ADVERTISEMENT

ಮನೆಯಲ್ಲಿ ಒಬ್ಬರಾದ್ರೂ ಇರಿ; ಕಳ್ಳತನ ತಪ್ಪಿಸಿ: ಎಸ್‌ಪಿ ಪ್ರಕಾಶ್ ಅಮೃತ್ ನಿಕ್ಕಂ

’ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ ಕಳ್ಳತನ’

ಡಿ.ಬಿ, ನಾಗರಾಜ
Published 11 ಮೇ 2019, 19:45 IST
Last Updated 11 ಮೇ 2019, 19:45 IST
ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ನಿತ್ಯವೂ ಸಂಗ್ರಹಿಸುವ ರಾತ್ರಿ ಗಸ್ತಿನ ವಿವರ
ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ನಿತ್ಯವೂ ಸಂಗ್ರಹಿಸುವ ರಾತ್ರಿ ಗಸ್ತಿನ ವಿವರ   

ವಿಜಯಪುರ:ಬೇಸಿಗೆ ಆರಂಭಗೊಂಡ ಬೆನ್ನಿಗೆ, ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮನೆಗಳ್ಳತನ, ಸರಗಳ್ಳತನ, ದರೋಡೆ, ಸುಲಿಗೆ ಹೆಚ್ಚುತ್ತಿವೆ. ಇದು ಸಾರ್ವಜನಿಕರಲ್ಲಿ ಆತಂಕದ ಜತೆ ಭೀತಿಯನ್ನು ಸೃಷ್ಟಿಸಿದೆ.

ನೆರೆಯ ಮಹಾರಾಷ್ಟ್ರದ ‘ಪಾರ್ದಿ’ ಗ್ಯಾಂಗ್‌ ಮನೆಗಳ್ಳತನ ನಡೆಸಿದರೆ, ‘ಇರಾಣಿ’ ಗುಂಪು ಅಲ್ಲಲ್ಲೇ ಸರಗಳ್ಳತನ ನಡೆಸಿದೆ ಎಂಬುದು ಪೊಲೀಸ್ ಮೂಲಗಳ ಮಾಹಿತಿ.

ಕಳ್ಳತನ ತಡೆಗಟ್ಟಲು ಜಿಲ್ಲಾ ಪೊಲೀಸ್ ಇಲಾಖೆ ಯಾವ್ಯಾವ ಕ್ರಮ ತೆಗೆದುಕೊಂಡಿದೆ, ಜನರು ಯಾವ್ಯಾವ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂಬ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ ಅಮೃತ್ ನಿಕ್ಕಂ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

ADVERTISEMENT

* ಕಳ್ಳತನ ಬೇಸಿಗೆಯಲ್ಲೇ ಹೆಚ್ಚು ಏಕೆ ?

ವಿಜಯಪುರ ಜಿಲ್ಲೆಯಲ್ಲಿ ಬಿಸಿಲ ಝಳ ಹೆಚ್ಚು. ಸೆಖೆ ತಡೆಯಲಾಗದೆ ಅಸಂಖ್ಯಾತ ಕುಟುಂಬಗಳು ರಾತ್ರಿ ವೇಳೆ, ಮನೆ ಮಂದಿಯೆಲ್ಲಾ ಒಟ್ಟಾಗಿ ಮಹಡಿ ಮೇಲೆ ಮಲಗುವುದು ಇಲ್ಲಿನ ವಾಡಿಕೆಯಾಗಿದೆ. ಇದನ್ನು ಅರಿತಿರುವ ನೆರೆಯ ಮಹಾರಾಷ್ಟ್ರದ ಉಸ್ಮಾನಾಬಾದ್‌, ಸಾಂಗ್ಲಿ, ಲಾತೂರ್‌ ಭಾಗದಲ್ಲಿ ನೆಲೆ ಕಂಡುಕೊಂಡಿರುವ ‘ಪಾರ್ದಿ’ ಜನಾಂಗದವರು ತಮ್ಮ ಮೂಲ ಕಸುಬಾಗಿರುವ ಕಳ್ಳತನವನ್ನು ನಡೆಸಲು ಈ ಸಮಯವನ್ನೇ ಆಯ್ಕೆ ಮಾಡಿಕೊಳ್ಳುವುದರಿಂದ ಸಹಜವಾಗಿ ಬೇಸಿಗೆಯಲ್ಲಿ ಮನೆಗಳ್ಳತನ ಹೆಚ್ಚಿರುತ್ತವೆ.

