ವಿಜಯಪುರ: ‘ಕೇಂದ್ರ ಸರ್ಕಾರ ಸಹಕಾರ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ ಯೋಜನೆ ರೂಪಿಸಿ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರದ ಮೊಂಡುತನದಿಂದ ರಾಜ್ಯದ ಸಹಕಾರ ಸಕ್ಕರೆ ಕಾರ್ಖಾನೆಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆರೋಪಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಸಹಕಾರ ಸಕ್ಕರೆ ಕಾರ್ಖಾನೆಗಳು ಸಂಕಷ್ಟದಲ್ಲಿವೆ. ಇವುಗಳಿಗೆ ಕೇಂದ್ರ ಸರ್ಕಾರ ನೀಡುವ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯ ಸಿಕ್ಕರೆ ಸಹಕಾರಿಯಾಗಲಿದೆ. ಇದಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
‘ನೆರೆಯ ಮಹಾರಾಷ್ಟ್ರ ಸರ್ಕಾರವು ಕೇಂದ್ರದ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡಿದ್ದು, ಸುಮಾರು ₹4 ಸಾವಿರ ಕೋಟಿಗೂ ಅಧಿಕ ಸಾಲ ಅಲ್ಲಿಯ ಸಹಕಾರ ಸಕ್ಕರೆ ಕಾರ್ಖಾನೆಗಳು ಪಡೆದುಕೊಂಡು, ಪುನಶ್ಚೇತನಗೊಂಡಿವೆ’ ಎಂದರು.
‘ಜಿಲ್ಲೆಯಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರದ ಯೋಜನೆಯಿಂದ ಅನುಕೂಲವಾಗಿವೆ. ಈ ನಿಟ್ಟಿನಲ್ಲಿ ಜಿಲ್ಲಾಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಕ್ಕರೆ ಸಹಕಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಶಾಸಕ ಯಶವಂತ ರಾಯಗೌಡ ಪಾಟೀಲ, ನೆರೆಯ ಬೀಳಗಿ ಶಾಸಕ ಜೆ.ಟಿ.ಪಾಟೀಲ ಅವರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಕೇಂದ್ರದ ಸಾಲದ ನೆರವು ಪಡೆಯಲು ಅನುಕೂಲ ಮಾಡಬೇಕು. ಇಲ್ಲವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.
‘ನಂದಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ ಅವರು ಕೇಂದ್ರ ಸರ್ಕಾರ ನೀಡುವ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ದೊರಕಿಸಿಕೊಡುವಂತೆ ಜಿಲ್ಲೆಯ ಸಚಿವರು, ಶಾಸಕರ ಮೇಲೆ ಒತ್ತಡ ಹೇರಬೇಕು’ ಎಂದರು.
‘ನಂದಿ ಸಹಕಾರ ಕಾರ್ಖಾನೆಯಲ್ಲಿ ಈ ಹಿಂದೆ ಹಗರಣ ನಡೆದಿದೆ ಎಂಬುದು ಕೇವಲ ಚುನಾವಣಾ ಪ್ರಚಾರಕ್ಕೆ ಸೀಮಿತ. ಅಲ್ಲಿ ಯಾವುದೇ ಹಗರಣ ನಡೆದಿಲ್ಲ. ಹಿಂದಿನ ಅಧ್ಯಕ್ಷರಾದ ಶಶಿಕಾಂತಗೌಡ ಅವರು ಕಾರ್ಖಾನೆ ಅಭಿವೃದ್ಧಿಗಾಗಿ ತೆಗೆದುಕೊಂಡ ನಿರ್ಧಾರದಲ್ಲಿ ತಪ್ಪುಗಳಾಗಿರಬಹುದೇ ಹೊರತು, ಭ್ರಷ್ಟಾಚಾರವಾಗಿಲ್ಲ’ ಎಂದು ಸಮರ್ಥಿಸಿಕೊಂಡರು.
ಬಿಜೆಪಿ ಮುಖಂಡರಾದ ಸಂಜಯ ಪಾಟೀಲ ಕನಮಡಿ, ಈರಣ್ಣ ರಾವೂರ ಇದ್ದರು.
ಸಚಿವ ಶಿವಾನಂದ ಪಾಟೀಲ ನನ್ನ ಒಂದು ಕಾಲದ ರಾಜಕೀಯ ಗುರುಗಳು. ಇದೀಗ ಅವರ ಮತ ಕ್ಷೇತ್ರದ ನಿಡಗುಂದಿ ಪಟ್ಟಣ ಪಂಚಾಯಿತಿ ವಾರ್ಡ್‌ವೊಂದಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ನಾನೇ ಗೆಲ್ಲಿಸಿಕೊಂಡು ಬಂದಿದ್ದೇನೆ–ಗುರುಲಿಂಗಪ್ಪ ಅಂಗಡಿ ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.