ADVERTISEMENT

ಮುಂಗಾರು ಬೆಳೆಹಾನಿ ಪರಿಹಾರ ಧನ ಮಂಜೂರು:ಆಧಾರ್‌–ಬ್ಯಾಂಕ್‌ ವಿವರ ಸಲ್ಲಿಕೆಗೆ ಸೂಚನೆ

2018ನೇ ಸಾಲಿನ ಮುಂಗಾರು ಬೆಳೆ

​ಪ್ರಜಾವಾಣಿ ವಾರ್ತೆ
Published 8 ಮೇ 2019, 14:50 IST
Last Updated 8 ಮೇ 2019, 14:50 IST

ವಿಜಯಪುರ:ಜಿಲ್ಲೆಯ 1,87,099 ಹೆಕ್ಟೇರ್‌ನಲ್ಲಿನ ಮುಂಗಾರು ಬೆಳೆ 2018ರಲ್ಲಿ ಹಾನಿಯಾಗಿದ್ದು, ಸರ್ಕಾರದ ನಿರ್ದೇಶನದಂತೆ ಪರಿಹಾರ ಧನವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲು, ಸಂಬಂಧಿಸಿದ ಫಲಾನುವಿಗಳು ಈ ಕೂಡಲೇ ತಮ್ಮ ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ವಿವರವನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ತಿಳಿಸಿದ್ದಾರೆ.

ಆಧಾರ್‌ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಹೊಂದಾಣಿಕೆಯಾಗದ ಫಲಾನುಭವಿಗಳ ಆಧಾರ್‌ ಮತ್ತು ಬ್ಯಾಂಕ್ ಸಂಖ್ಯೆ ಹೊಂದಾಣಿಕೆ ಮಾಡಿ, ಬೆಳೆ ಹಾನಿ ಪರಿಹಾರ ಧನವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕಿದೆ. ಕೆಲ ಫಲಾನುಭವಿಗಳ ಆಧಾರ್‌ ಮತ್ತು ಬ್ಯಾಂಕ್ ಖಾತೆಯ ಸಂಖ್ಯೆ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಇರದ ಕಾರಣ ಈ ಕಾರ್ಯ ವಿಳಂಬವಾಗಿದೆ ಎಂದಿದ್ದಾರೆ.

ವಿಜಯಪುರ ತಾಲ್ಲೂಕಿನಲ್ಲಿ 7099 ಫಲಾನುಭವಿಗಳ ಆಧಾರ್‌ ಮತ್ತು ಬ್ಯಾಂಕ್ ಖಾತೆಯ ಸಂಖ್ಯೆ ಹೊಂದಾಣಿಕೆಯಾಗಿಲ್ಲ. ಇದೇ ರೀತಿ ಇಂಡಿ–10001, ಸಿಂದಗಿ–16655, ಮುದ್ದೇಬಿಹಾಳ–7556, ಬಬಲೇಶ್ವರ–4239, ಚಡಚಣ–4318, ತಾಳಿಕೋಟೆ–3551 ಹಾಗೂ ತಿಕೋಟಾ ತಾಲ್ಲೂಕಿನ 2990 ಸೇರಿದಂತೆ ಒಟ್ಟು 56,409 ಫಲಾನುಭವಿಗಳ ಸಂಖ್ಯೆ ಹೊಂದಾಣಿಕೆಯಾಗುತ್ತಿಲ್ಲ. ಇದರಿಂದ ಪರಿಹಾರ ಧನ ವಿತರಣೆಗೆ ವಿಳಂಬವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ರೈತರು ತಾವು ಜಮೀನಿನಲ್ಲಿ ಬೆಳೆದಿರುವ ಮುಂಗಾರು ಬೆಳೆ ಹಾನಿಯಾಗಿದ್ದಲ್ಲಿ, ತಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಬಳಿಯಿರುವ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತ್ರಿಪಡಿಸಿಕೊಂಡು, ಸದರಿ ಗ್ರಾಮ ಲೆಕ್ಕಾಧಿಕಾರಿಗೆ ಆಧಾರ್‌ ಸಂಖ್ಯೆ, ಇದನ್ನು ಬಳಸಲು ಒಪ್ಪಿಗೆ ಪತ್ರ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಈ ಕೂಡಲೇ ಪೂರೈಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.