‘ಪಾರ್ದಿ’ ಗ್ಯಾಂಗ್‌ಗೆ ಶಬ್ದವಾಗದ ರೀತಿ ಕಳ್ಳತನ ನಡೆಸುವುದು ಕರಗತವಾಗಿದೆ. ಇದರಿಂದ ಮಹಡಿಯಲ್ಲಿ ಮಲಗಿದ್ದವರಿಗೂ ತಮ್ಮ ಮನೆ ಕಳವಾಗುವುದು ಗೊತ್ತಾಗಲ್ಲ.

* ಕಳ್ಳತನ ತಡೆಗಟ್ಟಲು ಪೊಲೀಸರು ತೆಗೆದುಕೊಂಡಿರುವ ಕ್ರಮಗಳೇನು ?

ಜಿಲ್ಲಾ ವ್ಯಾಪ್ತಿಯ ಪ್ರತಿ ಹಳ್ಳಿಯಲ್ಲೂ ಕಾನ್‌ಸ್ಟೆಬಲ್‌ ಬೀಟ್‌ ಬಿಗಿಗೊಳಿಸಲಾಗಿದೆ. ಎಲ್ಲೆಡೆಯೂ ಈ ಬಾರಿ ಡಂಗೂರ ಸಾರಿಸಿ ಎಚ್ಚರದಿಂದಿರುವಂತೆ ಮನವಿ ಮಾಡಿಕೊಳ್ಳಲಾಗಿದೆ. ಹಳ್ಳಿ–ಹಳ್ಳಿಯಲ್ಲೂ ಕರಪತ್ರ ಹಂಚಿದ್ದೇವೆ.

ಗ್ರಾಮೀಣ ಪ್ರದೇಶದಲ್ಲಿ ಆಟೊಗಳಿಗೆ ಮೈಕ್‌ ಕಟ್ಟಿಕೊಂಡು ಕಳ್ಳತನದ ಕುರಿತಂತೆ ಎಚ್ಚರದಿಂದಿರುವಂತೆ ಘೋಷಣೆ ಮೊಳಗಿಸಿದ್ದೇವೆ. ಪ್ರತಿ ಪೊಲೀಸ್ ಠಾಣೆಯ ಪಿಎಸ್‌ಐ ಖುದ್ದು ರಾತ್ರಿ ಗಸ್ತು ನಡೆಸಿದ್ದಾರೆ. ಸಿಂದಗಿ–ಇಂಡಿ ತಾಲ್ಲೂಕಿನ ಗಡಿಯಲ್ಲಿ ಏಳೆಂಟು ಚೆಕ್‌ಪೋಸ್ಟ್‌ ನಿರ್ಮಿಸಿದ್ದು, ವಾಹನ ತಪಾಸಣೆ ನಡೆಸಿದ್ದೇವೆ.

* ಜನರಿಗೆ ಸಲಹೆ ?

ಅನುಮಾನಾಸ್ಪದ ವ್ಯಕ್ತಿಗಳು ಕಾಣುತ್ತಿದ್ದಂತೆ ಪೊಲೀಸ್ ಕಂಟ್ರೋಲ್‌ ರೂಂ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಬೇಸಿಗೆಯ ಝಳ ತಾಳಲಾರದೆ ಮನೆ ಮಂದಿ ಎಲ್ಲರೂ ಮಹಡಿ ಮೇಲೆ ಮಲಗುವ ಬದಲು, ಒಂದಿಬ್ಬರು ಮನೆಯೊಳಗೆ ಮಲಗುವುದು ಒಳ್ಳೆಯದು. ಮನೆಯೊಳಗೆ ಯಾರಾದರೂ ಇದ್ದರೆ ‘ಪಾರ್ದಿ’ ಗ್ಯಾಂಗ್‌ ಕಳ್ಳತನಕ್ಕಾಗಿ ಅಂಥಹ ಮನೆ ಪ್ರವೇಶಿಸಲ್ಲ.

* ಕಳ್ಳತನ ನಿರ್ಮೂಲನೆ ಸಾಧ್ಯವಿಲ್ಲವಾ..?

ಹಿಂದಿನ ನಾಲ್ಕೈದು ವರ್ಷಗಳ ಅಪರಾಧ ಚಟುವಟಿಕೆಗಳ ಅಂಕಿ–ಅಂಶ ಪರಿಶೀಲಿಸಿದರೆ, ಈ ವರ್ಷ ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗಿವೆ. ಕೆಲವೊಂದು ಗ್ಯಾಂಗ್‌ಗಳು ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದು, ಇವರು ಒಂದೆಡೆ ನೆಲೆ ನಿಲ್ಲಲ್ಲ. ವಿವಿಧ ರಾಜ್ಯಗಳಲ್ಲಿ ಸಂಚರಿಸಿ ಕಳ್ಳತನಗೈಯುತ್ತಾರೆ.

