 2025, 5:45 IST
ಬಸವನ ಬಾಗೇವಾಡಿ ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ ದೇವಸ್ಥಾನದ ಆವರಣದಲ್ಲಿರುವ ಹಿಂದಿನ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಕಚೇರಿ.
ಬಸವನ ಬಾಗೇವಾಡಿ ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ ದೇವಸ್ಥಾನದ ಆವರಣದಲ್ಲಿರುವ ಹಿಂದಿನ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಕಚೇರಿ.   

ಬಸವನಬಾಗೇವಾಡಿ: ಕಳೆದ ಡಿಸೆಂಬರ್‌ನಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಬಸವನ ಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿಧೇಯಕ ಮಂಡಿಸಿ, ಅಂಗೀಕರಿಸಿದೆ. ಆದರೆ, ಇದುವರೆಗೂ ಪ್ರತ್ಯೇಕ ಪ್ರಾಧಿಕಾರ ಕಾರ್ಯರೂಪಕ್ಕೆ ತರುವ ಯಾವುದೇ ಕಾರ್ಯವಾಗದಿರುವುದು ಬಸವಾನುಯಾಯಿಗಳಲ್ಲಿ ಬೇಸರ ಮೂಡಿಸಿದೆ.

ಜಗಜ್ಯೋತಿ ಬಸವಣ್ಣನವರ ಜನ್ಮಭೂಮಿ ಬಸವನಬಾಗೇವಾಡಿ, ಇತರೆ ಶರಣರ ತಾಣಗಳಾದ ಹೊರಿಮಟ್ಟಿ ಗುಡ್ಡ, ಇಂಗಳೇಶ್ವರ, ಮಸಬಿನಾಳ, ದೇಗಿನಾಳ, ದೇವರಹಿಪ್ಪರಗಿ, ಶಿವಣಗಿ ಮತ್ತು ತಂಗಡಗಿ ಹಾಗೂ ಸುತ್ತಲಿನ ಪರಂಪರಾ ತಾಣಗಳನ್ನು ಅಂತರರಾಷ್ಟ್ರೀಯ ಯಾತ್ರಾ ಸ್ಥಳಗಳಾಗಿ, ಸಾಂಸ್ಕೃತಿಕ ಹಾಗೂ ಪ್ರವಾಸಿ ಕೇಂದ್ರಗಳಾಗಿ ಅಭಿವೃದ್ಧಿಪಡಿಸಿ ನಿರ್ವಹಿಸಲು ಈ ಹಿಂದಿನ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರತ್ಯೇಕಿಸಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಬಸವಭಕ್ತರ ಹೋರಾಟದ ಫಲ ಹಾಗೂ  ಸಚಿವ ಶಿವಾನಂದ ಪಾಟೀಲರ ಮುತುವರ್ಜಿಯಿಂದ ಪ್ರಾಧಿಕಾರ ರಚನೆಯಾಗಿತ್ತು.

ಆದರೆ, ಪ್ರತ್ಯೇಕ ಪ್ರಾಧಿಕಾರ ರಚನೆಗೆ ವಿಧೇಯಕ ಮಂಡನೆಯಾಗಿ ಆರೇಳು ತಿಂಗಳಾದರೂ ಪ್ರಾಧಿಕಾರಕ್ಕೆ ಪ್ರತ್ಯೇಕ ಕಚೇರಿ ಸ್ಥಾಪನೆ, ಪೂರ್ಣಾವಧಿ ಆಯುಕ್ತರು, ಸಿಬ್ಬಂದಿ ನೇಮಕವಾಗಿಲ್ಲ. ಅಲ್ಲದೇ, ಯಾವುದೇ ಅನುದಾನ, ವಿಶೇಷ ಪ್ಯಾಕೇಜ್ ಆಗಲಿ ಒದಗಿಸಿಲ್ಲ.

ADVERTISEMENT

ಅನುಷ್ಠಾನಕ್ಕೆ ತರುವುದಿರಲಿ, ಬಸವನಬಾಗೇವಾಡಿ ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ ದೇವಸ್ಥಾನದ ಆವರಣದಲ್ಲಿರುವ ಹಿಂದಿನ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯ ಹಾಗೂ ಪ್ರಭಾರ ಆಯುಕ್ತರ ನಾಮಫಲಕ‌ಗಳು ಸಹ ಬದಲಾಗಿಲ್ಲ. ಇತ್ತಿಚೆಗೆ ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ ಅವರನ್ನು ಪ್ರಭಾರ ಆಯುಕ್ತರನ್ನಾಗಿ ನೇಮಿಸಿದಷ್ಟೇ ಆಗಿರುವ ಕಾರ್ಯ.

