
ಮುದ್ದೇಬಿಹಾಳ: ಪಟ್ಟಣದ ಹೊರವಲಯದ ಕುಂಟೋಜಿ ರಸ್ತೆ ಪಕ್ಕದಲ್ಲಿರುವ ಬಸವ ಇಂಟರ್ ನ್ಯಾಷನಲ್ ಸ್ಕೂಲ್ (ಬಿಐಎಸ್)ನ ವಿದ್ಯಾರ್ಥಿಗಳು ಗೋವಾದಲ್ಲಿ ಯುಥ್ ಗೇಮ್ಸ್ ಕೌನ್ಸಿಲ್ ಆಫ್ ಇಂಡಿಯಾ ಆಶ್ರಯದಲ್ಲಿ ನಡೆದ 5ನೇ ರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಸಾಧನೆ ಮಾಡಿ ಮೇ ತಿಂಗಳಲ್ಲಿ ನೇಪಾಳ ದೇಶದಲ್ಲಿ ನಡೆಯಲಿರುವ ಅಂತರ ರಾಷ್ಟ್ರೀಯ ಕ್ರೀಡಾಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ತಂಡದ ಪರವಾಗಿ ಅಂಡರ್ ಟೆನ್ ವಿಭಾಗದಲ್ಲಿ ಆಡಿದ ಶಾಲೆಯ 3ನೇ ತರಗತಿಯ ವಿದ್ಯಾರ್ಥಿ ಮೊಹ್ಮದಜಿಶಾನ್ ಸೂರಜ್ ರಿಸಾಲ್ದಾರ್ 100 ಮೀಟರ್ ಓಟವನ್ನು 15 ಸೆಕೆಂಡ್‌ಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಪಡೆದಿದ್ದಾನೆ.
ಬಾಲಕರ ವಿಭಾಗದಲ್ಲಿ ವಿದ್ಯಾರ್ಥಿ ಉಮರ್ ಢವಳಗಿ ನಾಯಕತ್ವದ ಕಬಡ್ಡಿ ತಂಡವು ಗೋವಾ, ತೆಲಂಗಾಣ ಎದುರಿಸಿ ಅಂತಿಮ ಹಣಾಹಣಿಯಲ್ಲಿ ತಮಿಳುನಾಡು ವಿರುದ್ಧ ಜಯ ಸಾಧಿಸಿ ಪ್ರಥಮ ಸ್ಥಾನ ಗಳಿಸಿ. ಗೋಲ್ಡ್ ಮೆಡಲ್ ಮುಡಿಗೇರಿಸಿಕೊಂಡರು. ಬಾಲಕಿಯರ ವಿಭಾಗದಲ್ಲಿ ಎರಡು ಕಬಡ್ಡಿ ತಂಡಗಳು ಗೋಲ್ಡ್ ಮೆಡಲ್‌ನೊಂದಿಗೆ ಪ್ರಥಮ ಸ್ಥಾನ ಪಡೆದವು.
ಶನಿವಾರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಮಕ್ಕಳಿಗೆ ತರಬೇತಿ ನೀಡಿದ ಕೋಚ್, ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಲ್.ಭಜಂತ್ರಿ ಅವರನ್ನು ಗೌರವಿಸಲಾಯಿತು. ಶಾಲೆಯ ಪ್ರಾಂಶುಪಾಲರಾದ ಪ್ರಭಾ ಚಿನಿವಾರ ಮಾತನಾಡಿದರು.
ಶಾಲಾ ಆಡಳಿತ ಮಂಡಳಿಯ ಚೇರ್ಮನ್ ಶಿವಕುಮಾರ ಹರ್ಲಾಪುರ, ಕೋಚ್ ಎಸ್.ಎಲ್.ಭಜಂತ್ರಿ, ಪುರಸಭೆ ಮಾಜಿ ಸದಸ್ಯ ರಿಯಾಜ್ ಢವಳಗಿ, ಪಾಲಕರ ಪ್ರತಿನಿಧಿಗಳು, ಶಾಲೆಯ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.