ADVERTISEMENT

ಬಸವನಬಾಗೇವಾಡಿ: 143 ಕುಟುಂಬಗಳ ಮನೆಗಳ ತೆರವು; ಧರಣಿ

ಅನಿರ್ದಿಷ್ಟ ಧರಣಿ ಸ್ಥಳಕ್ಕೆ‌ ಶಾಸಕ ರಾಜುಗೌಡ ಪಾಟೀಲ ಭೇಟಿ: ಮನವೊಲಿಕೆ ಯತ್ನ ವಿಫಲ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 6:04 IST
Last Updated 24 ಅಕ್ಟೋಬರ್ 2025, 6:04 IST
ಬಸವನಬಾಗೇವಾಡಿ ತಾಲ್ಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ರಸ್ತೆ ತೆರವುಗೊಳಿಸಿದ ವಿಚಾರವಾಗಿ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಮಿನಿ ವಿಧಾನಸೌಧ ಮುಂಭಾಗ ನಿರಾಶ್ರಿತರು ನಡೆಸುತ್ತಿರುವ ಅನಿರ್ಧಿಷ್ಟ ಧರಣಿ ಸ್ಥಳಕ್ಕೆ ಗುರುವಾರ ಶಾಸಕ ರಾಜುಗೌಡ ಪಾಟೀಲ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು
ಬಸವನಬಾಗೇವಾಡಿ ತಾಲ್ಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ರಸ್ತೆ ತೆರವುಗೊಳಿಸಿದ ವಿಚಾರವಾಗಿ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಮಿನಿ ವಿಧಾನಸೌಧ ಮುಂಭಾಗ ನಿರಾಶ್ರಿತರು ನಡೆಸುತ್ತಿರುವ ಅನಿರ್ಧಿಷ್ಟ ಧರಣಿ ಸ್ಥಳಕ್ಕೆ ಗುರುವಾರ ಶಾಸಕ ರಾಜುಗೌಡ ಪಾಟೀಲ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು   

ಬಸವನಬಾಗೇವಾಡಿ: ತಾಲ್ಲೂಕಿನ ಕುದರಿಸಾಲವಾಡಗಿಯಲ್ಲಿ ರಸ್ತೆ ವಿಸ್ತರಣೆ ಹೆಸರಲ್ಲಿ 143 ಕುಟುಂಬಗಳ ಮನೆಗಳನ್ನು ಏಕಾಏಕಿ ತೆರವುಗೊಳಿಸಲಾಗಿದೆ ಎಂದು ಆರೋಪಿಸಿ ಮತ್ತು ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಮಿನಿ ವಿಧಾನಸೌಧ ಮುಂಭಾಗ ನಿರಾಶ್ರಿತರು ಕಳೆದ 9 ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸ್ಥಳಕ್ಕೆ ಗುರುವಾರ ಶಾಸಕ ರಾಜುಗೌಡ ಪಾಟೀಲ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಧರಣಿ ನಿರತರ‌ ಮನವೊಲಿಸುವ ಪ್ರಯತ್ನ ವಿಫಲವಾಗಿದೆ.

ನಂತರ ಮಾತನಾಡಿದ ಶಾಸಕ ರಾಜುಗೌಡ ಪಾಟೀಲ‌, ‘ಕುದರಿಸಾಲವಾಡಗಿ ನನ್ನ ಗ್ರಾಮ. ಕೆಲ ಗ್ರಾಮಸ್ಥರು 8 ದಿನಗಳಿಂದ ಧರಣಿ ಕುಳಿತಿರುವುದು ನೋವಾಗಿದೆ. ತೆರವು ಕಾರ್ಯಾಚರಣೆ ಮಾಡುವ ಮೊದಲು ಗ್ರಾಮದಲ್ಲಿ ಸಭೆ ಮಾಡಿದಾಗ, ರಸ್ತೆ ವಿಸ್ತರಣೆಯಿಂದ ಮನೆ ಕಳೆದುಕೊಳ್ಳುವವರಿಗೆ ಗ್ರಾಮ ವ್ಯಾಪ್ತಿಯಲ್ಲಿ ‘ನಮ್ಮ ಭೂಮಿ ನಮ್ಮ ತೋಟ’ ಯೋಜನೆಯಡಿ ಲಭ್ಯವಿರುವ ಸರ್ಕಾರಿ ಜಮೀನಿನಲ್ಲಿ ನಿವೇಶನ ಹಾಗೂ ಅರ್ಹರಿಗೆ ಮನೆಗಳನ್ನು ಕಟ್ಟಿಕೊಟ್ಟು, ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತೇನೆ ಎಂದು ಮಾತು ಕೊಟ್ಟಿದ್ದೆ. ತೆರವು ಕಾರ್ಯದಿಂದ ತೊಂದರೆಯಾಗುವ ಸಾರ್ವಜನಿಕ ದೇವಸ್ಥಾನ, ದರ್ಗಾ, ವೃತ್ತ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಮಾಡಿಸಿ ಕೊಡುತ್ತೇನೆ ಎಂದು ಹೇಳಿದ್ದೆ. ಕೊಟ್ಟು ಮಾತಿನಂತೆ ನಡೆದುಕೊಳ್ಳುವ ನಾನು, ಅಂದು ಹೇಳಿದ ಮಾತಿಗೂ ಇಂದು ಬದ್ಧನಿದ್ದೇನೆ’ ಎಂದರು.

