
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಾಲಯ ಅಂತರಾರಾಷ್ಟ್ರೀಯ ಶಾಲೆ ಆವರಣದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಈಚೆಗೆ ನಡೆದ ‘ಯೂತ್ ಅಥಾನ್’ ಮ್ಯಾರಾಥಾನ್ ಹಾಗೂ ‘ರುಚಿ ಉತ್ಸವ’ ಆಹಾರ ಮೇಳ ಗಮನ ಸೆಳೆಯಿತು.
ಮ್ಯಾರಾಥಾನ್‌ನಲ್ಲಿ ಶಾಲೆಯ 6ರಿಂದ 10ನೇ ತರಗತಿಯವರೆಗಿನ ಒಟ್ಟು 355 ವಿದ್ಯಾರ್ಥಿಗಳು ಸುಮಾರು 3 ಕಿ.ಮೀ.ವರೆಗೆ ಓಡಿದರು. ವಿಜೇತರಿಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. 50 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಆಹಾರ ಮೇಳದಲ್ಲಿದ್ದ 20 ಮಳಿಗೆಗಳಲ್ಲಿ ವಿದ್ಯಾರ್ಥಿಗಳು ತಯಾರಿಸಿದ್ದ ವಿವಿಧ ಬಗೆಯ ತಿನಿಸುಗಳನ್ನು ಮಾರಾಟ ಮಾಡಲಾಯಿತು. ನಿರ್ಣಾಯಕರು ಆಯ್ಕೆ ಮಾಡಿದ ಉತ್ತಮ ಮಳಿಗೆಗೆ ಪ್ರಶಸ್ತಿ ವಿತರಿಸಲಾಯಿತು. ವಿವಿಧ ಚಿತ್ರಕಲೆಯನ್ನೂ ಪ್ರದರ್ಶನಕ್ಕೆ ಇಡಲಾಗಿತ್ತು.
ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಮಾತನಾಡಿ, ‘ಮಕ್ಕಳಿಗೆ ಪಠ್ಯದ ಜೊತೆ ವ್ಯಾವಹಾರಿಕ ಜ್ಞಾನ ಕಲಿಸುವುದು ಅವಶ್ಯ. ಪಾಲಕರೂ ಇದನ್ನು ಪ್ರೋತ್ಸಾಹಿಸಬೇಕು. ಆರೋಗ್ಯಕರ ಆಹಾರಕ್ಕೆ ಆದ್ಯತೆ ನೀಡಬೇಕು. ಶಿಸ್ತು, ವಿನಯ, ಪರಸ್ಪರ ಸಹಕಾರ ಗುಣ ಬೆಳೆಸಿಕೊಳ್ಳಬೇಕು’ ಎಂದರು.
ಸಹಕಾರ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಎಂ.ಜಿ. ಆದಿಗೊಂಡ, ಸುರೇಶಗೌಡ ಪಾಟೀಲ ಮಾತನಾಡಿದರು. ಸಮಿತಿ ಅಧ್ಯಕ್ಷ ಅನಿಲ ಅಗರವಾಲ, ಉಪಾಧ್ಯಕ್ಷ ಎಸ್.ಎಸ್. ಝಳಕಿ, ಸದಸ್ಯರಾದ ಲಕ್ಷ್ಮೀ ಮಾಲಗಾರ, ಪ್ರಭಾವತಿ ರಾಯಗೊಂಡ, ಲಕ್ಷ್ಮೀ ಹಿಟ್ನಳ್ಳಿ, ಮಿನಾಕ್ಷಿ ಮೋದಿ, ಬೇಬಿ ಗಣಾಚಾರಿ, ಪ್ರಾಚಾರ್ಯೆ ರೋಹಿಣಿ ರೋಣದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.