ADVERTISEMENT

ಶಿಸ್ತು ಸಮಿತಿಯಿಂದ ನೋಟಿಸ್‌ ಬಂದಿಲ್ಲ, ಭಯ ಹುಟ್ಟಿಸುವ ತಂತ್ರ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 16:26 IST
Last Updated 16 ಜನವರಿ 2023, 16:26 IST
ಯತ್ನಾಳ
ಯತ್ನಾಳ   

ವಿಜಯಪುರ: ‘ನನಗೆ ಬಿಜೆಪಿ ಹೈಕಮಾಂಡ್‌ನಿಂದ ಅಥವಾ ಪಕ್ಷದ ಶಿಸ್ತು ಸಮಿತಿಯಿಂದ ಇದುವರೆಗೆ ಯಾವುದೇ ನೋಟಿಸ್‌ ಬಂದಿಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

ಪಕ್ಷದ ನಾಯಕರ ವಿರುದ್ಧ ಮಾತನಾಡಿದ ಕಾರಣಕ್ಕೆ ನೋಟಿಸ್‌ ನೀಡಲಾಗಿದೆ ಎಂಬ ಸುದ್ದಿ ಹರಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನನಗೆ ಪಕ್ಷದ ಶಿಸ್ತು ಸಮಿತಿ ನೋಟಿಸ್‌ ನೀಡಿದೆ ಎಂಬುದು ಕೇವಲ ವಿರೋಧಿಗಳ ಭಯ ಹುಟ್ಟಿಸುವ ತಂತ್ರ ಅಷ್ಟೇ, ನನಗೆ ನೋಟಿಸ್‌ ಬಂದಿಲ್ಲ, ಬರುವುದಿಲ್ಲ, ಉತ್ತರ ಕೊಡುವ ಅವಶ್ಯಕತೆಯೂ ಬರುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನನ್ನ ಬಗ್ಗೆ ಪಕ್ಷದ ಹೈಕಮಾಂಡ್‌ಗೆ ಸಂಪೂರ್ಣ ಮಾಹಿತಿ ಇದೆ, ಸತ್ಯಾಸತ್ಯತೆಯ ಅರಿವಿದೆ. ಈ ಸಂಬಂಧ ನನ್ನೊಂದಿಗೆ ಹಲವು ಬಾರಿ ಮಾತನಾಡಿದ್ದಾರೆ’ ಎಂದು ಹೇಳಿದರು.

ADVERTISEMENT

‘ನಾನು ಮಾತನಾಡುವುದು ಸತ್ಯ ಇರುವುದರಿಂದ ಯಾವುದೇ ಹೇಳಿಕೆ ನೀಡಿದರೂ ಅದರಿಂದ ಪಕ್ಷಕ್ಕೆ ಲಾಭ ಆಗಿದೆಯೇ ಹೊರತು, ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ. ನನಗೆ ಪಕ್ಷದಲ್ಲಿ ಮತ್ತಷ್ಟು ಉನ್ನತ ಅವಕಾಶ ಸಿಗಲಿದೆಯೇ ಹೊರತು, ಸಮಸ್ಯೆ ಆಗುವುದಿಲ್ಲ’ ಎಂದು ಹೇಳಿದರು.

‘ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಮಗನಿಂದ ನಡೆದ ಭ್ರಷ್ಟಾಚಾರ, ಕುಟುಂಬ ಹಸ್ತಕ್ಷೇಪದ ಬಗ್ಗೆ ನಾನು ಮಾತನಾಡಿದಾಗಲೂ ಮೂರ್ನಾಲ್ಕು ಬಾರಿ ನೋಟಿಸ್ ಬಂದಿತ್ತು. ಅದಕ್ಕೆ ಸೂಕ್ತ ಉತ್ತರ ನೀಡಿದ ಪರಿಣಾಮ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುವಂತಾಯಿತು’ ಎಂದು ಹೇಳಿದರು.

‘ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಪಕ್ಷ ಅಂತ್ಯ ಹಾಡಲಿದೆ. ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌ ನೀಡಲಿದೆ. ಅಪ್ಪನಿಗೆ ಸಿಕ್ಕರೆ, ಮಗನಿಗೆ ಇಲ್ಲ, ಮಗನಿಗೆ ಸಿಕ್ಕರೆ ಅಪ್ಪನಿಗೆ ಟಿಕೆಟ್‌ ಸಿಗುವುದಿಲ್ಲ. ಗುಜರಾತ್‌ ಮಾದರಿಯಲ್ಲಿ ಟಿಕೆಟ್‌ ನೀಡಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.