
ಬಸವನಬಾಗೇವಾಡಿ: ತಾಲ್ಲೂಕಿನ ಕುದರಿಸಾಲವಾಡಗಿಯಲ್ಲಿ ರಸ್ತೆ ಅತಿಕ್ರಮಣ ತೆರವು ಹೆಸರಲ್ಲಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ನೂರಾರು ಬಡ ಕುಟುಂಬಗಳಿಗೆ ನ್ಯಾಯ ಒದಗಿಸುವುದಾಗಿ ಶಾಸಕ ರಾಜುಗೌಡರು ಲಿಖಿತ ರೂಪದಲ್ಲಿ ಭರವಸೆ ನೀಡಬೇಕು. ಬಡವರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ) ಹಾಗೂ ಮುಖಂಡ ಆನಂದಗೌಡ ದೊಡಮನಿ ತಿಳಿಸಿದರು.
ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಯಾಳವಾರ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆಯ ಅಭಿವೃದ್ಧಿ ಹಾಗೂ ವಿಸ್ತರಣೆ ವಿಚಾರವಾಗಿ ತೆರವುಗೊಳಿಸಲಾದ 143ಕ್ಕೂ ಅಧಿಕ ಮನೆಗಳನ್ನು ಕಳೆದುಕೊಂಡ ನಿರಾಶ್ರಿತರಿಗೆ ಸೂಕ್ತ ಪರಿಹಾರ ಹಾಗೂ ಮನೆಗಳನ್ನು ನಿರ್ಮಿಸಿ ಕೊಡುವಂತೆ ಆಗ್ರಹಿಸಿ ಪಟ್ಟಣದ ಮಿನಿವಿಧಾನಸೌಧದ ಮುಂಭಾಗದಲ್ಲಿ ಮುಖಂಡ ಅಶೋಕಗೌಡ ಪಾಟೀಲ ನೇತೃತ್ವದಲ್ಲಿ ಗ್ರಾಮಸ್ಥರು ನಡೆಸುತ್ತಿರುವ ಅನಿರ್ಧಿಷ್ಟ ಅವಧಿಯ ಧರಣಿ ಸತ್ಯಾಗ್ರಹ ಮಂಗಳವಾರ 6ನೇ ದಿನವು ಮುಂದುವರೆಯಿತು.
ಈ ವೇಳೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಮುಖಂಡರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕುದರಿಸಾಲವಾಡಗಿ ಗ್ರಾಮದಲ್ಲಿ ಯಾವುದೇ ಕ್ರಿಯಾಯೋಜನೆ ರೂಪಿಸದೇ, ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಬಡವರ ಮನೆಗಳ ತೆರವುಗೊಳಿಸಲಾಗಿದೆ. ಹೂವಿನಹಿಪ್ಪರಗಿಯಿಂದ ಕುದರಿಸಾಲವಾಡಗಿ ಬರುವವರೆಗೂ 40 ಅಡಿ ಇರುವ ರಸ್ತೆ, ಕುದರಿಸಾಲವಾಡಗಿ ಗ್ರಾಮದೊಳಗೆ 55 ಅಡಿ ಮಾಡುವ ಅವಶ್ಯಕತೆ ಏನಿದೆ? ಅಲ್ಲದೇ ಶಾಸಕರು ರಸ್ತೆ ಅಭಿವೃದ್ಧಿ ಹೆಸರಲ್ಲಿ ಮನೆಗಳನ್ನು ತೆರವುಗೊಳಿಸಿರುವ ಜಾಗದಲ್ಲೇ 108ಅಡಿ ರಸ್ತೆಯೇ ಇಲ್ಲ, ಈ ಬಗ್ಗೆ ಸೂಕ್ತ ದಾಖಲೆಗಳನ್ನು ತೋರಿಸಿದರೆ ಈಗಲೇ ನಾವು ಅನಿರ್ಧಿಷ್ಟ ಅವಧಿಯ ಧರಣಿ ಹಿಂಪಡೆಯುತ್ತೇವೆ ಎಂದರು.