‘ರಾಜ್ಯ ಸರ್ಕಾರ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತ್ಯೇಕ ಕಚೇರಿ ಸ್ಥಾಪಿಸಿ, ಐಎಎಸ್ ಶ್ರೇಣಿಯ ಪೂರ್ಣಾವಧಿ ಆಯುಕ್ತರು, ಅವಶ್ಯ ಸಿಬ್ಬಂದಿ ಶೀಘ್ರ ನೇಮಿಸಬೇಕು’ ಎಂದು  ಹೋರಾಟಗಾರ ಅರವಿಂದ ಕುಲಕರ್ಣಿ  ಒತ್ತಾಯಿಸಿದ್ದಾರೆ.

‘ಎಲ್ಲಾ ಬಸವಾದಿ ಪ್ರಮಥರ ಸಮಗ್ರ ವಚನಗಳನ್ನು ಸಂಗ್ರಹಿಸಿ ಅಂತರರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ ಸ್ಥಾಪಿಸಬೇಕು. ಪ್ರಾಧಿಕಾರ ಘೋಷಣೆ ಸಾರ್ಥಕಗೊಳಿಸಲು ಜಿಲ್ಲೆಯ ಇಬ್ಬರೂ ಪ್ರಭಾವಿ ಸಚಿವರು, ಶಾಸಕರು ವಿಜಯಪುರದಲ್ಲಿ ಉದ್ದೇಶಿಸಿರುವ ಸಚಿವ ಸಂಪುಟ ಸಭೆ ವೇಳೆ ಸರ್ಕಾರಕ್ಕೆ ಒತ್ತಾಯಿಸಿ ಕಾರ್ಯರೂಪಕ್ಕೆ‌ ತರಬೇಕು’ ಎಂದು ಹೇಳಿದರು.

ಪ್ರಾಧಿಕಾರ ಕಾರ್ಯಚಟುವಟಿಕೆ ಚುರುಕುಗೊಳಿಸಲು ಸಿಎಂ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ವಿಶೇಷ ಅನುದಾನ ಪ್ಯಾಕೇಜ್ ಘೋಷಿಸಿ ಬಸವಭೂಮಿ ಅಭಿವೃದ್ಧಿಗೆ ಮುಂದಾಗಬೇಕು
  -ಅರವಿಂದ‌ ಕುಲಕರ್ಣಿ ಹೋರಾಟಗಾರ
ಕಂದಾಯ ಆಯುಕ್ತರಿಗೆ ಪತ್ರ 
ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಆಸ್ತಿಗಳನ್ನು ಹಿಂದಿನ ಕೂಡಲಸಂಗಮ ಪ್ರಾಧಿಕಾರದಿಂದ ಹಸ್ತಾಂತರಿಸಿಕೊಳ್ಳುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿದೆ. ಇತ್ತೀಚೆಗೆ ಪ್ರಾಧಿಕಾರದ ಪ್ರಭಾರ ಆಯುಕ್ತನಾಗಿ ಅಧಿಕಾರ ವಹಿಸಿಕೊಂಡಿದ್ದು ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಚೇರಿ ಅನುದಾನ ಸೇರಿದಂತೆ ಎಲ್ಲಾ ವಿಚಾರಗಳ‌ ಕುರಿತು ಕಂದಾಯ ಆಯುಕ್ತಾಲಯಕ್ಕೆ ಸದ್ಯದಲ್ಲೇ ಪತ್ರ ಬರೆಯಲಿದ್ದೇನೆ. ಕಂದಾಯ ಇಲಾಖೆ ಉನ್ನತಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ‌ ಬಗ್ಗೆ ಚರ್ಚಿಸಿದ ಬಳಿಕವೇ ಪೂರ್ಣ ಮಾಹಿತಿ ತಿಳಿಯಲಿದೆ - ಗುರುನಾಥ ದಡ್ಡೆ ಪ್ರಭಾರ ಆಯುಕ್ತರು ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.