ADVERTISEMENT

ಬಿಜೆಪಿ ಕಾರ್ಯಾಲಯ; ಕಾರ್ಯಕರ್ತರಿಗೆ ದೇವಾಲಯ

ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 13:11 IST
Last Updated 14 ಆಗಸ್ಟ್ 2020, 13:11 IST
ವಿಜಯಪುರ ನಗರದ ಗ್ಯಾಂಗ್‌ ಬಾವಡಿ ಬಳಿ ಬಿಜೆಪಿ ಜಿಲ್ಲಾ ನೂತನ ಕಾರ್ಯ ಭವನ ನಿರ್ಮಾಣಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಭೂಮಿ ಪೂಜೆ ನೆರವೇರಿಸಿದರು
ವಿಜಯಪುರ ನಗರದ ಗ್ಯಾಂಗ್‌ ಬಾವಡಿ ಬಳಿ ಬಿಜೆಪಿ ಜಿಲ್ಲಾ ನೂತನ ಕಾರ್ಯ ಭವನ ನಿರ್ಮಾಣಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಭೂಮಿ ಪೂಜೆ ನೆರವೇರಿಸಿದರು   

ವಿಜಯಪುರ: ಜಿಲ್ಲೆಯಲ್ಲಿಬಿಜೆಪಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಇಂದು ಶಿಲಾನ್ಯಾಸ ನೆರವೇರಿಸುತ್ತಿರುವುದು ಸುವರ್ಣ ಅಕ್ಷರದಲ್ಲಿ ಬರೆದಿಡುವುದಂತಾಗಿದೆ. ಪಕ್ಷದ ಸ್ವಂತ ಕಾರ್ಯಾಲಯವು ಬಿಜೆಪಿ ಕಾರ್ಯಕರ್ತರಿಗೆ ದೇವಸ್ಥಾನವಿದ್ದಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನಗರದ ಕೆಎಸ್‌ಆರ್‌ಟಿಸಿ ಡಿಪೋ ಸಮೀಪ ಗ್ಯಾಂಗ್‌ ಬಾವಡಿ ಬಳಿ ಬಿಜೆಪಿ ಜಿಲ್ಲಾ ನೂತನ ಕಾರ್ಯ ಭವನ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಅವರುಮಾತನಾಡಿದರು.

ಈ ಕಟ್ಟಡ ನಿರ್ಮಾಣಕ್ಕೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಧನಸಹಾಯ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ADVERTISEMENT

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಜಿಲ್ಲೆಯಲ್ಲಿ ಬಹಳ ಮಂದಿ ನಾಯಕರಿದ್ದರೂ ನಮಗೆ ಇಲ್ಲಿಯವರೆಗೆ ಒಂದು ಸ್ವಂತ ಕಟ್ಟಡ ಇರದಿರುವ ಕೊರಗಿತ್ತು. ಈಗ ಅದು ನಿರಾಳವಾಗಿದೆ. ಕಟ್ಟಡಕ್ಕೆ ನನ್ನ ಪುತ್ರ ತನ್ನ ತಾಯಿಯ ನೆನಪಿನಲ್ಲಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾನೆ ಎಂದರು.

ಪ್ರಾಸ್ತಾವಿಕವಾಗಿಮಾತನಾಡಿದ ಚಂದ್ರಶೇಖರ ಕವಟಗಿ, ಕಾರ್ಯಾಲಯ ಕಟ್ಟಡ ಸುಮಾರು 12 ಸಾವಿರದಿಂದ 15 ಸಾವಿರ ಚದರ ಅಡಿ ವಿಸ್ತೀರ್ಣವಾಗಿದ್ದು, ಮೂರು ಮಹಡಿ ಹೊಂದಿದೆ. ಇದರಲ್ಲಿ ಡಿಜಿಟಲ್ ಲೈಬ್ರರಿ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ. ಕಾರ್ಯಕರ್ತರಿಗೆ ಪ್ರಶಿಕ್ಷಣಕ್ಕಾಗಿ ಸಭಾಂಗಣ, ಮಾಧ್ಯಮ ಸಂವಾದ ಸಭಾಂಗಣ, ಸಾರ್ವಜನಿಕ ಅಹವಾಲು ಆಲಿಸಲು ಉಪಯುಕ್ತವಾಗುವಂತೆ ಜಿಲ್ಲೆಯ ಸಂಸದರು, ಶಾಸಕರಿಗೆ ಪ್ರತ್ಯೇಕ ಸಂವಾದ ಕೊಠಡಿ, ಸಂಘಟನೆಯ ಪ್ರಮುಖರಿಗೆ, ಪೂರ್ಣಾವಧಿ ಕಾರ್ಯಕರ್ತರಿಗಾಗಿ ವಸತಿ ವ್ಯವಸ್ಥೆ ಒಳಗೊಂಡಿರುತ್ತದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ಬಿಜೆಪಿ ಕಾರ್ಯಕರ್ತರಿಗೆ ಕಾರ್ಯಾಲಯ ಕಚೇರಿ ಎಂದರೆ ಅದೊಂದು ಭಾವನಾತ್ಮಕ ಶ್ರದ್ಧಾ ಕೇಂದ್ರವಾಗಲಿದೆ ಎಂದು ಹೇಳಿದರು.

ಕೇವಲ ಇಟ್ಟಿಗೆ, ಮರಳು ಸಿಮೆಂಟ್‌ ಮಿಶ್ರಿತ ಜಡ ಗೋಡೆಗಳಿಂದಾದ ಆಸರೆ ಮಾತ್ರವಲ್ಲದೆ, ಅವರ ಭಾವನೆಗಳ ದೇವ ಮಂದಿರ ಎನ್ನುವ ಭಾವನೆ ನಮ್ಮದು ಎಂದು ಹೇಳಿದರು.

ಕಾರ್ಯಾಲಯವು ಕಾರ್ಯಕರ್ತರಿಗೆ ನಾಯಕತ್ವದ ಮಾರ್ಗದರ್ಶನ ನೀಡುವ ಕೇಂದ್ರವಾಗಲಿದೆ. ಇದರ ನಿರ್ಮಾಣಕ್ಕಾಗಿ ತಗುಲುವ ವೆಚ್ಚವನ್ನು ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಜಿಲ್ಲಾ ಕಾರ್ಯಾಲಯ ಕಟ್ಟಡ ನಿಧಿ ಅರ್ಪಣೆಯ ಮೂಲಕ ಸಂಗ್ರಹಿಸುತ್ತಿದೆ ಎಂದರು.

ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ವಿಜುಗೌಡ ಪಾಟೀಲ, ದಯಾಸಾಗರ ಪಾಟೀಲ, ಪ್ರಭುಗೌಡ ದೇಸಾಯಿ, ಶ್ರೀಹರಿ ಗೊಳಸಂಗಿ, ಗೂಳಪ್ಪ ಶೆಟಗಾರ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗುರ, ಶಿವರುದ್ರ ಬಾಗಲಕೋಟ, ವಿವೇಕಾನಂದ ಡಬ್ಬಿ, ಮಾಧ್ಯಮ ಪ್ರಮುಖ ವಿಜಯ ಜೋಶಿ ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಕೋಶಾಧ್ಯಕ್ಷರ ಭೀಮಾಶಂಕರ ಹದನೂರ ದಂಪತಿ ಹೋಮ ಹವನ ಪೂಜೆ ಕಾರ್ಯಕ್ರಮ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.