ADVERTISEMENT

ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ: ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2023, 14:33 IST
Last Updated 20 ನವೆಂಬರ್ 2023, 14:33 IST
<div class="paragraphs"><p>ಲಕ್ಷ್ಮಣ ಸವದಿ</p></div>

ಲಕ್ಷ್ಮಣ ಸವದಿ

   

ವಿಜಯಪುರ: ಬಿಜೆಪಿ ಮನೆಯೊಂದು ಮೂರು ಬಾಗಿಲು ಅಗಿದೆ, ಒಬ್ಬರ ಮುಖ‌ ಮತ್ತೊಬ್ಬರು ನೋಡದಂತಾಗಿದೆ. ಬಿಜೆಪಿಯಲ್ಲಿ ಆಂತರಿಕ ಕಲಹ ಬಹಳ ಇದೆ. ಆದರೆ, ಅದು ಯಾವತ್ತೂ ಸರಿ ಆಗಲ್ಲ, ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಭವಿಷ್ಯ ನುಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮೊದಲಿಗೆ ತಮ್ಮ ಪಕ್ಷದಲ್ಲಿರುವ ಅವ್ಯವಸ್ಥೆಯನ್ನು ಸರಿ ಮಾಡಿಕೊಳ್ಳಲಿ, ಅವರ ತಾಟಿನಲ್ಲಿ ಹೆಗ್ಗಣ ಬಿದ್ದಿದೆ, ನಮ್ಮ ತಾಟಿನಲ್ಲಿ ನೊಣ ಬಿದ್ದಿದೆ ಎಂದು ಹೇಳುತ್ತಿದ್ದಾರೆ ಎಂದು ಕುಟುಕಿದರು.

ADVERTISEMENT

ಬಿಜೆಪಿ ಶಾಸಕಾಂಗ ಸಭೆಯಲ್ಲಿ ಏನೇನು ಆಗಿದೆ ಎಂಬುದನ್ನು ವಿಜಯೇಂದ್ರ ನೆನಪು ಮಾಡಿಕೊಳ್ಳಲಿ, ಅವರಿಗೆ ನಮ್ಮ ಬಗ್ಗೆ ಮಾತನಾಡುವ ಅವಶ್ಯಕತೆಯಿಲ್ಲ ಎಂದರು.

ಕಾಂಗ್ರೆಸ್ ನಲ್ಲಿ ಎಲ್ಲರೂ ಒಗ್ಗಟ್ಟಿಗಿದ್ದೇವೆ, ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಜನರು ಸಹ ನಮ್ಮ ಸರ್ಕಾರದಿಂದ ನೀಡಿರೋ 5 ಗ್ಯಾರಂಟಿಗಳಿಂದ ತೃಪ್ತಿಯಾಗಿದ್ಧಾರೆ. ಇದನ್ನು ನೋಡಲು ಬಿಜೆಪಿಯವರಿಗೆ ಆಗುತ್ತಿಲ್ಲ ಎಂದರು.

ಕಾಂಗ್ರೆಸ್‌ ಶಾಸಕರನ್ನು ಬಿಜೆಪಿ‌ಗೆ ಸೆಳೆಯುವ ವಿಚಾರವಾಗಿ ಮಾತನಾಡಿದ ಸವದಿ, ಜನವರಿ 26 ಮುಗಿಯಲಿ, ಯಾರು ಯಾರನ್ನು ಸೆಳೆಯುತ್ತಾರೆ ನೋಡೋಣ ಎಂದರು.

ಬಿಜೆಪಿಗೆ ಸೇರಲು ನಿಮಗೆ ವಿಜಯೇಂದ್ರ ಕರೆ ಮಾಡಿದ್ದಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೆಣ್ಣು ಗಂಡಿನ ವ್ಯವಹಾರ ನಮ್ಮಲ್ಲಿ ಅವರಲ್ಲಿ ಏನೂ ಇಲ್ಲ, ಈ ಸಂದರ್ಭದಲ್ಲಿ ಕೊಡತಕ್ಕಂತ ಸಂದರ್ಭ ಇಲ್ಲ. ರಾಜಕೀಯವಾಗಿ ಮಾತನಾಡೋ ಪ್ರಶ್ನೆ ಇಲ್ಲ, ಅದು ಉದ್ವವವಾಗಲ್ಲ ಎಂದರು.

ನಾವು ರಾಮಕೃಷ್ಣ ಹೆಗಡೆ ಗರಡಿಯಲ್ಲಿದ್ದವರು. ಹೆಗಡೆ ಅವರು ಎಲ್ಲಿರುತ್ತಿದ್ದರೋ ನಾವು ಅಲ್ಲಿರುತ್ತಿದ್ದೇವು. ಹೆಗಡೆ ಅವರು ಲೋಕಶಕ್ತಿ‌ ಪಕ್ಷ ಮಾಡಿದಾಗ ನಾವೂ ಅವರೊಂದಿಗೆ ಇದ್ದೇವು. ಅವರಿಗೆ ಅನಾರೋಗ್ಯವಾದ ಸಮಯದಲ್ಲಿ ಆಡ್ವಾನಿಯವರೊಂದಿಗೆ‌ ಚರ್ಚೆ ಮಾಡಿ ನಮ್ಮನ್ನು ರಾಮಕೃಷ್ಣ ಹೆಗಡೆ ಬಿಜೆಪಿಗೆ ಸೇರಿಸಿದರು. ಆಗ ಬಿಜೆಪಿಯಲ್ಲಿದ್ದ ಅನಂತಕುಮಾರ ನಮ್ಮನ್ನು ಚೆನ್ಮಾಗಿ ನೋಡಿಕೊಂಡರು. ಆದರೆ, ಈಗಾ ಆ ಪರಿಸ್ಥಿತಿ ಇಲ್ಲ. ಅಲ್ಲಿ ಒಗ್ಗಟ್ಟು‌ ಮುರಿದು ಹೋಗಿದೆ. ಬಿಜೆಪಿಯಲ್ಲಿ ಈಗಾ ಕುಟುಂಬ ರಾಜಕಾರಣ ಮನೆ ಮಾಡಿದೆ. ಸಿದ್ದಾಂತ, ತತ್ವ ಗಾಳಿಗೆ ತೂರಿ ಹೋಗಿವೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ‌ಬಿಜೆಪಿ ಹಾಗೂ ಜೆಡಿಎಸ್ ಒಗ್ಗೂಡಿದರೆ ಅದರ ಲಾಭ ಕಾಂಗ್ರೆಸ್‌ಗೆ ಆಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.