‘ಆದರೆ, ಮೊಸರಲ್ಲಿ ಕಲ್ಲು ಹುಡುಕುವಂತೆ ಇರಲಾರದನ್ನು ಕೇಳಿದರೆ ಯಾರಿಗೂ ಕೊಡಲು ಆಗುವುದಿಲ್ಲ. ಧರಣಿ ಆರಂಭವ ವೇಳೆ ನಾನು ಬೆಂಗಳೂರಿನಲ್ಲಿದ್ದೆ. ಬಂದ ಬಳಿಕ ಧರಣಿನಿರತ ಮುಖಂಡರು ರಸ್ತೆ ದಾಖಲೆ ಕೇಳಿದ್ದರಿಂದ ಸಾಲು ರಜೆಗಳು ಬಂದ ಕಾರಣ ದಾಖಲೆಗಳ ಸಂಗ್ರಹಿಸಿ ಅಧಿಕಾರಿಗಳೊಂದಿಗೆ ಬರಲು ತಡವಾಗಿದೆ. ಧರಣಿ ಸ್ಥಳಕ್ಕೆ ಭೇಟಿ ನೀಡಲು ಬೆಂಗಳೂರಿನಲ್ಲಿ ಭಾಗವಹಿಸಬೇಕಾದ ಸಮಿತಿ‌ ಸಭೆಯನ್ನು ಬಿಟ್ಟು ಬಂದಿದ್ದೇನೆ. ನಿಮಗೆ ರಸ್ತೆ ವಿಸ್ತರಣೆ ಬಗ್ಗೆ ಗೊಂದಲವಿದ್ದರೆ ಕೋರ್ಟ್ ನಲ್ಲಿ ಪ್ರಶ್ನಿಸಿ, ರಸ್ತೆ ವಿಚಾರದಲ್ಲಿ ನನ್ನ ನಡೆ ತಪ್ಪಿದ್ದರೆ ಕೋರ್ಟ್‌ ವಿಧಿಸುವ ದಂಡಕ್ಕೆ ಸಿದ್ದನಿದ್ದೇನೆ. ಮಾನವೀಯತೆ ದೃಷ್ಟಿ ಹಾಗೂ ಕಾನೂನಾತ್ಮಕವಾಗಿ ಸಾಧ್ಯವಾಗುವ ಪರಿಹಾರ ನೀಡುತ್ತೇನೆ. ದಯವಿಟ್ಟು ಎಲ್ಲರೂ ಅಭಿವೃದ್ಧಿಗೆ ಸಹಕಾರ ನೀಡಿ, ಧರಣಿ ಹಿಂಪಡೆಯುವಂತೆ ಶಾಸಕ‌ ರಾಜುಗೌಡ ಮನವಿ ಮಾಡಿಕೊಂಡರು.