ಮನೆ ಕಳೆದುಕೊಂಡ ನಿರಾಶ್ರಿತರು ನಡೆಸುತ್ತಿರುವ ಧರಣಿ ರಾಜಕೀಯ ಪ್ರೇರಿತ ಎಂದು ಶಾಸಕರು ಸುದ್ದಿಗೋಷ್ಠಿ ನಡೆಸಿ ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಖಂಡನೀಯ. ನಮಗೆ ರಾಜಕೀಯ ಉದ್ಯೋಗವಲ್ಲ. ಬೇರೆ ಉದ್ಯೋಗಗಳಿವೆ. ದೀಪಾವಳಿ ಮುನ್ನವೇ ಜವಾಬ್ದಾರಿಯುತ ಶಾಸಕರು ಧರಣಿ ಸ್ಥಳಕ್ಕೆ ಬಂದು ಧರಣಿ ನಿರತರಿಗೆ ನ್ಯಾಯ ಒದಗಿಸಿದ್ದರೆ ಅವರು ಎಲ್ಲರಂತೆ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರು ಎಂದರು.
ಧರಣಿ ನೇತೃತ್ವ ವಹಿಸಿರುವ ಮುಖಂಡ ಅಶೋಕಗೌಡ ಪಾಟೀಲ ಮಾತನಾಡಿ, ರಸ್ತೆ ವಿಸ್ತರಣೆ ಕುರಿತು ಜನರು ಒಪ್ಪಿಗೆ ಪತ್ರ ನೀಡಿದ್ದಾರೆ ಎಂದು ಶಾಸಕರು ಹೇಳಿಕೆ ನೀಡಿದ್ದಾರೆ. ಹಾಗಾದರೆ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಅಗತ್ಯವೇನಿತ್ತು. ನಮಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಅಡ್ಡಿಪಡಿಸುವ ಉದ್ದೇಶವಿಲ್ಲ. ನಕ್ಷೆಯಂತೆ ರಸ್ತೆ ಕಾಮಗಾರಿಯಾಗಲಿ ಎಂಬ ಉದ್ದೇಶವಿದೆ. ರಸ್ತೆ ವಿಸ್ತರಣೆ ಸಮಯದಲ್ಲಿ ಅನಧಿಕೃತ ಜೆಸಿಬಿಗಳನ್ನು ತಂದು ಮನೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮಾಡಿರುವ ಉದ್ದೇಶವನ್ನು ಶಾಸಕರು ಸ್ಪಷ್ಟಪಡಿಸಬೇಕಿದೆ ಎಂದರು.
ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿದರು. ಡಿಎಸ್ಎಸ್ ಮುಖಂಡ ಗುರು ಗುಡಿಮನಿ, ಮುಖಂಡರಾದ ಕಾಮರಾಜ ಭಜಂತ್ರಿ, ಮುಖಂಡರಾದ ಮುತ್ತು ಹಾಲ್ಯಾಳ, ಸೋಮನಗೌಡ ಆನೆಸೂರ, ಮೌಲಾಲಿ ಚಪ್ಪರಬಂದ್, ವಿನಯ್ ಪಾಟೀಲ, ಶರಣು ಕೊಂಡಗೂಳಿ, ಮಂಜುನಾಥ ಮನ್ಯಾಳ, ನಜೀರಸಾಬ್ ಬೀಳಗಿ, ಯಮನಪ್ಪ ಚಲವಾದಿ, ಆದಮ್ ಸಾಬ ಢವಳಗಿ, ಯೋಗೇಶ ಕನ್ನೂರ, ನಜೀರ ಪಟೇಲ್ ಗುಡ್ನಾಳ, ಅಜೀಜ ಹೆಬ್ಬಾಳ ಸೇರಿದಂತೆ ಹಲವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.