ಕಳವು ಮಾಡಿದ್ದು ಯಾರು ಎಂಬುದು ಗೊತ್ತಾದರೂ; ಬಂಧಿಸಲು ಆಗಲ್ಲ. ಇಂದು ಒಂದೂರು. ನಾಳೆ ಮತ್ತೊಂದೂರು. ಹಿಂಗೆ ನಿತ್ಯವೂ ಒಂದೊಂದು ಕಡೆ ಕಳ್ಳತನ ಮಾಡಿಕೊಂಡೇ ಸಂಚರಿಸುತ್ತಾರೆ.

ಪ್ರಸ್ತುತ ಸ್ಥಳೀಯ ಕಳ್ಳರ ಅಪರಾಧ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದೇವೆ. ಅಂತರರಾಜ್ಯ ಕಳ್ಳರು, ದರೋಡೆಕೋರರದ್ದೇ ಸಮಸ್ಯೆಯಾಗಿದೆ. ಅವರು ಸಿಕ್ಕುತ್ತಾರೆ. ಬಂಧಿಸಿ ಕ್ರಮ ತೆಗೆದುಕೊಳ್ಳುತ್ತೇವೆ.

* ಸುಬಾಹು ಕುರಿತಂತೆ..?

ವರ್ಷದ ಆರಂಭದಲ್ಲೇ ವಿಜಯಪುರ ನಗರ ವ್ಯಾಪ್ತಿಯಲ್ಲಿ ‘ಸುಬಾಹು’ ಆರಂಭಿಸಿದ್ದೇವೆ. ಇದು ಅನುಷ್ಠಾನಗೊಂಡ ಬಳಿಕ ನಗರದಲ್ಲಿನ ಅಪರಾಧ ಚಟುವಟಿಕೆ ಬಹುತೇಕ ನಿಯಂತ್ರಣದಲ್ಲಿವೆ.

ನಿತ್ಯ ರಾತ್ರಿ 11ರಿಂದ ನಸುಕಿನ 5 ಗಂಟೆಯವರೆಗೂ, ರಾತ್ರಿ ಗಸ್ತು ಪಾಳಿಯ ಕಾನ್‌ಸ್ಟೆಬಲ್‌ಗಳು ನಗರದಲ್ಲಿನ 400ಕ್ಕೂ ಹೆಚ್ಚು ಪಾಯಿಂಟ್‌ಗಳಿಗೆ ಭೇಟಿ ನೀಡಲೇಬೇಕು. ಇದು 17 ಸಿ.ಸಿ. ಟಿವಿ ಕ್ಯಾಮೆರಾದಲ್ಲಿ ದಾಖಲಾಗುತ್ತದೆ. ಜತೆಗೆ ಬೀಟ್‌ ಹಾಜರಿಯೂ ಸುಬಾಹುವಿನ ತಂತ್ರಾಂಶದಲ್ಲಿ ದಾಖಲಾಗುತ್ತದೆ.

ನಗರ ವ್ಯಾಪ್ತಿಯಲ್ಲಿ ಇನ್ನಷ್ಟು ಕ್ಯಾಮೆರಾ ಕೂರಿಸಲಿದ್ದೇವೆ. ನಿತ್ಯವೂ ಈ ವರದಿಯನ್ನು ನಾನೇ ಪರಿಶೀಲಿಸಿ, ಮಾನಿಟರಿಂಗ್ ಮಾಡುತ್ತಿರುವೆ. ಬೀಟ್‌ಗೆ ಗೈರಾದವರಿಗೆ ಕಠಿಣ ಎಚ್ಚರಿಕೆ ನೀಡುವೆ. ಪುನರಾವರ್ತನೆಯಾದರೆ ಕ್ರಮ ತೆಗೆದುಕೊಳ್ಳುವೆ.

ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಪಿಎಸ್‌ಐಗಳು ಕಡ್ಡಾಯವಾಗಿ ರಾತ್ರಿ ಗಸ್ತು ನಡೆಸಲೇಬೇಕು. ಮಧ್ಯರಾತ್ರಿ ಒಂದು ಗಂಟೆ ವೇಳೆಗೆ ತಮ್ಮ ಮೊಬೈಲ್‌ನಿಂದ ಜಿಪಿಎಸ್ ಲೋಕೇಶನ್‌ ಅಪ್‌ಡೇಟ್‌ ಮಾಡಬೇಕು. ಇಂಥಹ ಹಲವು ಬಿಗಿ ಕ್ರಮ ಕೈಗೊಂಡಿರುವುದರಿಂದ ಈ ವರ್ಷ ಅಪರಾಧ ಚಟುವಟಿಕೆ ಕಡಿಮೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.