ADVERTISEMENT

ಈ ವೇಳೆ ಧರಣಿ ನಿರತ ಮುಖಂಡ ಅಶೋಕಗೌಡ ಪಾಟೀಲ ಮಾತನಾಡಿ, ‘ತೆರವು ಕಾರ್ಯಾಚರಣೆ ಯಾರ ಆದೇಶದಂತೆ ನಡೆಸಿದ್ದೀರಿ. ಇದೇ ರಸ್ತೆ, ಇಷ್ಟೇ ವಿಸ್ತರಣೆ ಇರುವ ಬಗ್ಗೆ ಸ್ಪಷ್ಟ ದಾಖಲೆ ತೋರಿಸಿ. ಈ‌ ಬಗ್ಗೆ ಅಧಿಕಾರಿಗಳೊಂದಿಗೆ ಎಲ್ಲರನ್ನು ಕರೆದು ಸಭೆ ಮಾಡಿ ಸ್ಪಷ್ಟಪಡಿಸಿ. ನಿರಾಶ್ರಿತರಿಗೆ ನೀವು ನಿವೇಶ ನೀಡುವುದಾಗಿ ಹೇಳಿರುವ ನಮ್ಮ ಭೂಮಿ, ನಮ್ಮ ತೋಟ ಜಾಗ ಗ್ರಾಮದಿಂದ ದೂರವಿದ್ದು, ಅಲ್ಲಿ ಸೂಕ್ತ ರಸ್ತೆ, ಯಾವುದೇ ರೀತಿಯ ಮೂಲಸೌಲಭ್ಯ ಅಭಿವೃದ್ಧಿ ಇಲ್ಲ, ಅಲ್ಲದೇ ಅಲ್ಲಿ ಹೋಗಿ ಮನೆ ಕಟ್ಟಿಕೊಂಡು ಇರಲು ಯಾರಿಗೂ ಆಗುವುದಿಲ್ಲ. ಈಗಾಗಲೇ ತಡವಾಗಿದೆ. ಸ್ವಲ್ಪ ಸಮಯ ತೆಗೆದುಕೊಂಡು ನಿರಾಶ್ರಿತರೊಂದಿಗೆ‌ ಚರ್ಚಿಸಿ ಎಲ್ಲರಿಗೂ ಸಮಾಧಾನ ಆಗುವವರೆಗೂ, ಎಲ್ಲರೂ ಒಪ್ಪಿದರೆ ಧರಣಿ ಹಿಂಪಡೆಯುತ್ತೇವೆ‌. ನಮಗೆ ರಸ್ತೆ ಬಗ್ಗೆ ಸ್ಪಷ್ಟ ದಾಖಲೆ ಹಾಗೂ ಲಿಖಿತ ಭರವಸೆ ಸಿಗುವವರೆಗೂ ಶಾಂತ ರೀತಿಯಿಂದ ಧರಣಿ ಮುಂದುವರೆಸುತ್ತೇವೆ’ ಎಂದರು.

ಬಳಿಕ ಮುಖಂಡರಾದ ಪ್ರಭುಗೌಡ ಲಿಂಗದಳ್ಳಿ, ಅಶೋಕಗೌಡ ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿ, ‘ಶಾಸಕರು ಹೇಳಿದ ಸಲಹೆಗಳು, ಪರಿಹಾರದ ಬಗ್ಗೆ ಹೇಳಿದ ವಿಚಾರಗಳ ಬಗ್ಗೆ ನಿರಾಶ್ರಿತರಿಗೆ, ಮುಂದಾಳತ್ವ ವಹಿಸಿರುವ ಮುಖಂಡರಿಗೆ ತೃಪ್ತಿ ಇಲ್ಲ. ಶಾಸಕರು ಲಿಖಿತರೂಪದ‌ ಭರವಸೆ ಕೊಡಬೇಕು. ನಮ್ಮ ನಡುವೆ ಸಮಕ್ಷಮ ವಿಚಾರ ಮಾಡಿಕೊಳ್ಳುತ್ತೇವೆ. ತಾಲ್ಲೂಕಾಡಳಿತಕ್ಕೆ ಮನವಿ ಸಲ್ಲಿಸಿ ನಮ್ಮ ಧರಣಿ ಮುಂದುವರೆಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಮುಖಂಡರಾದ ಸಚೀನಗೌಡ ಪಾಟೀಲ, ಅನೀಲಗೌಡ ಪಾಟೀಲ, ಬಂದೆನವಾಜ್ ಕತ್ನಳ್ಳಿ, ಎಂ.ಕೆ.ಇನಾಂದಾರ ಹಾಗೂ ಧರಣಿನಿರತ ಮುಖಂಡರಾದ ಕಾಮೇಶ ಭಜಂತ್ರಿ, ಮುತ್ತುರಾಜ್ ಹಾಲ್ಯಾಳ, ಮೌಲಾಲಿ‌ ಚಪ್ಪರಬಂದ್, ವಿನಯ್ ಪಾಟೀಲ, ಶರಣು ಕೊಂಡಗೂಳಿ, ಮಂಜುನಾಥ ಮನ್ಯಾಳ, ನಜೀರಸಾಬ್ ಬೀಳಗಿ, ಯಮನಪ್ಪ‌ ಚಲವಾದಿ, ಆದಮ್ ಸಾಬ ಢವಳಗಿ, ಯೋಗೇಶ ಕನ್ನೂರ, ನಜೀರ ಪಟೇಲ್ ಗುಡ್ನಾಳ, ಅಜೀಜ ಹೆಬ್ಬಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.